Advertisement
ಮಡಂತ್ಯಾರು: ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಶತಮಾನ ಕಳೆದು ಅಭಿವೃದ್ಧಿ ಹೊಂದುತ್ತಾ ಬಂದಿದೆ. ಆದರೆ ಇಲ್ಲಿಗೆ ಬರುವ ವಿದ್ಯಾರ್ಥಿಗಳು ರಸ್ತೆ ದಾಟುವ ವೇಳೆ ಸುರಕ್ಷತೆ ಒದಗಿಸುವ ಆವಶ್ಯಕತೆ ಇದೆ. ಮಚ್ಚಿನ ಪ್ರಾಥಮಿಕ ಶಾಲೆ ಮಡಂತ್ಯಾರು-ಕಲ್ಲೇರಿ ಮುಖ್ಯರಸ್ತೆಯ ಪಕ್ಕದಲ್ಲೇ ಇದ್ದರೂ ಇಲ್ಲಿ ‘ಶಾಲಾ ವಠಾರ’ ಎನ್ನುವ ಸೂಚನಾ ಫಲಕ ಎಲ್ಲೂ ಕಾಣಲು ಸಿಗುವುದಿಲ್ಲ. ಹಲವು ವರ್ಷಗಳ ಹಿಂದೆ ಯುವಕಮಂಡಲದ ವತಿಯಿಂದ ಹಾಕಲಾಗಿದ್ದ ಸೂಚನಾ ಫಲಕ ಕೂಡ ತುಕ್ಕುಹಿಡಿದು ಬರವಣಿಗೆ ಅಳಿಸಿಹೋಗಿದೆ.
ಶಾಲೆ ಬಿಟ್ಟ ತತ್‌ಕ್ಷಣ ಮಕ್ಕಳು ಮುಖ್ಯ ರಸ್ತೆಯತ್ತ ಓಡಿಬರುತ್ತಾರೆ. ಇದು ಹೆತ್ತವರ ಆತಂಕಕ್ಕೆ ಕಾರಣವಾಗಿದೆ. ಮುಖ್ಯರಸ್ತೆಯಲ್ಲಿ ಬರುವ ವಾಹನಗಳು ಈ ಸ್ಥಳದಲ್ಲಿ ವೇಗ ಕಡಿಮೆಗೊಳಿಸಬೇಕೆಂಬ ಸೂಚನಾ ಫಲಕವೂ ಇಲ್ಲದೇ ಇರುವುದರಿಂದ ವಾಹನಗಳು ವೇಗವಾಗಿ ಬರುತ್ತಿರುತ್ತವೆ. ಇದರಿಂದಾಗಿ ಹಲವು ಬಾರಿ ಇಲ್ಲಿ ಅಪಘಾತ ಸಂಭವಿಸಿವೆ. ಶಿಕ್ಷಕರಿಂದ ಸಂಪೂರ್ಣ ನಿಯಂತ್ರಣ ಅಸಾಧ್ಯ
ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ರಸ್ತೆದಾಟುವಾಗ ಸಾಧ್ಯವಾದಷ್ಟು ಎಚ್ಚರಿಕೆ ವಹಿಸುವಂತೆ ಮಾಡುತ್ತಾರೆ. ಆದರೆ ಮಕ್ಕಳು ಅಡ್ಡಾದಿಡ್ಡಿ ಓಡುವುದು ಇದ್ದೇ ಇದೆ. ಹಾಗಾಗಿ ಇಲ್ಲಿ ವಾಹನ ಚಾಲಕರು ಕೂಡ ಒಂದಷ್ಟು ಹೆಚ್ಚಿನ ಎಚ್ಚರದಿಂದ ವಾಹನ ಚಲಾಯಿಸುವಂತೆ ಮಾಡಬೇಕಾಗಿದೆ. ಸ್ಥಳೀಯ ವಾಹನ ಚಾಲಕರಿಗೆ ಶಾಲಾ ಮಕ್ಕಳ ಬಗ್ಗೆ ತಿಳಿದಿರುತ್ತದೆ. ಅವರು ಜಾಗರೂಕತೆ ವಹಿಸುತ್ತಾರೆ. ಆದರೆ ಇತರರು ವೇಗವಾಗಿ ವಾಹನ ಚಲಾಯಿಸುತ್ತಾರೆ.
Related Articles
ಖಾಸಗಿ ಶಾಲೆಗಳಲ್ಲಿ ಮಕ್ಕಳ ಭದ್ರತೆಗಾಗಿ ಭದ್ರತಾ ಸಿಬಂದಿ ನೇಮಿಸುತ್ತಾರೆ. ಇವರು ರಸ್ತೆ ದಾಟುವಾಗಲೂ ಸಹಾಯ ಮಾಡುತ್ತಾರೆ. ಆದರೆ ಇದು ಸರಕಾರಿ ಶಾಲೆ. ಇಲ್ಲಿ ವಾಚ್‌ಮನ್ ನಿಯೋಜನೆ ಕಷ್ಟಕರ. ಸಂಘ ಸಂಸ್ಥೆಗಳು ಈ ಬಗ್ಗೆ ಆಸಕ್ತಿ ವಹಿಸಿದರೆ ವಿದ್ಯಾರ್ಥಿಗಳಿಗೆ ಸುರಕ್ಷತೆ, ಹೆತ್ತವರು ನೆಮ್ಮದಿಯ ನಿಟ್ಟುಸಿರುವ ಬಿಡಬಹುದು. ಇಲ್ಲವಾದರೆ ಪೊಲೀಸರು ತುರ್ತು ಗಮನ ನೀಡುವುದು ಅವಶ್ಯ. ನೆತ್ತರ, ತಣ್ಣೀರುಪಂಥ, ಬಂಗೇರಕಟ್ಟೆ ಕಡೆಯಿಂದ ಬರುವ ಮಕ್ಕಳು ಮುಖ್ಯರಸ್ತೆಯಿಂದಲೇ ನಡೆದುಕೊಂಡು ಬರುವುದು ಅನಿವಾರ್ಯವಾಗಿದೆ.
Advertisement
ಬ್ಯಾರಿಕೇಡ್‌ಗೆ ಮನವಿ ಶಾಲಾ ಮಕ್ಕಳು ದಿನ ನಿತ್ಯ ಶಾಲೆ ಬಿಡುವಾಗ ಮುಖ್ಯ ರಸ್ತೆ ಕಡೆ ಓಡಿ ಬರುವುದು ಅಪಾಯಕಾರಿಯಾಗಿದೆ. ಹಲವು ಬಾರಿ ಅನಾಹುತಗಳು ಸಂಭವಿಸಿವೆ. ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಬ್ಯಾರಿಕೇಡ್ ನೀಡುವ ಬಗ್ಗೆ ಮನವಿ ಮಾಡಲಾಗಿದೆ. ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
– ಹರೀಶ್ ಕುಮಾರ್, ಬಳ್ಳಮಂಜ – ಪ್ರಮೋದ್ ಬಳ್ಳಮಂಜ