Advertisement

ರಸ್ತೆ ತುಂಬ ಜಲ್ಲಿ; ಸಂಚಾರಕ್ಕೆ ಸಾರ್ವಜನಿಕರ ಪರದಾಟ

01:33 PM Feb 23, 2018 | |

ಆಲಂಕಾರು: ರಸ್ತೆ ದುರಸ್ತಿ ಮಾಡುವ ಕಾರ್ಯದಲ್ಲಿ ಗುತ್ತಿಗೆದಾರ ವಿಳಂಬ ನೀತಿ ಅನುಸರಿಸಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕಡಬ ತಾಲೂಕಿನ ರಾಮಕುಂಜ ಗ್ರಾಮದ ಗೋಳಿತ್ತಡಿಯಿಂದ ಕೊಯಿಲ ಗ್ರಾಮದ ಏಣಿತಡ್ಕಕ್ಕೆ ಸಾಗುವ ರಸ್ತೆಯಲ್ಲಿ ಗೋಳಿತ್ತಡಿ – ನೆಲ್ಯೊಟ್ಟು ನಡುವಿನ ರಸ್ತೆ ಅಭಿವೃದ್ಧಿ ನಿಧಾನವಾಗಿ ಸಾಗುತ್ತಿದ್ದು, ಅಸಮರ್ಪಕ ನಿರ್ವಹಣೆಯಿಂದ ಸ್ಥಳೀಯರ ಪರದಾಟ ಹೆಚ್ಚಿದೆ.

Advertisement

ಎರಡು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದ್ದು, ಜಲ್ಲಿ ಹಾಕಿ ವಾಹನ ಸಂಚಾರಕ್ಕೆ ಕಷ್ಟ ಉಂಟುಮಾಡಿದ್ದಾರೆ. ಈ ರಸ್ತೆಯಲ್ಲಿ ನಡೆದಾಡುವ ಜನರೂ ಜೀವ ಕೈಯಲ್ಲಿ ಹಿಡಿದು ಸಾಗಬೇಕಾಗಿದೆ. ರಾಜ್ಯ ಸರಕಾರದ 49 ಲಕ್ಷ ರೂ. ಅನುದಾದಲ್ಲಿ 1.47 ಕಿ.ಮೀ. ರಸ್ತೆ ಮರು ನಿರ್ಮಾಣವಾಗುತ್ತಿದೆ. ಎರಡು ತಿಂಗಳಿಂದ ಇಲ್ಲಿನ ಜನರು ಧೂಳು ತಿನ್ನುತ್ತಾ ಬದುಕಬೇಕಾಗಿದೆ. ರಸ್ತೆಗೆ ಹರಡಿದ ಜಲ್ಲಿಯಿಂದಾಗಿ ಸಂಚಾರಕ್ಕೂ ಹರಸಾಹಸ ಮಾಡಬೇಕಾಗಿದೆ. ಜಲ್ಲಿಯನ್ನು ಸಕಾಲದಲ್ಲಿ ರೋಲ್‌ ಮಾಡಿ, ಸಮತಟ್ಟುಗೊಳಿಸದೆ ಇರುವ ಕಾರಣ ಕಲ್ಲುಗಳು ಕಿತ್ತು ಬಂದು ರಸ್ತೆ ಬದಿಯ ತನಕ ಆವರಿಸಿವೆ. ವಾಹನ ಸಂಚಾರ ಮಾಡುವವರಿಗೆ ಹಾಗೂ ಪಾದಚಾರಿಗಳಿಗೂ ಸಮಸ್ಯೆಯಾಗುತ್ತಿದೆ.

ಬೈಕ್‌ ಸವಾರರಿಗೆ ಸಂಕಷ್ಟ
ಘನ ವಾಹನಗಳು ಓಡಾಡುವಾಗ ಚಕ್ರಗಳಿಗೆ ಸಿಲುಕಿ ಕಲ್ಲುಗಳು ಸಿಡಿಯುತ್ತಿದ್ದು, ಸಣ್ಣಪುಟ್ಟ ವಾಹನಗಳ ಸವಾರರು ಹಾಗೂ ಪಾದಚಾರಿಗಳು ಆತಂಕದಿಂದಲೇ ಓಡಾಡುವಂತಾಗಿದೆ. ದ್ವಿಚಕ್ರ ವಾಹನಗಳು ರಸ್ತೆ ಮಧ್ಯೆ ಸಂಚರಿಸುವ ಪರಿಸ್ಥಿತಿ ಇಲ್ಲ. ರಸ್ತೆ ಬದಿಯಲ್ಲಾದರೂ ವಾಹನ ಒಯ್ಯೋಣ ಎಂದರೆ ಜಲ್ಲಿ ಕಲ್ಲುಗಳು ಅಲ್ಲೂ ಹರಡಿಕೊಂಡು ಅಪಾಯವನ್ನು ಆಹ್ವಾನಿಸುತ್ತಿವೆ. ರಸ್ತೆಯಲ್ಲಿ ಬರುವ ನೆಲ್ಯೊಟ್ಟು ಎಂಬಲ್ಲಿ ಬೈಕ್‌ ಸವಾರರು ಅತ್ತ ದರಿ ಇತ್ತ ಪುಲಿ ಎನ್ನುವ ರೀತಿಯಲ್ಲಿ ಸರ್ಕಸ್‌ ಮಾಡಬೇಕಾಗಿದೆ. ರಸ್ತೆ ಬದಿಯಲ್ಲಿ ಸ್ವಲ್ಪ ಮಾತ್ರ ಜಾಗವಿದೆ, ಅದರಲ್ಲಿಯೂ ಜಲ್ಲಿಕಲ್ಲು ಹರಡಿದೆ. ಸ್ವಲ್ಪ ಯಾಮಾರಿದರೂ ಒಂದೋ ರಸ್ತೆಯಲ್ಲಿ ಹಾಕಿರುವ ಜಲ್ಲಿಯ ಮೇಲೆ ಬೀಳಬೇಕು, ತಪ್ಪಿದರೆ ಚರಂಡಿಗೆ ಉರುಳಬೇಕು. ಅನೇಕ ಬೈಕ್‌ ಸವಾರರು ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ವಾಹನಗಳೂ ಹಾಳಾಗುತ್ತಿವೆ.

