ಚಿಂಚೋಳಿ: ತಾಲೂಕಿನ ಫೀರೋಜಾ ಬಾದ-ಕಮಲಾಪುರ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆಯಾಗದೇ ರಸ್ತೆ ಅಭಿವೃದ್ಧಿ ಕೆಲಸ ಸ್ಥಗಿತವಾಗಿದೆ.
ತಾಲೂಕಿನ ಸಾಸರಗಾಂವ, ರಾಣಾಪುರ, ಚಂದನಕೇರಾ, ಪಂಗರಗಾ, ಚೇಂಗಟಾ ಗ್ರಾಮಗಳ ಮಾರ್ಗವಾಗಿ ಕಮಲಾಪುರ ತಾಲೂಕಿಗೆ ರಸ್ತೆ ಸಂಪರ್ಕ ಕಲ್ಪಿಸುವುದಕ್ಕಾಗಿ ಲೋಕೋಪಯೋಗಿ ಇಲಾಖೆಗೆ ಒಳಪಡುವ ಈ ರಸ್ತೆ ಸುಧಾರಣೆಗೋಸ್ಕರ 2015-16ನೇ ಸಾಲಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
2016-17ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆ 5056 ಅಪೆಂಡಿಕ್ಸ್-ಇ ಯೋಜನೆ ಅಡಿಯಲ್ಲಿ 15 ಕೋಟಿ ರೂ., ಫಿರೋಜಾಬಾದ-ಕಮಲಾಪುರ ರಸ್ತೆ ನಿರ್ಮಾಣಕ್ಕಾಗಿ 5 ಕೋಟಿ ರೂ. ಅನುದಾನವನ್ನು ಸರ್ಕಾರ ಮಂಜೂರಿ ಮಾಡಿದ್ದರಿಂದ ಕಾಮಗಾರಿ ಪ್ರಾರಂಭಿಸಲಾಗಿತ್ತು. ಆನಂತರ ಬಿಲ್ಲು ಪಾವತಿ ಆಗದೇ ಇದ್ದುದರಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ ಎನ್ನಲಾಗಿದೆ.
ಸರ್ಕಾರದಿಂದ 11ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗೆ 15 ಕೋಟಿ ರೂ.ಗಳಲ್ಲಿ ಗುತ್ತಿಗೆದಾರನಿಗೆ ಇದುವರೆಗೆ 4.22ಕೋಟಿ ರೂ. ಮಾತ್ರ ಬಿಲ್ಲು ಪಾವತಿಯಾಗಿದೆ. 2020-21ನೇ ಸಾಲಿನಲ್ಲಿ 37ಲಕ್ಷ ರೂ. ಬಿಲ್ಲು ಪಾವತಿಯಾಗಿದೆ. ಆದರೆ ಉಳಿದ ಬಿಲ್ಲು ಪಾವತಿಯಾಗದೇ ಇದ್ದುದಕ್ಕೆ ಕಾಮಗಾರಿ ಸ್ಥಗಿತವಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಪಂಗರಗಾ, ಚೆಂಗಟಾ ಗ್ರಾಮಗಳ ಹತ್ತಿರ ಮುಖ್ಯರಸ್ತೆ ಬದಿಯಲ್ಲಿ ಐದು ಅಡಿ ತೆಗ್ಗು ತೋಡಲಾಗಿದೆ. ತೆಗ್ಗಿನಲ್ಲಿ ಮುರುಮು ಭರ್ತಿಗೊಳಿಸದೇ ಇರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಆತಂಕದಲ್ಲೇ ಸಾಗುವಂತಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಈ ರಸ್ತೆ ಅಭಿವೃದ್ಧಿ ಕೆಲಸ ನಡೆದಿಲ್ಲ. ಈ ರಸ್ತೆ ಮೂಲಕ ಚೆಂಗಟಾ, ಸೋಂತ, ಕಲಮೂಡ ತಾಂಡಾಗಳಿಗೆ ಹೋಗಲು ತೀವ್ರ ತೊಂದರೆ ಪಡುವಂತಾಗಿದೆ. ಚಂದನಕೇರಾ-ಪಂಗರಗಾ ಗ್ರಾಮದಿಂದ ಹಾಯ್ದು ಹೋಗಿರುವ ಬಹುಗ್ರಾಮ ಯೋಜನೆಯ ಪೈಪಲೈನ್ ರಸ್ತೆ ಮಧ್ಯೆ ಇರುವುದರಿಂದ ರಸ್ತೆ ಕಾಮಗಾರಿ ಸ್ಥಗಿತವಾಗಿದೆ. ಶೀಘ್ರವೇ ಕಾಮಗಾರಿ ಪ್ರಾರಂಭಿಸಬೇಕಾಗಿದೆ.
-ಆನಂದ ಕಟ್ಟಿ, ಎಇಇ, ಲೋಕೋಪಯೋಗಿ ಇಲಾಖೆ