ಬೆಂಗಳೂರು: ರಸ್ತೆ ಗುಂಡಿ ಸಮಸ್ಯೆಗೆ ಪ್ರಮುಖ ಕಾರಣವಾದ ರಸ್ತೆ ಅಗೆತ ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಹಲವು ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಆದರೆ, ರಸ್ತೆ ಅಗೆತ ಸಂಪೂರ್ಣ ತಡೆಯಲು ಸಾಧ್ಯವಾಗಿಲ್ಲ. ಅದರಲ್ಲೂ ಕಳೆದ ವರ್ಷ ಅನುಮತಿ ಪಡೆದು ಪ್ರಸಕ್ತ ಸಾಲಿನಲ್ಲಿ ರಸ್ತೆ ಅಗೆಯುವ ಕಾಮಗಾರಿ ಆರಂಭಿಸಿರುವುದರಿಂದಾಗಿ ಪ್ರಸ್ತುತ ರಸ್ತೆ ಗುಂಡಿ ಸಮಸ್ಯೆ ಹೆಚ್ಚುವಂತಾಗಿದೆ.
ನಗರದಲ್ಲಿ ಯಾರೇ ರಸ್ತೆ ಅಗೆಯಬೇಕೆಂದರೂ ಅದಕ್ಕೆ ಬಿಬಿಎಂಪಿಯಿಂದ ಅನುಮತಿ ಪಡೆಯುವುದೂ ಕಡ್ಡಾಯ. ಅದರಲ್ಲೂ ಬಿಬಿಎಂಪಿಗೆ ಅರ್ಜಿ ಸಲ್ಲಿಸಿ, ಅನುಮತಿ ಶುಲ್ಕ ಪಾವತಿಸಬೇಕು. ಅದರಂತೆ 2021-22ನೇ ಸಾಲಿನಲ್ಲಿ 43 ಅರ್ಜಿಗಳು ಸಲ್ಲಿಕೆಯಾಗಿದ್ದು, 303.85 ಕಿ.ಮೀ. ರಸ್ತೆ ಅಗೆಯುವುದಕ್ಕೆ ಅನುಮತಿಸಲಾಗಿದೆ. ಅದೇ 2022-23ನೇ ಸಾಲಿನಲ್ಲಿ 29 ಕಡೆ ರಸ್ತೆ ಅಗೆಯಲು ಅರ್ಜಿ ಸಲ್ಲಿಕೆಯಾಗಿದ್ದು, ಕೇವಲ 12.10 ಕಿ.ಮೀ. ರಸ್ತೆ ಅಗೆಯಲು ಅನುಮತಿಸಲಾಗಿದೆ. ಆದರೆ, 2021-22ನೇ ಸಾಲಿನಲ್ಲಿ ಸಲ್ಲಿಕೆಯಾದ ಅರ್ಜಿಗಳ ಪೈಕಿ ಮಾರ್ಚ್‌ನಲ್ಲಿಯೇ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿದ್ದವು. ಹೀಗಾಗಿ ಆ ಅರ್ಜಿಗಳು ಕಳೆದ ವರ್ಷದ ಸಾಲಿಗೆ ಸೇರಿದ್ದರೂ, ಪ್ರಸಕ್ತ ವರ್ಷದಲ್ಲಿ ರಸ್ತೆ ಅಗೆಯುವ ಕೆಲಸ ಮಾಡಲಾಗುತ್ತಿದೆ.
ಒಂದೇ ತಿಂಗಳಲ್ಲಿ 216 ಕಿ.ಮೀ.ಗೆ ಅನುಮತಿ: ರಸ್ತೆ ಅಗೆತಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ 303.85 ಕಿ.ಮೀ. ರಸ್ತೆ ಅಗೆಯಲು ಅನುಮತಿ ನೀಡಲಾಗಿದೆ. ಅದರಲ್ಲಿ 2022ರ ಮಾರ್ಚ್ ತಿಂಗಳಲ್ಲಿಯೇ 13 ಅರ್ಜಿಗಳು ಸಲ್ಲಿಕೆಯಾಗಿ, 216.28 ಕಿ.ಮೀ. ರಸ್ತೆ ಅಗೆಯಲು ಅನುಮತಿ ಕೋರಲಾಗಿತ್ತು. ಅದಕ್ಕೆ ಬಿಬಿಎಂಪಿ ಅನುಮತಿಸಿದೆ. ಅಲ್ಲದೆ, ಒಟ್ಟಾರೆ 2021-22ನೇ ಸಾಲಿನಲ್ಲಿ ಬಿಬಿಎಂಪಿ ರಸ್ತೆ ಅಗೆತಕ್ಕೆ ಸಂಬಂಧಿಸಿದಂತೆ 44.51 ಕೋಟಿ ರೂ. ಸಂಗ್ರಹಿಸಿದ್ದು, ಅದರಲ್ಲಿ ರಸ್ತೆ ದುರಸ್ತಿಗಾಗಿ 27.83 ಕೋಟಿ ರೂ. ವಸೂಲಾಗಿದೆ. ಹೀಗೆ ಒಂದೇ ತಿಂಗಳಲ್ಲಿ ಹೆಚ್ಚಿನ ಕಿ.ಮೀ. ರಸ್ತೆಯನ್ನು ಅಗೆಯಲು ಅನುಮತಿಸಿದ್ದರಿಂದಾಗಿ ಈ ವರ್ಷದಲ್ಲಿ ರಸ್ತೆ ಗುಂಡಿ ಸಮಸ್ಯೆ ಹೆಚ್ಚುವಂತಾಗಿದೆ.
