ಕೊರಟಗೆರೆ: ಕೊರಟಗೆರೆ ಬೈಪಾಸ್ ರಸ್ತೆ ಸುರಕ್ಷತೆ ಮತ್ತು ಅಪಘಾತ ತಡೆಗಟ್ಟುವ ಮುನ್ನಚ್ಚರಿಕೆ ನಾಮಫಲಕ ಹಾಗೂ ರಸ್ತೆ ಉಬ್ಬುಗಳ ಬಗ್ಗೆ ಕೆಶಿಪ್ ಮತ್ತು ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಕೊರಟಗೆರೆ ಆರಕ್ಷಕ ವೃತ್ತ ನಿರೀಕ್ಷಕ ನದಾಫ್ ಕೆಶಿಪ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಹೊರವಲಯದ ಮೂಲಕ ಹಾದುಹೋಗುವ ರಾಜ್ಯ ಹೆದ್ದಾರಿಯ ಬೈಪಾಸ್ ರಸ್ತೆಯ ಸುರಕ್ಷತೆ ಪೊಲೀಸ್ ಇಲಾಖೆ, ಪಿಡಬ್ಲ್ಯೂಡಿ ಮತ್ತು ಕೆಶಿಪ್ ಅಧಿಕಾರಿಗಳ ತಂಡ ಜಂಟಿಯಾಗಿ ಬೈಪಾಸ್ ರಸ್ತೆ ಪರಿಶೀಲಿಸಿದ ವೇಳೆ ಮಾತನಾಡಿದರು.
ವಾಹನ ಸವಾರರಿಗೆ ತೊಂದರೆ: ಬೈಪಾಸ್ ರಸ್ತೆಯ ಕಾಮಗಾರಿ ವಿಳಂಬದಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾಮಗಾರಿ ಅಪೂರ್ಣ ಆಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಕೆಶಿಪ್ ರಸ್ತೆಯ ಅಪಘಾತ ಸ್ಥಳಗಳನ್ನು ಮೂರು ಇಲಾಖೆಯ ಅಧಿಕಾರಿ ವರ್ಗ ಜಂಟಿಯಾಗಿ ಅಪಘಾತ ಸ್ಥಳಗಳನ್ನು ಗುರುತಿಸಿರುವ ವರದಿಯನ್ನು ಡಿಸಿಎಂ ಮತ್ತು ಜಿಲ್ಲಾಧಿಕಾರಿಗಳಿಗೆ ಪೊಲೀಸ್ ಇಲಾಖೆ ನೀಡಲಿದೆ ಎಂದು ಹೇಳಿದರು.
ಮೇಲಧಿಕಾರಿಗಳಿಗೆ ಮಾಹಿತಿ: ಕೊರಟಗೆರೆ ಆರಕ್ಷಕ ಉಪನಿರೀಕ್ಷಕ ಮಂಜುನಾಥ ಮಾತನಾಡಿ, ಬೈಪಾಸ್ ರಸ್ತೆಯಲ್ಲಿ ರಸ್ತೆ ಸುರಕ್ಷತೆ ಇಲ್ಲದಿರುವ ಪರಿಣಾಮ ಈಗಾಗಲೇ ಸಾಕಷ್ಟು ಅಪಘಾತಗಳು ನಡೆದಿವೆ. ಪೊಲೀಸ್ ಇಲಾಖೆಯಿಂದ ಈಗಾಗಲೇ ಎರಡು ಬಾರಿ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರೂ ಪ್ರಯೋಜನವಾಗಿಲ್ಲ. ಇನ್ನೊಂದು ವಾರದಲ್ಲಿ ಬೈಪಾಸ್ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
ಇಲ್ಲದಿದ್ದರೆ ಮೇಲಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ ಅವರು, ಬೈಪಾಸ್ ರಸ್ತೆಯಲ್ಲಿ ನಿರ್ಮಾಣ ಮಾಡುತ್ತಿರುವ ಹೈಮಾಸ್ಟ್ ದೀಪ, ರಸ್ತೆ ಉಬ್ಬುಗಳ ಕಾಮಗಾರಿ ವಿಳಂಬವಾಗಿದೆ. ಅಪಘಾತ ನಡೆಯುವ ಸ್ಥಳಗಳಲ್ಲಿ ಎಚ್ಚರಿಕೆ ನಾಮಫಲಕ ಮತ್ತು ರಸ್ತೆ ಲೈಟ್‌ಗಳ ವ್ಯವಸ್ಥೆ ಮಾಡಬೇಕು. ರಸ್ತೆ ಉಬ್ಬುಗಳ ಕಾಮಗಾರಿ ಪ್ರಾರಂಭವಾಗಿ ಹಲವು ದಿನಗಳಾದರೂ ಮುಕ್ತಾಯವಾಗಿಲ್ಲ. ರಸ್ತೆ ಸುರಕ್ಷಣೆ ಮತ್ತು ಅಪಘಾತ ತಡೆಯುವ ನಿಟ್ಟಿನಲ್ಲಿ ಕೆಶಿಪ್ ಅಧಿಕಾರಿಗಳ ತಂಡ ಪೊಲೀಸ್ ಇಲಾಖೆಗೆ ಸಲಹೆ ಪಾಲಿಸಿ ಅಪಘಾತ ತಡೆಯಲು ಸಹಕಾರ ನೀಡಬೇಕು ಎಂದು ಹೇಳಿದರು.
ಕೊರಟಗೆರೆ ಪಟ್ಟಣದ ಬೈಪಾಸ್ ಮೂಲಕ ಹಾದುಹೋಗುವ ಥರಡಿ ಗ್ರಾಮ, ಜಂಪೇನಹಳ್ಳಿ ಕ್ರಾಸ್, ಡಿಗ್ರಿ ಕಾಲೇಜು, ಊರ್ಡಿಗೆರೆ ವೃತ್ತ, ಬೋಡಬಂಡೇನಹಳ್ಳಿ, ಮಲ್ಲೇಶಪುರ ಕ್ರಾಸ್, ಹೊಳವನಹಳ್ಳಿ ರಸ್ತೆ, ಸಿದ್ದೇಶ್ವರ ಕಲ್ಯಾಣ ಮಂಟಪ ಮತ್ತು ತುಂಬಾಡಿ ಕ್ರಾಸಿನಿಂದ ಸಿದ್ದರಬೆಟ್ಟಕ್ಕೆ ಹೋಗುವ ಮಾರ್ಗದ ಬಳಿ ಕೆಶಿಪ್ ಇಲಾಖೆ ರಾಜಣ್ಣ, ಪಿಡಬ್ಲ್ಯೂಡಿ ರಾಘವೇಂದ್ರ ಮತ್ತು ಪೊಲೀಸ್ ಇಲಾಖೆ ನದಾಫ್ ಮತ್ತು ಮಂಜುನಾಥ ಜಂಟಿಯಾಗಿ ಪರಿಶೀಲನೆ ನಡೆಸಿದರು.