Advertisement

2800 ಕಿ.ಮೀ.ಗೂ ಹೆಚ್ಚಿನ ರಸ್ತೆ ಅಭಿವೃದ್ಧಿ

04:13 PM Mar 14, 2022 | Team Udayavani |

ಸಕಲೇಶಪುರ: ಚುನಾವಣಾ ಹತ್ತಿರ ಬಂದಾಗ ಕೆಲವರ ಕಣ್ಣು ಹಳದಿಯಾಗುವುದು ಸಾಮಾನ್ಯ ಎಂದು ಶಾಸಕ ಎಚ್‌.ಕೆ ಕುಮಾರಸ್ವಾಮಿ ಹೇಳಿದರು.

Advertisement

ತಾಲೂಕಿನ ಚಿಕ್ಕಸತ್ತಿಗಾಲ್‌ ಕೂಡಿಗೆಯಿಂದ ಬಿ.ಬಿ ಶಿವಪ್ಪ ವೃತ್ತದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಮಾತನಾಡಿ, ಚಿಕ್ಕ ಸತ್ತಿಗಾಲ್‌ನಿಂದ ಬಿ.ಬಿ.ಶಿವಪ್ಪ ವೃತ್ತದವರೆಗಿನ 2.5 ಕಿ. ಮೀ.ದೂರವನ್ನು 2 ಕೋಟಿ ರೂ.ವೆಚ್ಚದಲ್ಲಿ ಲೋಕೋ ಪಯೋಗಿ ಇಲಾಖೆ ವತಿಯಿಂದ ಕಾಮಗಾರಿ ಮಾಡಲಾಗುತ್ತಿದೆ. ಸಕಲೇಶಪುರ ತಾಲೂಕು ಉತ್ತಮ ರಸ್ತೆಗಳಿಗೆ ಹೆಸರು ವಾಸಿಯಾಗಿದೆ ಎಂದರು.

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲ್ಲ: ಈ ರಸ್ತೆಗೆ ಅನುದಾನ ಮಂಜೂರಾತಿಗಾಗಿ ನರೇಶ್‌ ಮತ್ತು ಸಂಗಡಿಗರು ಬಹಳ ಪ್ರಯತ್ನ ಮಾಡಿದ್ದಾರೆ. ಈ ರಸ್ತೆಗೆ ಅನುದಾನ ಬಿಡುಗಡೆ ಮಾಡುವ ಕುರಿತು ಲೋಕೋ ಪಯೋಗಿ ಸಚಿವ ಸಿ.ಸಿ ಪಾಟೀಲ್‌ ನನ್ನನ್ನು ಕೇಳಿದಾಗ ಮೊದಲು ಬಿಡುಗಡೆ ಮಾಡಿ ಎಂದಿದ್ದೇನೆ. ಈ ಭಾಗದ ಜನ ನನಗೆ ಮತ ಹಾಕುವುದಿಲ್ಲ. ಆದರೆ ರಾಜಕೀಯ ವನ್ನು ಅಭಿವೃದ್ಧಿಗೆ ತರಬಾರದೆಂದು ರಸ್ತೆ ನಿರ್ಮಾಣಕ್ಕೆ ನಾನು ಸಹಕಾರ ನೀಡಿದ್ದೇನೆ. ಬ್ಯಾಕರವಳ್ಳಿ ಆನೆ ಮಹಲ್‌ ನಡುವಿನ ರಾಜ್ಯ ಹೆದ್ದಾರಿಯನ್ನು ಹಲವು ವರ್ಷಗಳ ನಂತರ 11ಕಿ.ಮೀ ದೂರವನ್ನು 13 ಕೋಟಿ ವೆಚ್ಚದಲ್ಲಿ ಮಾಡಿದ್ದೇವೆ. ವಿವಿಧ ಯೋಜನೆಗಳಲ್ಲಿ ತಾಲೂಕಿನಲ್ಲಿ ಸುಮಾರು 1000ಕಿ.ಮೀ ರಸ್ತೆ ಅಭಿವೃದ್ಧಿ ಪಡಿಸಲಾ ಗಿದ್ದು, ಎತ್ತಿನಹೊಳೆ ಯೋಜನೆ ಯಲ್ಲಿ 200 ಕಿ.ಮೀ. ಗೂ ಹೆಚ್ಚು ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ.

ಅಭಿವೃದ್ಧಿ ಮಾತ್ರ ಚುನಾವಣೆಯಲ್ಲಿ ಮಾನದಂಡವಲ್ಲ: ಎತ್ತಿನಹೊಳೆ ಯೋಜನೆ ಸಹ ಸರ್ಕಾರದ ಯೋಜನೆಯಾಗಿದ್ದು ಈ ಕುರಿತು ವಿನಾಕಾರಣ ಅಪಪ್ರಚಾರ ಮಾಡುವುದು ಸರಿಯಲ್ಲ. ವ್ಯಕ್ತಿತ್ವಕ್ಕೆ ಗುಣಕ್ಕೆ ಮತ್ಸರ ಇರಬಾರದು, ಕೇವಲ ಅಭಿವೃದ್ಧಿ ಮಾಡುವುದರಿಂದ ಮಾತ್ರ ಜನ ಕೈಹಿಡಿಯುವುದಿಲ್ಲ. ಹಲವು ವಿಷಯಗಳಿಂದ ಚುನಾವಣೆಗಳು ಕೈಹಿಡಿಯು ತ್ತದೆ. ಈ ಹಿಂದೆ ಲೋಕೋಪಯೋಗಿ ಸಚಿವರಾಗಿದ್ದ ದಿವಂಗತ ಸಿ.ಎಂ ಉದಾಸಿ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಕೆಲಸ ಮಾಡಿದರು ಸಹ ಚುನಾವಣೆ ಗೆಲ್ಲಲು ಸಾಧ್ಯ ವಾಗಲಿಲ್ಲ. ನಾನು ಮಾಡಿರುವ ರಸ್ತೆಗಳನ್ನು ಟೀಕೆ ಮಾಡುವವರು ಬಂದು ನೋಡಲಿ. ಟೀಕೆಗಳಿಂದ ಚುನಾವಣೆ ಎದುರಿಸಲು ಸಾಧ್ಯವಿಲ್ಲ, ಜನ ಕೈಹಿಡಿದಲ್ಲಿ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯ ಎಂದರು.

