Advertisement

ರಸ್ತೆ ಅಭಿವೃದ್ಧಿ ಬೆನ್ನಲ್ಲೇ ಅಗೆತ

10:55 AM Sep 12, 2017 | Team Udayavani |

ಕಲಬುರಗಿ: ಮಹಾನಗರದಲ್ಲಿ ರಸ್ತೆಗಳು ಅಭಿವೃದ್ಧಿಯಾಗುತ್ತಿವೆ ಎಂದು ಸಂತೋಷಪಡುತ್ತಿದ್ದರೆ, ಮತ್ತೂಂದೆಡೆ ಒಳಚರಂಡಿ ನಿರ್ಮಾಣ ಕಾಮಗಾರಿಗಾಗಿ ಮನಸೋ ಇಚ್ಚೆ ಅಗೆಯುತ್ತಿರುವುದರಿಂದ ಸಿಸಿ ರಸ್ತೆಗಳು ಮೊದಲಿನಂತಾಗುತ್ತಿರುವುದು ಕಲಬುರಗಿ ಮಹಾನಗರದ ದೌರ್ಭಾಗ್ಯ ಎಂದು ಹೇಳಬಹುದು.

Advertisement

ಹಲವು ವರ್ಷಗಳ ಬಳಿಕ ರಸ್ತೆಗಳನ್ನು ಕಾಣದ ನಗರದ ಹಲವು ಬಡಾವಣೆಗಳಲ್ಲಿ ಸ್ವಲ್ಪ ಪರವಾಗಿಲ್ಲ ಎನ್ನುವಂತೆ ಸಿಸಿ ರಸ್ತೆಗಳು ನಿರ್ಮಾಣವಾಗಿವೆ. ಆದರೆ ಬಹುತೇಕ ರಸ್ತೆಗಳನ್ನು ಈಗ ಅಗೆದಿರುವುದು ಕಂಡು ಬರುತ್ತಿದೆ. ಒಳಚರಂಡಿ ಕಾಮಗಾರಿ ಮ್ಯಾನುವೆಲ್‌ಗ‌ಳನ್ನು ಅಗೆದು ಹೊಸದಾಗಿ ಹಾಕಿದ್ದರಿಂದ ರಸ್ತೆ ಸಂಪೂರ್ಣ ಒಡೆದು ಹಾಳಾಗಿದೆ. ನಗರದಲ್ಲಿ ಎರಡು ದಿನಗಳ ಸುರಿದ ಮಳೆಗೆ ರಸ್ತೆಯೆಲ್ಲ ಮೊದಲಿನಂತೆ ಕೊಚ್ಚೆಯಂತಾಗಿದೆ. 

ಅಭಿವೃದ್ಧಿಯಾದ ಮಹಾನಗರದ ಅನೇಕ ರಸ್ತೆಗಳನ್ನು ಅದರಲ್ಲೂ ವೆಂಕಟೇಶ ನಗರ, ಮಹಾವೀರ ನಗರ, ಪಂಚಶೀಲ ನಗರ, ಶಾಸ್ತ್ರೀ ನಗರ, ಶಾಂತಿ ನಗರ, ಉದನೂರ ರಸ್ತೆ, ನ್ಯೂರಾಘವೇಂದ್ರ ಕಾಲೋನಿ, ಸ್ಟೇಷನ್‌ ಬಜಾರ, ಸುಭಾಷ ಚೌಕ್‌, ಬ್ರಹ್ಮಪುರ ಸೇರಿದಂತೆ ವಿವಿಧೆಡೆ ರಸ್ತೆಗಳನ್ನು ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ಈಗಷ್ಟೇ ಮಾಡಲಾಗಿದೆ.

ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ|ಶರಣಪ್ರಕಾಶ ಪಾಟೀಲ ಅವರ ಮನೆ ವೆಂಕಟೇಶ ನಗರದಲ್ಲೇ ಇದೆ. ಸಚಿವರ ಮನೆ
ಕೂಗಳತೆ ದೂರದಲ್ಲೇ ರಸ್ತೆ ಮನಸ್ಸಿಗೆ ಬಂದಂತೆ ಹಡ್ಡಲಾಗಿದೆ. ಯಾವ ಪರಿ ಅಗೆಯಲಾಗಿದೆ ಎಂದರೆ ಅಭಿವೃದ್ಧಿಯಾದ ರಸ್ತೆಯೇ ಕಾಣುತ್ತಿಲ್ಲ. ರಸ್ತೆಗಳನ್ನು ಅಗೆಯುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಒಳಚರಂಡಿ ನಿರ್ಮಾಣ ಕಾಮಗಾರಿ ಗುತ್ತಿಗೆದಾರರು ನಂತರ ರಸ್ತೆ ಅಭಿವೃದ್ಧಿಪಡಿಸಿ ಕೊಡುವುದಾಗಿ ಸಬೂಬು ಹೇಳುತ್ತಿದ್ದಾರೆ.

ನಗರದ ಕೆಲವೆಡೆ ಅಭಿವೃದ್ಧಿ ರಸ್ತೆಗಳನ್ನು ಕುಡಿಯುವ ನೀರಿನ ಪೈಪ್‌ ಸಲುವಾಗಿ ಇಲ್ಲವೇ ಇತರ ಯಾವುದರ ಸಲುವಾಗಿಯೂ ಅಗೆದಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ರಸ್ತೆ ಅಗೆದವರಿಗೆ ದಂಡ ಹಾಕಲು ಮುಂದಾಗಬೇಕಿದ್ದ ಪಾಲಿಕೆ ಮಾತ್ರ ದಿಟ್ಟ ಕ್ರಮಕ್ಕೆ ಮುಂದಾಗುತ್ತಿಲ್ಲ.

Advertisement

ಕೆಲ ರಸ್ತೆಗಳನ್ನು ಹೈದ್ರಾಬಾದ್‌ ಕರ್ನಾಟಕ ಮಂಡಳಿಯಿಂದ ಅಭಿವೃದ್ಧಿ ಮಾಡಿದರೆ ಇದೇ ರಸ್ತೆಯನ್ನು ಪಾಲಿಕೆಯವರು ರಸ್ತೆ ಅಭಿವೃದ್ಧಿ ಮಾಡಿದ್ದಾರೆ ಎಂದು ವರದಿಯಾಗಿದೆ. ಒಟ್ಟಾರೆ ಒಂದು ಕಾಮಗಾರಿಯಾದರೆ ಮಗದೊಂದು ಬರೀ ಬಿಲ್‌ ಎತ್ತುವಳಿಯಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಈ ನಿಟ್ಟಿನಲ್ಲಿ ಸಮಗ್ರ ತನಿಖೆಯಾದಲ್ಲಿ ಅವ್ಯವಹಾರ ಬಯಲಿಗೆ ಬರುತ್ತದೆ.

ಎಚ್‌ಕೆಆರ್‌ಡಿಬಿಯಿಂದ ಕೈಗೊಳ್ಳಲಾದ ಕಾಮಗಾರಿಗಳನ್ನೇ ಪಾಲಿಕೆಯಿಂದಲೂ ಕೈಗೊಂಡ ಬಗ್ಗೆ ಮಾಹಿತಿ ಕೇಳಿ
ಬಂದಿದೆಯಲ್ಲದೇ ಮಂಡಳಿಯಿಂದ ಮಾಡಲಾದ ರಸ್ತೆಗಳನ್ನು ಅಗೆದು ಒಳಚರಂಡಿ ಕಾಮಗಾರಿ ಮಾಡಿದ್ದರಿಂದ ಕೆಲವೆಡೆ ರಸ್ತೆಗಳೇ ಹಾಳಾಗಿವೆ. ಈ ಕುರಿತು ತನಿಖೆಗೆ ಸೂಚನೆ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಹಾಗೂ ಎಚ್‌ಕೆಆರ್‌ಡಿಬಿ ಅಧ್ಯಕ್ಷ ಡಾ| ಶರಣಪ್ರಕಾಶ ಪಾಟೀಲ ಕಳೆದ ಜುಲೈನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಆದರೆ ತನಿಖೆ ಫಲಿತಾಂಶ ಏನಾಯಿತು ಎಂಬುದೇ ಇಲ್ಲಿಯವರೆಗೆ ಬಹಿರಂಗಗೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next