Advertisement

ಅಮೆರಿಕ ಮಾದರಿಯಲ್ಲಿ ರಸ್ತೆ ಅಭಿವೃದ್ಧಿ: ಗಡ್ಕರಿ

06:23 PM Mar 01, 2022 | Team Udayavani |

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಇತರೆ ರಸ್ತೆ ಯೋಜನೆಗಳಿಗೆ ರಾಜ್ಯ ಸರ್ಕಾರ ಭೂಸ್ವಾ ಧೀನ ಸೇರಿದಂತೆ ಇತರೆ ವ್ಯಾಜ್ಯ ಬಗೆಹರಿಸಿಕೊಟ್ಟರೆ ಪ್ರವಾಸೋದ್ಯಮ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದರು.

Advertisement

ನಗರದಲ್ಲಿ ಸೋಮವಾರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವತಿಯಿಂದ ಸೋಮವಾರ 3,972 ಕೋಟಿ ರೂ. ವೆಚ್ಚದ 238 ಕಿ.ಮೀ ಉದ್ದದ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಭಾರತದ ರಸ್ತೆ ಜಾಲ 2024ರ ವೇಳೆಗೆ ಅಮೆರಿಕಕ್ಕೆ ಸರಿಸಮನಾಗಿ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ಪ್ರತಿಯೊಂದು  ಅಭಿವೃದ್ಧಿ ರಸ್ತೆ ಸಂಪರ್ಕ ಅವಲಂಬಿಸಿದೆ.ಹೀಗಾಗಿ ರಸ್ತೆ ಸಂಪರ್ಕ ಜಾಲ ಸದೃಢ ಗೊಳಿಸಲು ಸರ್ಕಾರ ಬದ್ಧವಿದೆ. ಅಮೆರಿಕ ಮಾದರಿಯಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಭಾರತ ಮಾಲಾ-2ರಲ್ಲಿ ಸೇರ್ಪಡೆ: ಭಾರತ ಮಾಲಾ-2 ಯೋಜನೆಯಲ್ಲಿ ಕರ್ನಾಟಕದ ಇನ್ನಷ್ಟು ಯೋಜನೆ ಸೇರ್ಪಡೆ ಮಾಡಲಾಗುವುದು. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 12 ರಾಜ್ಯ ಹೆದ್ದಾರಿಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಭಾರತ ಮಾಲಾ-2 ಯೋಜನೆಯಲ್ಲಿರುವ ಪುಣೆ-ಬೆಂಗಳೂರು ರಸ್ತೆಯ ಈಗಿನ ಅಂತರ 100 ಕಿ.ಮೀ ಕಡಿಮೆಗೊಳಿಸುವ ಯೋಜನೆ ರೂಪಿಸಲಾಗಿದೆ. ಮುಂದೆ ಇದು ಬೆಂಗಳೂರು-ಚೆನ್ನೈ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಿದೆ. 2023ರ ವೇಳೆಗೆ ಇದನ್ನು ಮುಗಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಟ್ರಾಫಿಕ್‌-ನಗರೀಕರಣ ಒತ್ತಡ ನಿಯಂತ್ರಿಸುವ ದೃಷ್ಟಿಯಿಂದ ಹೆದ್ದಾರಿಗಳ ಪಕ್ಕದಲ್ಲಿ ಭೂಸ್ವಾಧೀನ ಮಾಡಿಕೊಂಡು ಸ್ಮಾರ್ಟ್‌ಸಿಟಿ ಮಾಡುವ ಜತೆಗೆ ಸ್ಮಾರ್ಟ್‌ ವಿಲೇಜ್‌, ಕೈಗಾರಿಕೆ ಸ್ಥಾಪಿಸುವ ಮೂಲಕ ಪರ್ಯಾಯ ಮಾರ್ಗ ಕಂಡುಕೊಳ್ಳಬಹುದು. ಇದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಜನೆ ರೂಪಿಸಿದರೆ ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಹೇಳಿದರು.

9 ಸಾವಿರ ಕಿ.ಮೀ ಉದ್ದದ ಗ್ರೀನ್‌ ಫೀಲ್ಡ್ , ಹೆದ್ದಾರಿ ಕಾರಿಡಾರ್‌ ಯೋಜನೆ ಮೂರು ಲಕ್ಷ ಕೋಟಿಗೂ ಅಧಿಕ ವೆಚ್ಚದಲ್ಲಿ ಜಾರಿಗೊಳಿಸಲಾಗುತ್ತಿದೆ. ಇದರಲ್ಲಿ ಬೆಂಗಳೂರು-ಚೆನ್ನೈ ಯೋಜನೆ ಒಳಗೊಂಡಿದೆ. ಸೂರತ್‌ದಿಂದ ಚೆನ್ನೈವರೆಗೆ ಹೆದ್ದಾರಿ ಅಭಿವೃದ್ಧಿಯಿಂದ ಗುಜರಾತ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ತಮಿಳುನಾಡು ರಾಜ್ಯಗಳ ಸಂಪರ್ಕ ಕೊಂಡಿ ಗಟ್ಟಿಯಾಗಲಿದೆ. ಈ ರಸ್ತೆ ಮೇಲೆ ಪ್ರತಿ ಗಂಟೆಗೆ 120-140 ಕಿ.ಮೀ ವೇಗದಲ್ಲಿ ವಾಹನಗಳು ಓಡಾಡಲಿವೆ ಎಂದು ವಿವರಿಸಿದರು.

