Advertisement

ರಸ್ತೆಗಳ ಚಿತ್ರಣವೇ ಬದಲಾಗುತ್ತೆ!

12:47 PM Nov 03, 2017 | Team Udayavani |

ಬೆಂಗಳೂರು: ಮುಂದಿನ ಮೂರ್‍ನಾಲ್ಕು ತಿಂಗಳಲ್ಲಿ ನಗರದ ರಸ್ತೆಗಳ ಸಂಪೂರ್ಣ ಚಿತ್ರಣವೇ ಬದಲಾಗಲಿದ್ದು, ಈಗ ದೂರುತ್ತಿರುವವರೇ ಇನ್ನು ಕೆಲವೇ ದಿನಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

Advertisement

ನವೆಂಬರ್‌ 6ರ ಹೊತ್ತಿಗೆ ನಗರದ ರಸ್ತೆಗಳು ಗುಂಡಿಮುಕ್ತ ಆಗಲಿವೆ. ಅಷ್ಟೇ ಅಲ್ಲ, 100 ಕಿ.ಮೀ. ವೈಟ್‌ಟಾಪಿಂಗ್‌ ರಸ್ತೆ ಆಗಲಿದೆ. 1,400 ಕಿ.ಮೀ. ರಸ್ತೆಗಳು ಹೊಸದಾಗಿ ನಿರ್ಮಾಣ ಆಗಲಿವೆ. 20 ಕಿ.ಮೀ. ಟೆಂಡರ್‌ ಶ್ಯೂರ್‌ ರಸ್ತೆಗಳು ಸೇರ್ಪಡೆಗೊಳ್ಳಲಿವೆ. ಒಟ್ಟಾರೆ ಮುಂದಿನ ಮೂರ್‍ನಾಲ್ಕು ತಿಂಗಳಲ್ಲಿ ನಗರದ ರಸ್ತೆಗಳ ಸ್ವರೂಪ ಬದಲಾಗಲಿದೆ ಎಂದು ಹೇಳಿದರು. 

ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ನಗರದ ಮೂಲಸೌಕರ್ಯಗಳ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ 1,400 ಕಿ.ಮೀ ಉದ್ದದ ರಸ್ತೆ ಪೈಕಿ ಈಗಾಗಲೇ 500 ಕಿ.ಮೀ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಡಿಸೆಂಬರ್‌ ಒಳಗೆ ಪೂರ್ಣಗೊಳ್ಳಲಿದೆ. ಭವಿಷ್ಯದಲ್ಲಿ ಈ ರಸ್ತೆಗಳು ಹಂತ-ಹಂತವಾಗಿ ವೈಟ್‌ಟಾಪಿಂಗ್‌ಗೆ ಪರಿವರ್ತನೆಗೊಳ್ಳಲಿವೆ. ಈಗಾಗಲೇ ಕೈಗೆತ್ತಿಕೊಂಡ 100 ಕಿ.ಮೀ. ವೈಟ್‌ಟಾಪಿಂಗ್‌ ರಸ್ತೆ ಮಾರ್ಚ್‌-ಏಪ್ರಿಲ್‌ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. 

ತುರ್ತು ಸ್ವಾಧೀನ: ಸಿಗ್ನಲ್‌ ಫ್ರೀ ಕಾರಿಡಾರ್‌ ನಿರ್ಮಾಣಕ್ಕೆ ಭೂಸ್ವಾಧೀನ ತೊಡಕಾಗಿದ್ದು, ಸಮಸ್ಯೆ ಇರುವ ಕಡೆಗೆ “ತುರ್ತು ಭೂಸ್ವಾಧೀನ’ ಅಡಿ ಭೂಮಿಯನ್ನು ವಶಪಡಿಸಿಕೊಂಡು ಕಾಮಗಾರಿ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲಾಗುವುದು. ಹೋಪ್‌ ಫಾರಂನಲ್ಲಿ 1,825 ಚದರ ಮೀ. ಸ್ವಾಧೀನಕ್ಕೆ ಈ ನಿಯಮ ಅನ್ವಯಿಸಲಾಗುತ್ತಿದೆ. ಇನ್ನು ಎಚ್‌ಎಎಲ್‌ಗೆ ಸೇರಿದ ಭೂಮಿ ಸ್ವಾಧೀನಕ್ಕೆ ಅನುಮತಿ ದೊರಕಿದ್ದು, ಇದಕ್ಕೆ ಪರ್ಯಾಯವಾಗಿ ಅದೇ ಮಾರ್ಗದಲ್ಲಿ 58 ಕೋಟಿ ರೂ. ಮೊತ್ತದಲ್ಲಿ 910 ಚದರ ಮೀಟರ್‌ ವಿಂಡ್‌ ಟನಲ್‌ ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Advertisement

ಹೈಡೆನ್ಸಿಟಿ ಕಾರಿಡಾರ್‌: ಅಲ್ಲದೆ, ಹಳೇ ಮದ್ರಾಸ್‌ ರಸ್ತೆ, ಹಳೆಯ ವಿಮಾನ ನಿಲ್ದಾಣ ರಸ್ತೆ ಹಾಗೂ ಬಳ್ಳಾರಿ ರಸ್ತೆಯಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಇರುವ ಹಿನ್ನೆಲೆಯಲ್ಲಿ “ಹೈಡೆನ್ಸಿಟಿ ಕಾರಿಡಾರ್‌’ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಬಸ್‌ ಬೇ, ಫ‌ುಟ್‌ಪಾತ್‌, ಬೀದಿ ದೀಪ ಮತ್ತಿತರ ಸೌಕರ್ಯಗಳು ಇರಲಿವೆ ಎಂದು ಹೇಳಿದರು. 

