ಚಿತ್ರದುರ್ಗ: ನಗರದಲ್ಲಿ ಅಗೆದಿರುವ ರಸ್ತೆಗಳನ್ನು ಆದಷ್ಟು ತ್ವರಿತ ಗತಿಯಲ್ಲಿ ದುರಸ್ತಿ ಮಾಡಬೇಕಿದೆ. ಇಲ್ಲದಿದ್ದರೆ ನೀರುಸರಬರಾಜು ಪೈಪ್‌ಲೈನ್ ಸಂಪರ್ಕಕ್ಕೆ ತೊಂದರೆಯಾಗಲಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಸರಸ್ವತಿಪುರಂ ಬಡಾವಣೆಯಲ್ಲಿ ಗುರುವಾರ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಮೃತ್ ಯೋಜನೆಯಡಿ ಎರಡನೇ ಹಂತದ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಇದಕ್ಕೆ ಸಂಬಂ ಧಿಸಿದಂತೆ ಪೈಪ್‌ಪೈನ್ ಅಳವಡಿಸಲು ರಸ್ತೆಗಳನ್ನು ಅಗೆಯಲಾಗಿದೆ. ಇಂತಹ ರಸ್ತೆಗಳನ್ನು 13 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಮಾಡಿಸಲಾಗುತ್ತಿದೆ ಎಂದರು. ಇಂದು 50 ಲಕ್ಷ ರೂ. ವೆಚ್ಚದಲ್ಲಿ ಇಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲು ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ಎಲ್ಲಾ ಸಮುದಾಯಗಳನ್ನು ಒಳಗೊಂಡಿರುವ ಪಕ್ಷ : ಸತೀಶ್ ಜಾರಕಿಹೊಳಿ
ಅದರಂತೆ ಸರಸ್ವತಿಪುರಂ ಬಡಾವಣೆಯ ಮೂರನೇ ಮುಖ್ಯ ರಸ್ತೆಯಲ್ಲಿ ಐದು ರಸ್ತೆಗಳು, ಐಯುಡಿಪಿ ಲೇಔಟ್‌ನಲ್ಲಿ ರಸ್ತೆಗಳು, ಜಟ್‌ಪಟ್ ನಗರ, ಕರುವಿನಕಟ್ಟೆ ಸರ್ಕಲ್, ಕಬೀರಾನಂದಾಶ್ರಮದ ಬಳಿಯ ಕೊಳಚೆ ಪ್ರದೇಶದಲ್ಲಿನ ರಸ್ತೆಗಳು ಸೇರಿದಂತೆ ಇನ್ನೂ ಕೆಲವು ಕಡೆಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ನಗರಸಭೆ ಸದಸ್ಯೆ ತಾರಕೇಶ್ವರಿ, ಪೌರಾಯುಕ್ತ ಜೆ.ಟಿ. ಹನುಮಂತರಾಜು, ನಗರಸಭೆ ಇಂಜಿಯರ್‌ಗಳಾದ ಮನೋಹರ್, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಯ್ಯ, ಇಂಜಿನಿಯರ್ ಚೇತನಾ ಹಾಗೂ ಸರಸ್ವತಿಪುರಂ ಬಡಾವಣೆ ನಿವಾಸಿಗಳು ಇದ್ದರು.