Advertisement

ಹೊಸ ಮೇಲ್ಸೇತುವೆ ಪ್ರಸ್ತಾವ ಶಾಸಕ ಅಭಯ ಪಾಟೀಲ ನೀಡಿದ್ದರು. ಆದರೆ ಸ್ಥಳೀಯ ಕಾರಣಗಳಿಂದ ಅದು ಸಾಧ್ಯವಾಗಿಲ್ಲ. ಇವರು ಇದನ್ನು ನಿಭಾಯಿಸುವ ಜವಾಬ್ದಾರಿ ತೆಗೆದು ಕೊಂಡರೆ ಮುಂದುವರಿಸಲಾಗುವುದು. ಈ ಭಾಗದ ಸಂಸದರು, ಶಾಸಕರು ವಿವಿಧ ರಸ್ತೆಗಳ ಅಭಿವೃದ್ಧಿ ಮಾಡಲು ಹಾಗೂ ಮೇಲ್ದರ್ಜೆಗೇರಿಸಲು ಮನವಿ ಸಲ್ಲಿಸಿದ್ದು, ಈ ಎಲ್ಲ ಪ್ರಸ್ತಾವನೆಗಳಿಗೆ ತಕ್ಷಣವೇ ಮಂಜೂರಾತಿ ನೀಡಲಾಗುವುದು ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಜಾಲ ಕರ್ನಾಟಕದ ಮೂಲೆ ಮೂಲೆಗೂ ವಿಸ್ತರಿಸುವ ಕೆಲಸ ಗಡ್ಕರಿ ಮಾಡುತ್ತಿದ್ದಾರೆ. ಮಹಾರಾಷ್ಟ್ರ-ಗೋವಾ ಇತರೆ ಜಿಲ್ಲೆಗಳಿಗೆ ಹೆದ್ದಾರಿಗಳ ನಿರ್ಮಾಣವಾಗುತ್ತಿವೆ. ರಸ್ತೆ ಮೂಲಕ ರಾಷ್ಟ್ರದ ಅಭಿವೃದ್ಧಿ ಕಂಡಿರುವ ಮೋದಿ ಹಾಗೂ ರಸ್ತೆ ಕ್ರಾಂತಿ ಮಾಡುತ್ತಿರುವ ಗಡ್ಕರಿ ಕಾಲಘಟ್ಟದಲ್ಲಿ ಅನೇಕ ಕೆಲಸಗಳು ಆಗುತ್ತಿವೆ ಎಂದರು.

ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಸಚಿವ ಗಡ್ಕರಿಯವರು ಇಡೀ ದೇಶದಲ್ಲಿ ಕರ್ನಾಟಕ ರಾಜ್ಯಕ್ಕೆ ಅತೀ ಹೆಚ್ಚು ಯೋಜನೆ ನೀಡಿದ್ದಾರೆ. ಎಲ್ಲ ರಸ್ತೆ ಅಂಡರ್‌ ಪಾಸ್‌ಗಳನ್ನು ಮಾಡಿಕೊಡಲಾಗುವುದು ಎಂದು ಸಚಿವ ಗಡ್ಕರಿ ಭರವಸೆ ನೀಡಿದ್ದಾರೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ಅಂಡರ್‌ ಪಾಸ್‌ ನಿರ್ಮಾಣ ಸುಲಭವಾಗಲಿದೆ ಎಂದರು.

ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ 42 ಸಾವಿರ ಕೋಟಿ ರೂ. ಅನುದಾನ ಕರ್ನಾಟಕಕ್ಕೆ ನೀಡಲಾಗಿದೆ. ಪಕ್ಷಾತೀತವಾಗಿ ಎಲ್ಲ ಸಂಸದರ ಪ್ರಸ್ತಾವಗಳಿಗೆ ಸಚಿವ ಗಡ್ಕರಿ ಮಂಜೂರಾತಿ ನೀಡಿದ್ದಾರೆ ಎಂದು ಸಚಿವ ಜೋಶಿ ಹೇಳಿದರು.

ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು, ಪ್ರತಿದಿನ 70 ಕಿ.ಮೀ ಹೆದ್ದಾರಿ ನಿರ್ಮಾಣ ಗುರಿ ಹೊಂದಲಾಗಿದೆ. ರಾಜ್ಯ ಹೆದ್ದಾರಿಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಇನ್ನೂ ಹೆಚ್ಚು ನೆರವು ನೀಡಬೇಕೆಂದು ಮನವಿ ಮಾಡಿದರು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಸಚಿವ ಗಡ್ಕರಿ ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡುವ ಮೂಲಕ ಪ್ರಗತಿಗೆ ಸಹಕರಿಸಿದ್ದಾರೆ ಎಂದರು.

ಆಹಾರ ಸಚಿವ ಉಮೇಶ ಕತ್ತಿ ಮಾತನಾಡಿ, ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಷಟ³ಥವನ್ನಾಗಿ ನಿರ್ಮಿಸುವ ಮೂಲಕ ಗಡ್ಕರಿ ಈ ಭಾಗದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದರು. ಧಾರ್ಮಿಕ ದತ್ತಿ-ವಕ್ಫ್  ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿ, ಸಂಸದರಾದ ಮಂಗಲಾ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ, ರಮೇಶ ಜಿಗಜಿಣಗಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ದುರ್ಯೋಧನ ಐಹೊಳೆ, ಅನಿಲ್‌ ಬೆನಕೆ, ಅಭಯ ಪಾಟೀಲ, ಮಹಾದೇವಪ್ಪ ಯಾದವಾಡ, ಮಹಾಂತೇಶ ದೊಡ್ಡಗೌಡ್ರ, ಮಹೇಶ ಕುಮಠಳ್ಳಿ, ವೀರಣ್ಣ ಚರಂತಿಮಠ, ಬಸನಗೌಡ ಪಾಟೀಲ ಯತ್ನಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next