ಭಾರತೀನಗರ: ಗಣಪತಿ ಪ್ರಸಾದ ಸ್ವೀಕರಿಸಿ ಮನೆಗೆ ಹಿಂತಿರುಗುತಿದ್ದ ಅಜ್ಜಿ ಮತ್ತು ಒಂದು ವರ್ಷದ ಮಗು (ಮೊಮ್ಮಗ) ಕಾರು ಡಿಕ್ಕಿಯಾಗಿ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ಮದ್ದೂರು-ಮಳವಳ್ಳಿ ಹೆದ್ದಾರಿಯ ಹುಣ್ಣನದೊಡ್ಡಿ ಬಳಿ ಭಾನುವಾರ ರಾತ್ರಿ 9 ಗಂಟೆ ವೇಳೆ ಸಂಭವಿಸಿದೆ.
ಹುಣ್ಣನದೊಡ್ಡಿಯ ನಿವಾಸಿ ಸಾಕಮ್ಮ (65), ಒಂದು ವರ್ಷ ಮಗು ಧನಿಕ ಎಸ್.ಗೌಡ ಸಾವನ್ನಪ್ಪಿದ್ದು, ಗಾಯಗೊಂಡಿರುವ ಮೂರು ವರ್ಷದ ನಂದನ್.ಎಸ್ ಗೌಡನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುಣ್ಣನದೊಡ್ಡಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಭಾನುವಾರ ಸಂಜೆ ವಿಸರ್ಜನೆ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತಿತ್ತು. ಇದೇ ಗ್ರಾಮದ ಶಂಕರ್ ಮತ್ತು ಅಂಜಲಿ ದಂಪತಿ ಮಕ್ಕಳಾದ ಧನಿಕ ಮತ್ತು ನಂದನ್ ತಮ್ಮ ಅಜ್ಜಿ ಜೊತೆ ಪ್ರಸಾದ ಸ್ವೀಕರಿಸಲು ತೆರಳಿದ್ದರು. ಅಜ್ಜಿ ಸಾಕಮ್ಮ, ಒಂದು ವರ್ಷದ ಮೊಮ್ಮಗುವನ್ನು ಎತ್ತಿಕೊಂಡು, ಮತ್ತೊಂದು ಮಗುವನ್ನು ನಡೆಸಿಕೊಂಡು ಪ್ರಸಾದ ಸ್ವೀಕರಿಸಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಒಂದು ವರ್ಷದ ಮಗು, ಅಜ್ಜಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಂದು ಮಗು ನಂದನ್ ಗಾಯವಾಗಿದೆ. ಕಾರನ್ನು ನಿಲ್ಲಿಸದೇ ಚಾಲಕ ಪರಾರಿಯಾಗಿದ್ದಾನೆ.
ಈ ಹೃದಯ ವಿದ್ರಾವಕ ಘಟನೆಗೆ ಗ್ರಾಮಸ್ಥರು ಕಂಬನಿ ಮಿಡಿದರೆ, ಪ್ರಸಾದ ಸ್ವೀಕರಿಸಿ ಹಿಂದೆ ಬರುತ್ತಿದ್ದ ಮಗುವಿನ ತಾಯಿ ಶಾಕ್ಗೊಳಗಾಗಿ ಕುಸಿದು ಬಿದ್ದಿದ್ದಾರೆ. ಕೆಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಕಾರಿನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: Sagara: ಅಕ್ರಮ ಮದ್ಯ ಮಾರಾಟ… ಆರೋಪಿ ಬಂಧನ