ಶಿವಪ್ಪ ಅವರನ್ನು ಸ್ಮರಿಸಬೇಕು: ಬಿಜೆಪಿ ಮುಖಂಡ ಅರೆಕೇಶ್‌ ಮಾತನಾಡಿ, ಅರೆಕೆರೆ ಸುತ್ತಮುತ್ತಲಿನ ಗ್ರಾಮಗಳ ಗಂಡುಗಳಿಗೆ ಈ ಹಿಂದೆ ಹದಗೆಟ್ಟ ರಸ್ತೆಯಿಂದಾಗಿ ಹೆಣ್ಣು ನೀಡಲು ಜನ ಮುಂದಾಗುತ್ತಿರ ಲಿಲ್ಲ. ಆದರೆ ಬಿ.ಬಿ ಶಿವಪ್ಪನವರು ಶಾಸಕರಾದ ನಂತರ ಈ ಗ್ರಾಮಕ್ಕೆ ರಸ್ತೆ ಮಂಜೂರು ಮಾಡಿಸಿ ಗ್ರಾಮದ ಜನತೆಯಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದರು. ಈ ನಿಟ್ಟಿನಲ್ಲಿ ನಾವು ಸದಾ ಅವರನ್ನು ನೆನಯಬೇಕಾಗಿದೆ ಎಂದರು. ಚಿಕ್ಕಸತ್ತಿಗಾಲ್‌ ಕೂಡಿಗೆಯಿಂದ ಬಿ.ಬಿ ಶಿವಪ್ಪ ವೃತ್ತದವರೆಗಿನ ರಸ್ತೆ ಅಭಿವೃದ್ಧಿ ಪಡಿಸಲು ಸುಮಾರು 2 ಕೋಟಿ ರೂ. ಹಣವನ್ನು ಬಿಜೆಪಿ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಹಾಗೂ ಶಾಸಕರ ನೆರವಿನಿಂದ ಬಿಡುಗಡೆ ಮಾಡಿಸಿಕೊಂಡು ಬಂದಿದ್ದೇವೆ. ಶಾಸಕರು ಮುಂದಿನ ದಿನಗಳಲ್ಲಿ ಶಾಸಕ ರಾಗಿರುತ್ತಾರೋ ಅಥವಾ ಅವರ ಪತ್ನಿ ಶಾಸಕರಾಗುತ್ತಾರೋ ಗೊತ್ತಿಲ್ಲ. ಒಟ್ಟಾರೆಯಾಗಿ ಈ ರಸ್ತೆ ಮಾತ್ರ ಶಾಶ್ವತವಾಗಿರಲಿ. ಅಭಿವೃದ್ಧಿ ವಿಷಯದಲ್ಲಿ ತೊಂದರೆ ಕೊಡದ ಶಾಸಕರೆಂದರೆ ಎಚ್‌.ಕೆ ಕುಮಾರಸ್ವಾಮಿ ಮಾತ್ರ ಎಂದರು.

Advertisement

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ್‌ ಸಂಗಿ, ಮಾಜಿ ಜಿಪಂ ಸದಸ್ಯ ಸುಪ್ರದೀಪ್ತ ಯಜಮಾನ್‌, ಗ್ರಾಪಂ ಸದಸ್ಯ ಜಗದೀಶ್‌, ರಂಗನಾಥ್‌, ಗ್ರಾಮಸ್ಥರಾದ ಬಾಗಡಹಳ್ಳಿ ಪುಟ್ಟಣ್ಣ, ಲೋಕಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಅನ್ವರ್‌ ಭಾಷಾ, ಮುಂತಾದವರು ಹಾಜರಿದ್ದರು.

ನನ್ನ ರಾಜಕೀಯ ಅನುಭವದ ವಯಸ್ಸಾಗಿಲ್ಲ : ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕುರಿತು ಚೂರುಪಾರು ಗೊತ್ತಿಲ್ಲದವರು ನನ್ನ ಅಭಿವೃದ್ಧಿ ಕಾರ್ಯದ ಬಗ್ಗೆ ಟೀಕೆ ಮಾಡುವುದು ಹಾಸ್ಯಾಸ್ಪದವಾಗಿದೆ. ರಾಜಕೀಯವಾಗಿ ನನಗೆ 37 ವರ್ಷ ಅನುಭವವಿದ್ದು, ನನ್ನ ರಾಜಕೀಯ ಜೀವನದಷ್ಟು ವಯಸ್ಸಾಗದವರು ನನ್ನನ್ನು ಟೀಕೆ ಮಾಡುವುದು ಎಷ್ಟು ಸರಿ? ಎಂದು ಕಾಂಗ್ರೆಸ್‌ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್‌ಗೆ ಶಾಸಕ ಎಚ್‌.ಕೆ ಕುಮಾರಸ್ವಾಮಿ ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next