ಚನ್ನರಾಯಪಟ್ಟಣ: ಪ್ರಸಕ್ತ ವರ್ಷ ಭರ್ಜರಿ ಮಳೆಯಾಗಿದ್ದು ತಾಲೂಕಿನಲ್ಲಿ ರಾಗಿ ಸೇರಿದಂತೆ ವಿವಿಧ ಬಗೆಯ ದವಸ ಧಾನ್ಯಗಳು ಸಕಾಲಕ್ಕೆ ರೈತರ ಕೈ ಸೇರಿದ್ದು ಕಟಾವು ಮಾಡುತ್ತಿರುವ ರೈತರ ಪೈಕಿ ಹಲವರು ರಸ್ತೆಯಲ್ಲಿ ಒಕ್ಕಣೆ ಆರಂಭಿಸಿರುವುದರಿಂದ ವಾಹನ ಸಾವರರ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದೆ.
ಸುಗ್ಗಿಯ ಸಂಕ್ರಾಂತಿ ಹಬ್ಬ ಸಮೀಪಿಸುತ್ತಿದ್ದು ತಾಲೂಕಿನಲ್ಲಿ ಭತ್ತ, ರಾಗಿ, ಹುರುಳಿ, ಜೋಳ, ಸೇರಿದಂತೆ ದವಸ ಧಾನ್ಯಗಳ ಒಕ್ಕಣೆ ಕೆಲಸ ಪ್ರಾರಂಭಿಸಿರುವ ರೈತರು. ಒಕ್ಕಣೆಗೆ ಕಣ ಮಾಡಿಕೊಳ್ಳದೆ ರಾಜ್ಯ ಹೆದ್ದಾರಿ ಸೇರಿ ದಂತೆ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ತಮ್ಮ ಕೆಲಸ ಆರಂಭಿಸಿದ್ದಾರೆ. ಇದರಿಂದ ಹಲವು ತೊಂದರೆಗಳು ಉಂಟಾಗುತ್ತಿವೆ. ದ್ವಿಚಕ್ರ ವಾಹನ ಸವಾರರು ಸೇರಿದಂತೆ ಕಾರುಗಳನ್ನು ರಸ್ತೆಯಲ್ಲಿ ಸರಾಗವಾಗಿ ಸಂಚಾರ ಮಾಡಲು ಚಾಲಕರು ಹರಸಾಹಸ ಪಡುವಂತಾಗಿದೆ.
ಪ್ರಮುಖ ರಸ್ತೆಗಳಾವು: ಪ್ರವಾಸಿ ಕೇಂದ್ರಗಳಿಗೆ ತೆರಳುವ ರಸ್ತೆಗಳಾದ ಶ್ರವಣಬೆಳಗೊಳದಿಂದ ಮೇಲುಕೋಟೆ ರಸ್ತೆ, ಶ್ರವಣ ಬೆಳಗೊಳದಿಂದ ಸಾಸಲು ಶ್ರೀ ಕ್ಷೇತ್ರಕ್ಕೆ ತೆರಳುವ ರಸ್ತೆ, ಬಾಗೂರು ಹೋಬಳಿಯಿಂದ ಶ್ರೀ ಕ್ಷೇತ್ರ ನಾಗರನವಿಲೆಗೆ ತೆರಳುವ ರಸ್ತೆ, ಶ್ರವಣಬೆಳಗೊಳ-ನಾಗಮಂಗಲ ರಸ್ತೆ, ಹಿರೀಸಾವೆ-ಕೆಆರ್‌ಪೇಟೆ ರಸ್ತೆ, ಹಾಸನ, ಅರಸೀಕೆರೆ, ಗಂಡಸಿ ಹಾಗೂ ಚನ್ನರಾಯ ಪಟ್ಟಣದಿಂದ ಶ್ರೀ ಕ್ಷೇತ್ರ ಕುಂದೂರು ಮಠಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿ ಒಕ್ಕಣೆಗಾಗಿ ರೈತರು ಹುಲ್ಲು ಹಾಕಿರುತ್ತಾರೆ. ಇನ್ನು ಪ್ರತಿ ಗ್ರಾಮಗಳ ರಸ್ತೆಗಳು ಸಂಪೂರ್ಣ ಕಣವಾಗಿ ಮಾರ್ಪಟ್ಟಿವೆ. ರಸ್ತೆ ತುಂಬೆಲ್ಲಾ ಹುಲ್ಲು