ಈ ಕುರಿತಾಗಿ ಕಾರ್ಮಿಕರನ್ನು ವಿಚಾರಿಸಿದರೆ, ಎಂಜಿನಿಯರ್‌ ಗಮ್‌ ಹಾಕದೆ ಜಲ್ಲಿ ಹರಡಲು ಸೂಚಿಸಿದ್ದಾರೆ. ಅವರ ಸೂಚನೆಯಂತೆ ಕಾಮಗಾರಿ ಮಾಡುತ್ತಿದ್ದೇವೆ ಎಂದು ಉತ್ತರಿಸಿದರು.

ಲಾರಿಗಳ ಸಂಚಾರ ನಿಷೇಧಿಸಿ
ತಮಗಾದ ಕೆಟ್ಟ ಅನುಭವದ ಹಿನ್ನೆಲೆಯಲ್ಲಿ ಸ್ಥಳೀಯ ಆಲಂಕಾರು ಸಿ.ಎ. ಬ್ಯಾಂಕ್‌ ಉದ್ಯೋಗಿ ಸಂತೋಷ ರೈ, ರಸ್ತೆ ಕಾಮಗಾರಿ ನಿರ್ವಹಿಸುತ್ತಿರುವ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಮಗಾರಿ ವಿಳಂಬ ನೀತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಮರಳು ಲಾರಿಗಳ ಸಹಿತ ಘನ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಮರಳು ಲಾರಿಗಳು ನಿರಂತರವಾಗಿ ಓಡಾಡುತ್ತಿದ್ದು, ರಸ್ತೆ ಮಧ್ಯೆ ಇರುವ ಜಲ್ಲಿ ಕಲ್ಲುಗಳು ಬದಿಗೆ ಸಿಡಿದು ಸಮಸ್ಯೆ ಹೆಚ್ಚುತ್ತಿದೆ. ತಕ್ಷಣ ಮರಳು ಲಾರಿಗಳ ಸಂಚಾರವನ್ನು ನಿಷೇಧಿಸಬೇಕು. ರಸ್ತೆ ಕಾಮಗಾರಿ ಮುಗಿಯುವ ತನಕ ಅವುಗಳಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

Advertisement

ಅವರ ಆಗ್ರಹಕ್ಕೆ ಸ್ಥಳೀಯರು ದನಿಗೂಡಿಸಿದ್ದಾರೆ. ಕಾಮಗಾರಿಯನ್ನು ಶೀಘ್ರವಾಗಿ ಹಾಗೂ ಗುಣಮಟ್ಟದಿಂದ ನಿರ್ವಹಿಸದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

15 ದಿನಗಳಲ್ಲಿ ಕಾಮಗಾರಿ ಪೂರ್ಣ
ಇಲ್ಲಿನ ಜನ ಅಕ್ರಮವಾಗಿ ಸಾಗುವ ಮರಳು ಲಾರಿಗಳ ಬಗ್ಗೆ ಮಾತನಾಡುತ್ತಿಲ್ಲ. ನಾವು ಜಲ್ಲಿ ಹಾಕಿದ ತಕ್ಷಣ ಅದರ ಮೇಲೆ ಮರಳು ಲಾರಿಗಳು ಎಗ್ಗಿಲ್ಲದೆ ಓಡಾಡುತ್ತಿವೆ. ಇದರಿಂದಾಗಿ ಸಮಸ್ಯೆ ತಲೆದೋರಿದೆ. ಇನ್ನು 15 ದಿನಳ ಒಳಗಾಗಿ ಡಾಮರು
ಕಾಮಗಾರಿ ಮುಗಿಸಿ ಕೊಡುತ್ತೇವೆ.
– ಸಂದೀಪ್‌,
ಎಂಜಿನಿಯರ್‌

ಸದಾನಂದ

Advertisement

Udayavani is now on Telegram. Click here to join our channel and stay updated with the latest news.

Next