Advertisement

ಹದಗೆಟ್ಟ ಅಂಜುಟಗಿ-ಝಳಕಿ ರಸ್ತೆ

06:25 PM Aug 26, 2022 | Shwetha M |

ಇಂಡಿ: ತಾಲೂಕಿನ ಅಂಜುಟಗಿ-ಝಳಕಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಸೇರಿದಂತೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಜನರು ನಿತ್ಯ ಹೈರಾಣಾಗುತ್ತಿದ್ದು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

Advertisement

ಇಂಡಿ ಪಟ್ಟಣದಿಂದ ಕೇವಲ 18 ಕಿ.ಮೀ ದೂರದಲ್ಲಿರುವ ಝಳಕಿ ರಸ್ತೆ ದುಸ್ಥಿತಿ ಜನರಿಗೆ ಕಿರಿಕಿರಿಯುಂಟು ಮಾಡುತ್ತಿದೆ. ಶಿಕ್ಷಣ ಕಾಶಿ ಎಂದು ಬಿಂಬಿಸುವ ಈ ಗ್ರಾಮದಲ್ಲಿ ನಿತ್ಯ ಸಾವಿರಾರೂ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಈ ಗ್ರಾಮಕ್ಕೆ ಬಂದು ಹೋಗಬೇಕು. ಏಕಂದರೆ ಇಲ್ಲಿ ಎಂಜಿನಿಯರಿಂಗ್‌, ಸರ್ಕಾರಿ ಪಾಲಿಟೆಕ್ನಿಕ್‌, ಐಟಿಐ, ಡಿಪ್ಲೊಮಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಿಯು ಕಾಲೇಜು ಹೀಗೆ ಹಲವಾರು ಶಾಲಾ-ಕಾಲೇಜುಗಳು, ವಿದ್ಯಾ ಮಂದಿರಗಳು ಇಲ್ಲಿ ನಿರ್ಮಾಣವಾಗಿವೆ. ಆದರೆ ಸರಿಯಾದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಬಸ್‌ ಸಿಗುವುದಿಲ್ಲ. ಇಂಡಿಯಿಂದ 18 ಕಿ.ಮೀ ಸಂಚರಿಸಲು ಒಂದು ಗಂಟೆ ಕಾಲಾವಕಾಶ ಬೇಕು. ಅದೇ ರಸ್ತೆ ಉತ್ತಮವಾಗಿದ್ದರೆ ಸರಿಯಾದ ಸಮಯದಲ್ಲಿ ಬಸ್‌ ಒಡಾಡಬಹುದು ಎಂದು ಸಾರ್ವಜನಿಕರು ಹೇಳುತ್ತಾರೆ.

ಝಳಕಿ, ಜೇವೂರ, ಚಡಚಣ, ಶಿರಾಡೋಣ, ಮಂಗಳವೇಡ, ಪ್ರಸಿದ್ಧ ದೇವಸ್ಥಾನವಾದ ಪಂಢರಪುರ, ಪುಣೆ, ಮುಂಬೈವರೆಗೆ ಹಾದು ಹೋಗಲು ಈ ಮಾರ್ಗವಿರುವುದರಿಂದ ಸಾವಿರಾರು ವಾಹನಗಳ ನಿತ್ಯ ಇಲ್ಲಿ ಓಡಾಡುತ್ತವೆ. ಆದರೆ, ರಸ್ತೆ ದುರಸ್ತಿ ಮಾಡುವಲ್ಲಿ ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರ ಆರೋಪಿಸುತ್ತಿದ್ದಾರೆ.

ತಾಲೂಕಿನಾದ್ಯಂತ ಹಾದು ಹೋದ ರಾಜ್ಯ ಹೆದ್ದಾರಿಯಲ್ಲಿ ತಗ್ಗು-ಗುಂಡಿಗಳು ಬಿದ್ದು ಸಂಪೂರ್ಣ ಹದಗೆಟ್ಟಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇಂಡಿ ತಾಲೂಕಿನಿಂದ ಬೇರ್ಪಟ್ಟು ಚಡಚಣ ಹೊಸ ತಾಲೂಕಾಗಿದೆ. ಆದರೆ ಹೊಸ ತಾಲೂಕಿಗೆ ಆಗಮಿಸುವಾಗ ರಸ್ತೆ ಗುಂಡಿಗಳು ಆಹ್ವಾನ ನೀಡುತ್ತಿವೆ. ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯವೋ ಅಥವಾ ಜನಪ್ರತಿನಿಧಿಗಳ ನಿರ್ಲಕ್ಷ್ಯವೋ ಗೊತ್ತಾಗುತ್ತಿಲ್ಲ. ಒಟ್ಟಾರೆ ವಾಹನ ಸವಾರರು ಮತ್ತು ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ಈ ರಸ್ತೆ ಎರಡೂ ಬದಿಯಲ್ಲಿ ವಾಹನಗಳು ಎದುರು ಬದುರಾದರೆ ವಾಹನ ಬೀಳುವ ಭಯ ಶುರುವಾಗುತ್ತದೆ. ಕಳೆದ ಐದಾರು ವರ್ಷಗಳಿಂದ ರಸ್ತೆಯ ಬಲ ಮತ್ತು ಎಡ ಬದಿಯಲ್ಲಿ ಆಳವಾದ ತಗ್ಗು-ಗುಂಡಿಗಳಿಗೆ ಮೊರಂ ಹಾಕುವ ಕೆಲಸ ಯಾರೊಬ್ಬರೂ ಮಾಡಿಲ್ಲ. ಈ ರಸ್ತೆಯಲ್ಲಿ ಕಳೆದ ಎರಡ್ಮೂರು ತಿಂಗಳಲ್ಲಿ ಸುಮಾರು ಮೂರ್‍ನಾಲ್ಕು ಜನ ದ್ವಿಚಕ್ರ ವಾಹನ ಸವಾರರು ಅಪಘಾತ ಸಂಭವಿಸಿ ಜೀವ ತೆತ್ತ ಉದಾಹರಣೆಗಳೂ ಇವೆ. ಇಷ್ಟಾದರೂ ಯಾವೊಬ್ಬ ಅಧಿಕಾರಿಗಳು, ಆಡಳಿತ ವರ್ಗದವರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

Advertisement

ತಾಲೂಕಿನ ಅನೇಕ ರಾಜ್ಯ, ಜಿಲ್ಲಾ ರಸ್ತೆ ಬದಿಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಮುಂಜಾಗ್ರತೆ ಮೂಡಿಸುವ ಫಲಕಗಳು ಅಳವಡಿಸಿಲ್ಲ. ಲೋಕೋಪಯೋಗಿ ಇಲಾಖೆ ಅಧಿ ಕಾರಿಗಳು ಕಂಡು ಕಾಣದಂತೆ, ಕೇಳಿ ಕೇಳದಂತೆ ಮೂಕವಿಸ್ಮಿತರಾಗಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.

ಈಗಾಗಲೇ ಝಳಕಿಯಿಂದ ಅಂಜುಟಗಿ ಕಡೆಗೆ 4.5 ಕಿ.ಮೀ ರಸ್ತೆ ಹಾಗೂ ಝಳಕಿಯಿಂದ ಜೇವೂರವರೆಗೆ ರಸ್ತೆ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ. ಇನ್ನು 15 ದಿನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು. -ದಯಾನಂದ ಮಠ, ಇಇ, ಲೋಕೋಪಯೋಗಿ ಇಲಾಖೆ, ಇಂಡಿ

ಯಲಗೊಂಡ ಬೇವನೂರ

Advertisement

Udayavani is now on Telegram. Click here to join our channel and stay updated with the latest news.

Next