Advertisement

ಭರವಸೆಯಲೇ ಉಳಿದ ಮೈರೋಳಡ್ಕ -ಅಂಡಗೇರಿ ರಸ್ತೆ  ಅಭಿವೃದ್ಧಿ 

10:49 AM Nov 09, 2018 | Team Udayavani |

ಬೆಳ್ತಂಗಡಿ : ಊರಿನ ಅಭಿವೃದ್ಧಿ ಅಲ್ಲಿನ ರಸ್ತೆಯ ಸ್ಥಿತಿಗತಿಯ ಮೇಲೆ ನಿಂತಿರುತ್ತದೆ. ರಸ್ತೆ ಚೆನ್ನಾಗಿದ್ದರೆ ಅಲ್ಲಿನ ಇತರ ವ್ಯವಸ್ಥೆಗಳೂ ಉತ್ತಮಗೊಳ್ಳುತ್ತವೆ. ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಮೈರೋಳ್ತಡ್ಕ – ಅಂಡಗೇರಿ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟ ಪರಿಣಾಮ ಊರಿನ ಅಭಿವೃದ್ಧಿಗೂ ತೊಡಕಾಗಿದೆ.

Advertisement

ಮೈರೋಳ್ತಡ್ಕ – ಅಂಡಗೇರಿ ರಸ್ತೆ ಅಭಿವೃದ್ಧಿಗೆ ಹಲವು ವರ್ಷಗಳಿಂದ ಬೇಡಿಕೆ ಇದೆ. ಆದರೆ ಬರೀ ಬಾಯಿನ ಮಾತಿನ ಭರವಸೆ ಹಾಗೂ ರಾಜಕೀಯ ಮೇಲಾಟಗಳು ನಡೆದಿದೆಯೇ ವಿನಾ ಅಭಿವೃದ್ಧಿ ಶೂನ್ಯವಾಗಿದೆ.

ಶಿಲಾನ್ಯಾಸ ನಡೆದಿತ್ತು
ಮಳೆಗಾಲದಲ್ಲಿ ರಸ್ತೆ ಕೆಸರುಮಯ. ಬೇಸಗೆಯಲ್ಲಿ ಧೂಳು. ಹೀಗಾಗಿ ಮಳೆಗಾಲದಲ್ಲಿ ಇತ್ತ ವಾಹನಗಳು ಹೋಗುವಂತಿಲ್ಲ, ಬೇಸಗೆಯಲ್ಲಿ ವಾಹನದವರು ಬರಲು ಕೇಳುತ್ತಿಲ್ಲ ಎಂದು ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಚುನಾವಣೆ ಸಂದರ್ಭ ರಸ್ತೆ ಅಭಿವೃದ್ಧಿ ಅನುದಾನದ ಬ್ಯಾನರ್‌ಗಳು ಬಿದ್ದು, ಶಿಲಾನ್ಯಾಸ ನಡೆದಿದ್ದರೂ ಬಳಿಕ ಅದು ಎಲ್ಲಿ ಹೋಯಿತೆಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.

150 ಕುಟುಂಬಗಳು
ಮೈರೋಳ್ತಡ್ಕ-ಅಂಡಗೇರಿ ರಸ್ತೆಯನ್ನೇ ಬಳಸಿಕೊಂಡು ಸುಮಾರು 150ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿವೆ. ತಮ್ಮ ದೈನಂ ದಿನ ಕೆಲಸಗಳಿಗೆ ತೆರಳುವುದಕ್ಕೆ ಇಲ್ಲಿಂದಲೇ ಸಾಗಬೇಕಿದೆ. ಆದರೆ ರಸ್ತೆ ದುಃಸ್ಥಿತಿ ಪರಿಣಾಮ ಈ ಭಾಗದ ನಾಗರಿಕರು ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಮಳೆಗಾಲದಲ್ಲಿ ಕೆಸರಿನಿಂದ ರಸ್ತೆಯಲ್ಲಿ ಒಂದು ಹೆಜ್ಜೆ ಇಡುವುದಕ್ಕೂ ಅಸಾಧ್ಯದ ಸ್ಥಿತಿ ಇದೆ. ನೂರಾರು ವಿದ್ಯಾರ್ಥಿಗಳು ನಿತ್ಯ ನರಕಯಾತನೆ ಅನುಭವಿಸಬೇಕಾಗಿದೆ.

