Advertisement

ಮರೀಚಿಕೆಯಾದ ರಸ್ತೆ ಅಭಿವೃದ್ಧಿ ; ದುರಸ್ತಿಗೆ ಜನರ ಆಗ್ರಹ

07:02 PM Dec 13, 2021 | Team Udayavani |

ಹೊಸಂಗಡಿ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ 3ನೇ ವಾರ್ಡ್‌ನ ಹೊಸಂಗಡಿಯಿಂದ ಬಾಳೆಜೆಡ್ಡು, ಕಾರೂರಿಗೆ ಸಂಚರಿಸುವ ರಸ್ತೆಯ ಡಾಮರು ಕಿತ್ತು ಹೋಗಿ, ಮಧ್ಯೆ- ಬರೀ ಜಲ್ಲಿ ಕಲ್ಲು ಮಾತ್ರ ಉಳಿದುಕೊಂಡಿದೆ.
ಹೊಂಡಗಳಿಂದ ಕೂಡಿದ ಈ ರಸ್ತೆಯಲ್ಲಿ ಜನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ.
ಈ ಹೊಸಂಗಡಿ – ಬಾಳೆಜೆಡ್ಡು ರಸ್ತೆಯ ಅಭಿವೃದ್ಧಿಗೆ ಜನ ಅನೇಕ ವರ್ಷಗಳಿಂದ ಒತ್ತಾಯಿಸುತ್ತಲೇ ಇದ್ದು, ಆದರೂ ಇನ್ನೂ ರಸ್ತೆ ಅಭಿವೃದ್ದಿಗೆ ಕಾಲ ಮಾತ್ರ ಕೂಡಿ ಬಂದಿಲ್ಲ. ಕಳೆದ ಗ್ರಾ.ಪಂ. ಚುನಾವಣೆ ಸಂದರ್ಭದಲ್ಲಿ ಈ ರಸ್ತೆಯ ಅಭಿವೃದ್ಧಿ ಮಾಡಿಕೊಡುವು ದಾಗಿ ಹೇಳಿದ್ದು, ಚುನಾವಣೆ ಮುಗಿದು, 8 ತಿಂಗಳು ಕಳೆದರೂ ಇನ್ನೂ ಡಾಮರು ಅಥವಾ ಕಾಂಕ್ರೀಟ್‌ ಭಾಗ್ಯ ಮಾತ್ರ ಒದಗಿ ಬಂದಿಲ್ಲ ಎನ್ನುವುದು ಊರವರ ಆರೋಪ.

Advertisement

8 ವರ್ಷಗಳ ಹಿಂದೆ ಡಾಮರು
ಹೊಸಂಗಡಿಯಿಂದ ಬಾಳೆಜೆಡ್ಡಿಗೆ 2 ಕಿ.ಮೀ. ದೂರವಿದ್ದು, ಅಲ್ಲಿಂದ ಈ ರಸ್ತೆ ಕಾರೂರಿಗೆ ಸಂಪರ್ಕವಿದ್ದು, ಅದು 1.5 ದೂರವಿದೆ. ಒಟ್ಟಾರೆ ಹೊಸಂಗಡಿಯಿಂದ 3.5 ಕಿ.ಮೀ. ದೂರವಿದೆ. ಈ ಭಾಗದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿವೆ. ಈ ಮಾರ್ಗವನ್ನು 7-8 ವರ್ಷಗಳ ಹಿಂದೆ ಮೊದಲ ಬಾರಿಗೆ ಅಭಿವೃದ್ಧಿಪಡಿಸಿ, ಡಾಮರು ಕಾಮಗಾರಿ ನಡೆಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಕನಿಷ್ಠ ಈ ರಸ್ತೆಗೆ ತೇಪೆ ಹಾಕುವ ಕಾರ್ಯವೂ ನಡೆದಿಲ್ಲ.