ಒಕ್ಕಣೆ: ರಸ್ತೆ ಬದಿ ಹೊಲ-ಗದ್ದೆ ಹೊಂದಿರುವ ರೈತರು ಬೆಳೆಗಳನ್ನು ಕಟಾವು ಮಾಡಿ ರಸ್ತೆ ಅಕ್ಕ-ಪಕ್ಕದಲ್ಲಿ ಮೆದೆ ಮಾಡಿದ್ದಾರೆ. ಇನ್ನು ಹಲವು ರಾಜ್ಯ ಹೆದ್ದಾರಿ ಸೇರಿದಂತೆ ಡಾಂಬರ್ ರಸ್ತೆಯಲ್ಲೆ ಬೆಳೆಗಳನ್ನು ರಾಶಿ ಮಾಡುತ್ತಾ ಒಕ್ಕಣೆ ಕಣ ಮಾಡಿಕೊಂಡಿದ್ದಾರೆ. ವಿವಿಧ ಬೆಳೆ ಇನ್ನಿತರ ಧಾನ್ಯಗಳ ಹುಲ್ಲುಗಳನ್ನು ಮಂಡಿಯುದ್ದಕ್ಕೆ ಹಾಕಿ ಸು ಮಾರು 100 ಮೀಟರ್ ಉದ್ದ ರಸ್ತೆ ತುಂಬೆಲ್ಲಾ ಹಾಕುವುದು ಸಾಮಾನ್ಯವಾಗಿದೆ. ಇದರಿಂದ ನಿತ್ಯವೂ ಸಾವಿ ರಾರು ಸಂಖ್ಯೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು, ಕಾರು, ಜೀಪು, ಆಟೋ ಸೇರಿದಂತೆ ಹಲವು ವಾಹನಗಳ ಸವಾರರು ಸಂಚರಿಸಲು ಹೈರಾಣಾಗಿದ್ದಾರೆ.
ಜೀವ ಕೈಯಲ್ಲಿ ಹಿಡಿದು ವಾಹನ ಚಾಲನೆ: ಕೃಷಿ ಭೂಮಿಯಲ್ಲಿ ಬೆಳೆದ ಪೈರನ್ನು ಒಕ್ಕಣೆ ಮಾಡಲು ಕಣ ನಿರ್ಮಿಸದೆ ರಸ್ತೆಯಲ್ಲಿ ಈ ರೀತಿ ರಾಶಿ ಮಾಡುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾ ಗುವುದಲ್ಲದೇ ವಾಹನ ಸವಾರರು ಹಲವು ತೊಂದರೆಯನ್ನು ಎದುರಿಸುವುದಲ್ಲೆ ಅಪಾಯಕ್ಕೆ ತುತ್ತಾಗುತ್ತಿದ್ದಾರೆ. ರಸ್ತೆ ಮೇಲಿನ ಒಕ್ಕಣೆಯಿಂದಾಗಿ ಸವಾರರು ಹಳ್ಳ ಕೊಳ್ಳಗಳ ಗುಂಡಿ ಬಿದ್ದಿರುವ ರಸ್ತೆ ಬದಿಯನ್ನು ಆಶ್ರಹಿಸುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಚಕ್ರಕ್ಕೆ ದವಸ ಧಾನ್ಯದ ಹುಲ್ಲು ಹಾಗೂ ಕಡ್ಡಿಗಳು ಸುತ್ತಿಕೊಂಡು ಬೆಂಕಿ ಉಂಟಾದರೆ ಮುಂದೇನು ಎಂಬ ಆತಂಕದಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ಕಿರಿ ಕಿರಿಯಲ್ಲಿ ಸಂಚಾರ: ಕೆಲವೆಡೆ ರಸ್ತೆಯ ಎರಡೂ ಬದಿಗಳಲ್ಲಿ ಒಕ್ಕಣೆಯ ಹುಲ್ಲಿನ ರಾಶಿ ಮಾಡಲಾಗಿದೆ. ವಾಹನಗಳಿಗೆ ಬೇರೆ ದಾರಿ ಇಲ್ಲದೆ ಮಂಡಿಯುದ್ಧ ಒಕ್ಕಣೆ ಮಾಡಲಾಗಿರುವ ಹುಲ್ಲಿನ ಮೇಲೆ ಲಘು ವಾಹನಗಳು ಕೂಡ ರಸ್ತೆಯ ಮೇಲೆ ನಿಧಾನವಾಗಿ ಭಯದ ಆತಂಕದಲ್ಲಿ ಚಲಿಸುವಂತ ಅನಿವಾರ್ಯತೆ ಉಂಟಾಗಿದೆ. ಇನ್ನೊಂದೆಡೆ ಕಾರು, ಜೀಪು, ಆಟೋ ಇನ್ನಿತರ ವಾಹನ ಸಂಚರಿ ಸಲು ಚಾಲಕರು ಕಿರಿ ಕಿರಿ ಅನುಭವಿಸುತ್ತಿದ್ದು, ಆರ್ ಟಿಒ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ರೈತರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಹುಲ್ಲಿನ ಮೇಲೆ ಪಯಣಿಸುವ ವೇಳೆ ಬ್ರೇಕ್ ಹಾಕಿದರೆ ಸ್ಕಿಡ್ ಆಗಿ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ.
ಜತೆಗೆ ಕಾರ್, ಜೀಪು ಚಕ್ರದ ತಳದಲ್ಲಿ ಇತರೆ ಯಂತ್ರಕ್ಕೆ ಹುಲ್ಲು ಸುತ್ತುಕೊಂಡಾಗ ಅದನ್ನು ತೆಗೆಯದೆ ಹಾಗೆ ಮುಂದಕ್ಕೆ ಸಾಗಿದರೆ ಬೆಂಕಿ ಅವಘಡ ಸಂಭವಿಸುವ ಸಾಧ್ಯತೆಯಿದೆ ಎಂದು ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
ಬಹುತೇಕ ಹಳ್ಳಿಗಳ ರೈತರಿಗೆ ಒಕ್ಕಣೆ ಮತ್ತು ರಾಶಿ ಮಾಡಲು ಕಣಗಳ ಅಭಾವ ಇರುವುದರಿಂದ ಅನಿವಾರ್ಯವಾಗಿ ರಸ್ತೆಗಳೇ ಕಣವಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಕಣ ನಿರ್ಮಿಸಿ ಕೊಟ್ಟರೆ ರೈತರಿಗೆ ಅನುಕೂಲ ಆಗಲಿದೆ.
-ತಿಪ್ಪೇಗೌಡ. ಡಿಂಕ ಗ್ರಾಮ ರೈತ.
ರಸ್ತೆ ಮೇಲೆ ಕೆಲ ರೈತರು ಈ ರೀತಿ ಒಕ್ಕಣೆ ಮಾಡಿತ್ತಿರುವುದರಿಂದ ದ್ವಿಚಕ್ರ ಹಾಗೂ ಕಾರು ಚಾಲಕರು ಸುಗಮ ಸಂಚಾರ ದುಸ್ತರವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿ ವರ್ಗ ಕ್ರಮಕ್ಕೆ ಮುಂದಾಗಬೇಕು. ಗ್ರಾಪಂ ಅಧಿ ಕಾರಿಗಳು ಪ್ರತಿ ಗ್ರಾಮದಲ್ಲೂ ಎನ್‌ಆರ್‌ಇಜಿ ಮೂಲಕ ಕಣ ನಿರ್ಮಾಣಕ್ಕೆ ಮುಂದಾಗಬೇಕಿದೆ
.-ಪುನಿತ್ ಸ್ವಾಮಿ, ವಾಹನ ಸವಾರ ಚಿಕ್ಕಬಿಳತಿ ಗ್ರಾಮ.
–ಶಾಮಸುಂದರ್ ಕೆ.ಅಣ್ಣೇನಹಳ್ಳಿ