ಕೃಷಿ ಪ್ರಧಾನ ಕುಟುಂಬಗಳೇ ಈ ಭಾಗ ದಲ್ಲಿ ಹೆಚ್ಚಿದ್ದು, ಕನಿಷ್ಠ ನಮಗೊಂದು ರಸ್ತೆಯನ್ನಾದರೂ ಕೊಡಿ ಎಂದು ಸಾರ್ವಜನಿಕರು ಅಂಗಲಾಚುತ್ತಿದ್ದಾರೆ. ಈ ಹಿಂದಿನ ಎಲ್ಲ ಜನಪ್ರತಿನಿಧಿಗಳಿಗೂ ಮನವಿ ನೀಡಿರುವ ಸ್ಥಳೀಯರು ಕೆಲವು ಸಮಯಗಳ ಹಿಂದೆ ಗ್ರಾಮಕ್ಕೆ ಭೇಟಿ ನೀಡಿದ ನೂತನ ಶಾಸಕರಿಗೂ ಮನವಿ ನೀಡಿದ್ದಾರೆ. ಕಳೆದ ಮಳೆಗಾಲದಲ್ಲಿ ರಸ್ತೆಗೆ ಜಲ್ಲಿ ಕಲ್ಲು ಹಾಕಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಈ ಕುರಿತು ಸ್ಥಳೀಯರು ಗುತ್ತಿಗೆದಾರರ ಬಳಿ ಕೇಳಿದಾಗ ಅನುದಾನ ಬಂದಿಲ್ಲ ಎಂಬ ಉತ್ತರ ನೀಡಿದ್ದರು. ಈ ರಸ್ತೆಯು ಸ್ಥಳೀಯ ಮಸೀದಿ, ಅಂಗನವಾಡಿ ಕೇಂದ್ರಕ್ಕೂ ಸಂಪರ್ಕ ಕಲ್ಪಿಸುತ್ತದೆ.

Advertisement

ರೋಗಿಗಳಿಗೆ ಅಪಾಯ
ಕಳೆದ ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಕೆಸರಿನಿಂದ ಆವರಿಸಿದ್ದು, ವಾಹನಗಳು ಸಾಗಲು ಅಸಾಧ್ಯವಾಗಿತ್ತು. ಅಂಡಗೇರಿ ನಿವಾಸಿ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಅವರನ್ನು ಹೊತ್ತುಕೊಂಡು ಹೋಗಬೇಕಾಯಿತು ಎಂದು ರಸ್ತೆ ಅವ್ಯವಸ್ಥೆಯನ್ನು ಸ್ಥಳೀಯರು ವಿವರಿಸಿದ್ದಾರೆ. ರೋಗಿಗಳೂ ಈ ರಸ್ತೆಯಲ್ಲಿ ಸಾಗುವುದು ಅಪಾಯ ಎಂದು ಆರೋಪಿಸಿದ್ದಾರೆ.

ಅನುದಾನದ ಮಾಹಿತಿ ಇಲ್ಲ
ಗ್ರಾ.ಪಂ. ಅನುದಾನದಿಂದ ಈ ರಸ್ತೆ ಅಭಿವೃದ್ಧಿ ಅಸಾಧ್ಯ. ಹಿಂದಿನ ಶಾಸಕರ ಅವಧಿಯಲ್ಲಿ ರಸ್ತೆಗೆ ಅನುದಾನ ಮಂಜೂರಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ವಿಚಾರಿಸಿದರೆ ಅದರ ಟೆಂಡರ್‌ ಆಗಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಸಮರ್ಪಕ ಮಾಹಿತಿ ಸಿಕ್ಕಿಲ್ಲ. ಹಾಲಿ ಶಾಸಕರ ಗಮನಕ್ಕೂ ಈ ವಿಚಾರ ತರಲಾಗಿದೆ.
ಉದಯ ಬಿ.ಕೆ.
  ಅಧ್ಯಕ್ಷರು, ಬಂದಾರು ಗ್ರಾ.ಪಂ.

ಇನ್ನಾದರೂ ಗಮನಹರಿಸಲಿ
ರಸ್ತೆ ಅಭಿವೃದ್ಧಿಗಾಗಿ ಎಲ್ಲ ಜನಪ್ರತಿನಿಧಿಗಳ ಬಳಿ ಹೇಳಿ ಸೋತು ಹೋಗಿದ್ದೇವೆ. ಭರವಸೆಗಳಿಂದಲೇ ಅವರು ಕಾಲ ಕಳೆದಿದ್ದಾರೆ. ವಿದ್ಯಾರ್ಥಿಗಳು ಸಹಿತ ಸ್ಥಳೀಯರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ರೋಗಿಗಳು, ಗರ್ಭಿಣಿಯರು ರಸ್ತೆಯಲ್ಲಿ ಸಾಗುವುದೇ ಅಪಾಯ. ಇನ್ನಾದರೂ ಸಂಬಂಧಪಟ್ಟವರು ಗಮನಹರಿಸಲಿ.
 - ಶಾಹಿದಾ ಅಂಡಗೇರಿ
    ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next