ವಾಹನ ಸಂಚಾರ ದುಸ್ತರ
ನಿತ್ಯ ಇವರೆಲ್ಲ ಪಡಿತರ, ಪೇಟೆ, ಶಾಲೆಗೆ ಹೋಗಲು ಹೊಸಂಗಡಿಗೆ ಬರಬೇಕು. ಡಾಮರೆಲ್ಲ ಕಿತ್ತು ಹೋಗಿ, ಬರಿ ಜಲ್ಲಿ ಕಲ್ಲು ಮಾತ್ರ ಉಳಿದುಕೊಂಡಿದ್ದು, ಇದು ಬೈಕ್‌ ಸವಾರರ ಸಂಚಾರಕ್ಕೂ ಕುತ್ತು ತಂದಿದೆ. ಇಲ್ಲಿ ಅನೇಕ ದ್ವಿಚಕ್ರ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಬಾಡಿಗೆಗೆ ಬರಲು ಸಹ ವಾಹನ ಸವಾರರು ಬರಲು ಹಿಂದೇಟು ಹಾಕುತ್ತಿದ್ದು, ಬಂದರೂ ದುಪ್ಪಟ್ಟು ದರ ಕೇಳುತ್ತಾರೆ. ಅದರಲ್ಲೂ ಸಂಜೆ 6 ಗಂಟೆ ಬಳಿಕ ಯಾರೂ ಈ ಮಾರ್ಗದಲ್ಲಿ ಬರುವುದಿಲ್ಲ.

ದುರಸ್ತಿಯಾಗದಿದ್ದರೆ ಪ್ರತಿಭಟನೆ
ಇಲ್ಲಿರುವುದು ಹೆಚ್ಚಿನವರು ಕೂಲಿ ಕಾರ್ಮಿಕರು, ಶಾಲೆ, ಬ್ಯಾಂಕ್‌, ಆಸ್ಪತ್ರೆ, ದಿನನಿತ್ಯದ ಕಾರ್ಯಗಳಿಗೆ ಹೊಸಂಗಡಿ ಪೇಟೆಗೆ ಹೋಗಬೇಕು. 3.5 ಕಿ.ಮೀ. ದೂರದ ರಸ್ತೆಯ ಪೈಕಿ 2 ಕಿ.ಮೀ. ಅಂತೂ ತೀರಾ ಹದಗೆಟ್ಟು ಹೋಗಿದೆ. ವರ್ಷದ ಹಿಂದೆ ಕೊಟ್ಟ ಭರವಸೆ ಇನ್ನೂ ಈಡೇರಿಲ್ಲ. ಈಗಲೂ ದುರಸ್ತಿಗೆ ಮುಂದಾಗದಿದ್ದರೆ ಪಂಚಾಯತ್‌ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಸ್ಥಳೀಯರಾದ ಆನಂದ ಕಾರೂರು ಎಚ್ಚರಿಸಿದ್ದಾರೆ.

ಶೀಘ್ರ ಮಂಜೂರು
ಪಂಚಾಯತ್‌ನಿಂದ ಈ ಹಿಂದೆ ಎಸ್ಸಿ ಹಾಗೂ ಎಸ್ಟಿ ಯೋಜನೆಯಡಿ ಅಭಿವೃದ್ಧಿಗೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಆದರೆ ಅದು ತಾಂತ್ರಿಕ ಕಾರಣದಿಂದಪರಿಷ್ಕರಣೆಗೆ ಕಳುಹಿಸಿದ್ದು, ಈಗ ಎಸ್ಸಿ ಯೋಜನೆಯಡಿ ಶಾಸಕರ ಮುತುವರ್ಜಿಯೊಂದಿಗೆ 1.5 ಕೋ.ರೂ. ಅನುದಾನಕ್ಕಾಗಿ ಮತ್ತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರ ಮಂಜೂರಾಗುವ ನಿರೀಕ್ಷೆಯಿದೆ.
-ಶಾರದಾ ಗೊಲ್ಲ,,
ಹೊಸಂಗಡಿ ಗ್ರಾ.ಪಂ. ಅಧ್ಯಕ್ಷರು

Advertisement

ಆಶ್ವಾಸನೆ ಮಾತ್ರ
ಈ ಕುರಿತು ಸ್ಥಳೀಯರು ಜನಪ್ರತಿನಿಧಿಗಳ ಗಮನಕ್ಕೆ ತಂದಾಗ ಒಮ್ಮೆ ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು, ಜಿ.ಪಂ. ಸದಸ್ಯರೆಲ್ಲ ಸೇರಿ ಇಲ್ಲಿಗೆ ಭೇಟಿ ಕೊಟ್ಟು, ಒಂದು ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದಿದ್ದರು. ಅದಾಗಿ 6 ತಿಂಗಳು ಕಳೆದರೂ ಇನ್ನೂ ಆರಂಭಗೊಂಡಿಲ್ಲ
-ಶರಣ್‌ ಬಾಳೆಜೆಡ್ಡು, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next