ಈ ವರ್ಷ 29 ಅರ್ಜಿ: 2022-23ನೇ ಸಾಲಿನಲ್ಲಿ ರಸ್ತೆ ಅಗೆತಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ಕಡಿಮೆ ಇದೆ. ಅದರ ಪ್ರಕಾರ 2022ರ ಏಪ್ರಿಲ್‌ನಿಂದ ಈವರೆಗೆ 29 ಕಡೆ ರಸ್ತೆ ಅಗೆಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅದರ ಮೂಲಕ 12.10 ಕಿ.ಮೀ. ರಸ್ತೆ ಅಗೆಯಲು ಬಿಬಿಎಂಪಿ ಅನುಮತಿಸಿದೆ. ಈ ಅನುಮತಿ ಮೂಲಕ ಬಿಬಿಎಂಪಿ 2.36 ಕೋಟಿ ರೂ. ಅದಾಯ ಸಂಗ್ರಹಿಸಿದೆ.
ಅಗೆಯುವವರೇ ದುರಸ್ತಿ ಮಾಡಬೇಕು: ಕಳೆದ ವರ್ಷದವರೆಗೆ ರಸ್ತೆ ಅಗೆಯುವವರು ಬಿಬಿಎಂಪಿಗೆ ದುರಸ್ತಿ ವೆಚ್ಚ ಪಾವತಿಸಿದರೆ ಬಿಬಿಎಂಪಿಯಿಂದ ರಸ್ತೆಯನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿತ್ತು. ಆದರೆ, ರಸ್ತೆ ಅಗೆಯುವ ಸಂಸ್ಥೆ ತಮ್ಮ ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆ ದುರಸ್ತಿಗಾಗಿ ಬಿಬಿಎಂಪಿಗೆ ಮಾಹಿತಿ ನೀಡಬೇಕಿತ್ತು. ಆದರೆ, ಬಿಬಿಎಂಪಿ ಹಾಗೂ ರಸ್ತೆ ಅಗೆಯುವ ಸಂಸ್ಥೆ ನಡುವಿನ ಸಮನ್ವಯದ ಕೊರತೆಯಿಂದಾಗಿ ರಸ್ತೆ ದುರಸ್ತಿ ವಿಳಂಬವಾಗುತ್ತಿತ್ತು. ಇದನ್ನು ಮನಗಂಡ ಬಿಬಿಎಂಪಿ ರಸ್ತೆ ಅಗೆಯುವವರಿಂದಲೇ ರಸ್ತೆ ದುರಸ್ತಿ ಮಾಡಿಸುವಂತೆ ಸಮನ್ವಯ ಸಮಿತಿ ಮುಂದೆ ಬೇಡಿಕೆ ಇಟ್ಟಿತ್ತು. ಅದಕ್ಕೆ ಸಂಬಂಧಿಸಿದಂತೆ ಸಮನ್ವಯ ಸಮಿತಿಯು ರಸ್ತೆ ಅಗೆತಕ್ಕೆ ಅರ್ಜಿ ಸಲ್ಲಿಸುವ ಸಂಸ್ಥೆಯೇ ರಸ್ತೆ ದುರಸ್ತಿ ಮಾಡಬೇಕು ಎಂದು ಸೂಚಿಸಿದೆ. ಇದರಿಂದಾಗಿ ರಸ್ತೆ ಅಗೆತದ ನಂತರ ಎದುರಾಗುವ ಸಮಸ್ಯೆಗೆ ರಸ್ತೆ ಅಗೆಯುವ ಸಂಸ್ಥೆಯೇ ಹೊಣೆಯಾಗಲಿದೆ.
ಕಳೆದ ವರ್ಷದವರೆಗೆ ರಸ್ತೆ ಅಗೆಯುವ ಸಂಸ್ಥೆ ದುರಸ್ತಿಗಾಗಿ ಬಿಬಿಎಂಪಿಗೆ ಹಣ ಪಾವತಿಸುತ್ತಿತ್ತು. ಆದರೆ, ಈಗ ರಸ್ತೆ ಅಗೆಯುವ ಸಂಸ್ಥೆಯೇ ಅದನ್ನು ದುರಸ್ತಿ ಮಾಡಬೇಕು ಎಂದು ನಿರ್ದೇಶಿಸಲಾಗಿದೆ. ಹೀಗಾಗಿ ರಸ್ತೆ ಅಗೆತದಿಂದ ಎದುರಾಗುವ ಸಮಸ್ಯೆಗೆ ಬಿಬಿಎಂಪಿ ಹೊಣೆಯಾಗುವುದಿಲ್ಲ. ಆದರೂ, ರಸ್ತೆ ಅಗೆದು ಕಾಮಗಾರಿ ಮುಗಿದ ನಂತರ ರಸ್ತೆ ದುರಸ್ತಿ ಮಾಡದಿ ದ್ದರೆ ಅದರ ಬಗ್ಗೆ ಬಿಬಿಎಂಪಿ ಎಂಜಿನಿ ಯರ್‌ಗಳು ಕ್ರಮ ಕೈಗೊಳ್ಳಲಿದ್ದಾರೆ.
– ರವೀಂದ್ರ, ಬಿಬಿಎಂಪಿ ವಿಶೇಷ ಆಯುಕ್ತ
– ಗಿರೀಶ್ ಗರಗ