ಬೈಲಹೊಂಗಲ: ಪಟ್ಟಣದ ಪುರಸಭೆ ವ್ಯಾಪ್ತಿಯ ಅರ್ಬನ್ ಬ್ಯಾಂಕ್ ಮುಂಭಾಗದ ರಸ್ತೆ ಧೂಳಿನಿಂದ ಕೂಡಿದ್ದು, ನಾಗರಿಕರು ತೊಂದರೆಗೊಳಗಾಗಿದ್ದಾರೆ.
ಈ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ಕಿರಾಣಿ ಅಂಗಡಿ, ಕಾಳಿನ ವ್ಯಾಪಾರಸ್ಥರು, ಸ್ಟೇಶನರಿ, ಎಲೆ-ಅಡಿಕೆ ವ್ಯಾಪಾರಸ್ಥರು ಹಾಗೂ ಬಟ್ಟೆ ಅಂಗಡಿಗಳು, ಔಷಧ ಅಂಗಡಿಗಳು ಇದ್ದು ಪ್ರತಿನಿತ್ಯ ಈ ರಸ್ತೆಯ ಮೂಲಕ ಸಾವಿರಾರು ವಾಹನಗಳು ಸಂಚರಿಸುತ್ತವೆ. ಧೂಳಿನಿಂದ ಹೆಚ್ಚಿನ ತೊಂದರೆಯಾಗುತ್ತಿದೆ. ಅಲ್ಲದೇ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಈ ರಸ್ತೆ ದುರಸ್ತಿಗಾಗಿ ಹಲವಾರು ತಿಂಗಳುಗಳಿಂದ ಪುರಸಭೆಗೆ ದುಂಬಾಲು ಬಿದ್ದಾಗ ಜಲ್ಲಿಕಲ್ಲಿನಿಂದ ಮೆಟಲಿಂಗ್ ಮಾಡಲಾಗಿತ್ತು. ನಂತರ ಕೆಂಪು ಮಣ್ಣಿನಿಂದ ರೂಲಿಂಗ್ ಮಾಡಿ ಕಾಟಾಚಾರಕ್ಕೆ ಎಂಬಂತೆ ಪಾದಚಾರಿಗಳಿಗೆ ಅನುಕೂಲ ಮಾಡಿ ಕೈ ತೊಳೆದುಕೊಂಡಿದ್ದರು. ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವುದರಿಂದ ಮತ್ತೆ ತೆಗ್ಗು ದಿನ್ನೆಗಳು ನಿರ್ಮಾಣವಾಗಿ ಅದೇ ರಾಗ ಅದೇ ಹಾಡು ಎನ್ನುವಂತಾಗಿದೆ. ಈಗ ಪ್ರತಿದಿನ ರಸ್ತೆಯಲ್ಲಿ ಧೂಳು ಏಳುತ್ತಿರುವುದರಿಂದ ಪುರಸಭೆಯವರು ಧೂಳನ್ನು ತಡೆಯಲು ಟ್ಯಾಂಕರ್ ನೀರು ಪ್ರತಿನಿತ್ಯ ಸಿಂಪಡಿಸುತ್ತಿದ್ದಾರೆ. ಇಷ್ಟಾದರೂ ಧೂಳು ತಡೆಯಲು ಸಾಧ್ಯವಾಗುತ್ತಿಲ್ಲ.
ಆದ್ದರಿಂದ ಜನತೆ ಬೀದಿಗಿಳಿದು ಹೋರಾಟ ಮಾಡುವ ಮುನ್ನವೇ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ತೆಗ್ಗು ದಿನ್ನೆ ಮುಚ್ಚಿಸಿ ರಸ್ತೆ ದುರಸ್ತಿಗೆ ಮುಂದಾಗುತ್ತಾರೆಯೇ ಎಂದು ಜನತೆ ಕಾದು ನೋಡುತ್ತಿದ್ದಾರೆ. ದಿನದಿಂದ ದಿನಕ್ಕೆ ಪಟ್ಟಣ ಬೆಳೆಯುತ್ತಿದೆ. ಆದರೆ ರಸ್ತೆ ಮಾತ್ರ ಇಕ್ಕಟ್ಟಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿಯೇ ಹಣ್ಣಿನ ಗಾಡಿಗಳು, ಸಣ್ಣ ಪುಟ್ಟ ವ್ಯಾಪಾರಸ್ಥರು ವ್ಯಾಪಾರ ನಡೆಸುತ್ತಿರುವುದರಿಂದ ಪಾದಚಾರಿಗಳು ಪರದಾಡುವಂತಾಗಿದೆ. ಭಾರಿ ವಾಹನಗಳು ಕೂಡ ಈ ರಸ್ತೆಯಲ್ಲಿ ಸಂಚರಿಸುವುದರಿಂದ ದಿನ ನಿತ್ಯ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಪೊಲೀಸ್ ಇಲಾಖೆ ಬಜಾರ ರಸ್ತೆಯಲ್ಲಿ ಇನ್ನಾದರೂ ಏಕಮುಖ ಸಂಚಾರ ಜಾರಿಗೊಳಿಸಿ ಟ್ರಾಫಿಕ್ ಮುಕ್ತಗೊಳಿಸುತ್ತಾರೆಂದು ಕಾದು ನೋಡಬೇಕಿದೆ.
ಅರ್ಬನ್ ಬ್ಯಾಂಕ್ ರಸ್ತೆ ಹದಗೆಟ್ಟು ಅಲ್ಲಲ್ಲಿ ತೆಗ್ಗು ದಿನ್ನೆಗಳಿಂದ ಕೂಡಿ ಪಾದಚಾರಿಗಳು ಧೂಳಿನಿಂದ ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ. ಪುರಸಭೆ ಅಧಿಕಾರಿಗಳು ರಸ್ತೆ ಡಾಂಬರೀಕರಣ ಕೈಗೊಂಡು ಉತ್ತಮ ಪರಿಸರ ನಿರ್ಮಾಣ ಮಾಡಲಿ.
ಉಮೇಶ ರೇವಣಕರ,
ನಾಗರಿಕರು
ಈ ವಿಷಯ ನನ್ನ ಗಮನಕ್ಕೆ ಬಂದಿದ್ದು ತಕ್ಷಣ ಪುರಸಭೆ ಅಧಿಕಾರಿಗಳಿಗೆ ಸೂಚಿಸಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗುವುದು.
ಮಾರುತಿ ಎಂ.ಪಿ.
ಮಾರುತಿ ಎಂ.ಪಿ.
ಉಪವಿಭಾಗಾಧಿಕಾರಿ
ಸಿ.ವೈ.ಮೆಣಶಿನಕಾಯಿ