ಜತೆಗೆ ಜನವರಿ ವೇಳೆಗೆ ನಗರದ ಶೇ.80ರಷ್ಟು ಕೊಳಚೆ ನೀರು ಸಂಸ್ಕರಣೆ ಆಗಲಿದೆ. ಇದರಿಂದ ಕೆರೆಗಳಿಗೆ ಕೊಳಚೆನೀರು ಸೇರ್ಪಡೆ ಬಹುತೇಕ ಕಡಿಮೆ ಆಗಲಿದೆ. ಪ್ರಸ್ತುತ ನಿತ್ಯ ಹೊರಬರುವ 1,800 ಎಂಎಲ್‌ಡಿ ಪೈಕಿ 400 ಎಂಎಲ್‌ಡಿ ನೀರು ಮಾತ್ರ ಸಂಸ್ಕರಣೆ ಆಗುತ್ತಿದೆ ಎಂದರು. 

ಐಟಿ ಕಂಪೆನಿಗಳ ಮನವಿ ಮೇರೆಗೆ ಸರ್ಜಾಪುರದ ಹೊರವರ್ತುಲ ರಸ್ತೆಯನ್ನು ಕೂಡುವ 14 ರಸ್ತೆಗಳ ಅಭಿವೃದ್ಧಿಗೆ ಮುಂದಾಗಿದ್ದು, ಆ ಮಾರ್ಗದ ಸುಮಾರು 80 ಕಿ.ಮೀ. ರಸ್ತೆಯನ್ನು ಒಟ್ಟಾರೆ 500 ಕೋಟಿ ರೂ.ಗಳಲ್ಲಿ ವೈಟ್‌ಟಾಪಿಂಗ್‌ ಮಾಡಲಾಗುವುದು. ಇದಕ್ಕಾಗಿ ತಕ್ಷಣದಲ್ಲೇ 150 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದು, ಉಳಿದ ಹಣವನ್ನು ಮುಂದಿನ ಬಜೆಟ್‌ನಲ್ಲಿ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ಆಯುಕ್ತ ಡಾ.ಎನ್‌. ಮಂಜುನಾಥ ಪ್ರಸಾದ್‌ ಇದ್ದರು. 

ನಿತ್ಯ 1.60 ಲಕ್ಷ ಜನ ಊಟ: ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ನಿತ್ಯ ಸರಾಸರಿ 1.62 ಲಕ್ಷ ಜನ ತಿಂಡಿ-ಊಟ ಸೇವಿಸುತ್ತಿದ್ದಾರೆ ಎಂದು ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು. ಇದುವರೆಗೆ 93,12,700 ಜನ ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ-ಊಟ ಸೇವಿಸಿದ್ದಾರೆ. ಪ್ರತಿದಿನ ಸರಾಸರಿ 1.62 ಲಕ್ಷ ಮಂದಿ ಇದರ ಲಾಭ ಪಡೆದಿದ್ದಾರೆ ಎಂದರು. ಇನ್ನು ಜಾಗದ ಅಲಭ್ಯತೆ ಇರುವುದರಿಂದ ನಗರದ 14 ಕಡೆಗಳಲ್ಲಿ ತಾತ್ಕಾಲಿಕವಾಗಿ ಮೊಬೈಲ್‌ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗುವುದು. ಈಗಾಗಲೇ 141 ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. 16 ಉದ್ಘಾಟನೆಗೆ ಸಿದ್ಧಗೊಂಡಿದ್ದು, 5 ನಿರ್ಮಾಣ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು. 

ಕೆರೆಗಳಿಗೆ ಗೇಟು ನಿರ್ಮಾಣ: ಬೆಳ್ಳಂದೂರು ಮತ್ತು ವರ್ತೂರು ಕೆರೆಗಳು ಭರ್ತಿಯಾದಾಗ, ನೀರು ಹೊರ ಹಾಕಲು ಗೇಟುಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಕೆರೆಗಳು ತುಂಬಿದ ನಂತರ ನೀರು ಕೋಡಿಗೆ ಹರಿದುಹೋಗುತ್ತದೆ. ಇದು ನೆರೆಗೆ ಕಾರಣವಾಗುತ್ತದೆ. ಆದ್ದರಿಂದ ಎರಡೂ ಕೆರೆಗಳಿಗೆ ಪ್ರತ್ಯೇಕವಾಗಿ ತೂಬುಗಳ ಮಾದರಿಯಲ್ಲಿ ನಾಲ್ಕು ಗೇಟುಗಳನ್ನು ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಕೆರೆ ಭರ್ತಿಯಾಗುವ ಲಕ್ಷಣ ಕಂಡುಬರುತ್ತಿದ್ದಂತೆ ಈ ಗೇಟುಗಳನ್ನು ತೆರೆದು, ನೀರು ಹರಿಸಲಾಗುವುದು ಎಂದು ಸಚಿವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next