Advertisement
ಮಳೆರಾಯ ಆಗಲೇ ತನ್ನ ಇರವನ್ನು ತೋರಿಸಿದ್ದಾನೆ. ಸಣ್ಣ ಮಳೆಗೆ ಗ್ರಾಮೀಣ ಪ್ರದೇಶದ ಹಲವು ಕಡೆಗಳ ರಸ್ತೆಗಳು ದುಃಸ್ಥಿತಿಗೆ ತಲುಪಿವೆ. ಇದರ ನಡುವೆ ಮುಡಿಪಿನಡ್ಕ- ಪೇರಾಲು ರಸ್ತೆ ಕಾಮಗಾರಿ ನಡೆಯುತ್ತಿದೆ. ಸಾರ್ವಜನಿಕರ ರಸ್ತೆಯಾದ್ದರಿಂದ ದಿನನಿತ್ಯ ನೂರಾರು ಮಂದಿ ಇದರಲ್ಲೇ ಓಡಾಡುತ್ತಾರೆ. ಇವರ ದಿನಚರಿಗೆ ತೊಂದರೆ ಆಗದಂತೆ ಕಾಮಗಾರಿ ನಡೆಸಬೇಕಾದ ಜವಾಬ್ದಾರಿ ಗುತ್ತಿಗೆದಾರರ ಮೇಲಿದೆ. ಒಂದು ತಿಂಗಳ ಒಳಗೆ 2.2 ಕಿ.ಮೀ. ರಸ್ತೆಯನ್ನು 4.5 ಮೀಟರ್‌ನಿಂದ 6 ಮೀಟರ್‌ಗೆ ಅಗಲ ಮಾಡಬೇಕಾಗಿದೆ. ಮಳೆಗಾಲ ಪ್ರಾರಂಭವಾಗುವ ಮೊದಲು ಕಾಮಗಾರಿ ಮುಗಿಸಿದರೆ ವಾಹನ ಸವಾರರು, ವಿದ್ಯಾರ್ಥಿಗಳು, ನಾಗರಿಕರು ಸಹಿತ ಎಲ್ಲರಿಗೂ ಅನುಕೂಲ. ಇಲ್ಲದೇ ಹೋದರೆ ಪ್ರಗತಿಯಲ್ಲಿರುವ ಕಾಮಗಾರಿಯೇ ಸಂಚಾರಕ್ಕೆ ಮುಳುವಾದೀತು ಎಂಬ ಭೀತಿ ಸಾರ್ವಜನಿಕರಲ್ಲಿ ಮೂಡಿದೆ.
ಮುಡಿಪಿನಡ್ಕ- ಪೇರಾಲು ಮುಂದುವರಿದ ರಸ್ತೆಯಾದ ಪೇರಾಲು- ಮೈಂದನಡ್ಕ ಡಾಮರು ರಸ್ತೆಯ ತೇಪೆ ಕಾಮಗಾರಿಗೆ 10 ಲಕ್ಷ ರೂ. ಅನುದಾನ ಮಂಜೂರಾಗಿದೆ. ಇದನ್ನು ಕೂಡ ಮಳೆಗಾಲದ ಮೊದಲು ಮುಗಿಸಬೇಕಾದ ಅನಿವಾರ್ಯತೆ ಇದೆ.
Related Articles
ಸಮಾರು 30 ವರ್ಷಗಳಿಂದ ಡಾಮರು ಕಾಣದ ರಸ್ತೆಯಲ್ಲಿ ವಾಹನ ಸವಾರರು ಪ್ರಯಾಸಪಟ್ಟು ಸಾಗುತ್ತಿದ್ದರು. ಇದು ಪಡುಮಲೆಗೆ ಅಂಟಿದ ಶಾಪವೋ ಎಂಬಂತೆ ಗುನುಗುತ್ತಿದ್ದರು. ಈ ಮೊದಲು ಒಟ್ಟು 4.5 ಮೀ. ಅಗ ಲ ವಿದ್ದ ರಸ್ತೆ ಯಲ್ಲಿ ಡಾಮರು ಇದ್ದುದು 3 ಮೀ. ಮಾತ್ರ. ರಸ್ತೆಯ ದೊಡ್ಡ ಹೊಂಡಗಳು ಕಾಲ್ನಡಿಗೆಗೂ ತೊಡಕಾಗಿದ್ದವು. ಈ ಹಿನ್ನೆಲೆಯಲ್ಲಿ ಬಡಗನ್ನೂರು ಹಾಗೂ ಪಡುವನ್ನೂರು ನಾಗರಿಕ ಹಿತರಕ್ಷಣ ಸಮಿತಿ ವತಿಯಿಂದ ಒಂದು ವಾರ ಅಹೋರಾತ್ರಿ ಪ್ರತಿಭಟನೆ ನಡೆದಿತು. ಇತರ ಸಂಘ – ಸಂಸ್ಥೆಗಳಿಂದ ರಸ್ತೆ ತಡೆ, ಸಾರ್ವಜನಿಕ ಮನವಿ ಫಲವಾಗಿ ಕರ್ನಾಟಕ ಸರ್ಕಾರ ಒನ್ ಟೈಮ್ ಯೋಜನೆಯಡಿ ಅನುದಾನ ನೀಡಿತು. ಇದರಡಿ ರಸ್ತೆಯನ್ನು 6 ಮೀಟರ್‌ಗೆ ಅಗಲ ಮಾಡಿ, 3.75 ಮೀ. ಅಗಲಕ್ಕೆ ಡಾಮರು ಹಾಕಲಿದೆ.
Advertisement
ಮುಗಿಯದಿದ್ದರೆ ತೊಂದರೆ20 ವರ್ಷಗಳ ಬಳಿಕ ಈ ರಸ್ತೆಗೆ ಡಾಮರು ಹಾಕುವ ಕನಸು ನನಸಾಗುತ್ತಿದೆ. ರಸ್ತೆ ಪೂರ್ತಿ ದೊಡ್ಡ ಹೊಂಡಗಳಿಂದ ಮತ್ತು ಇಕ್ಕಟ್ಟಾಗಿರುವ ರಸ್ತೆಯಿಂದ ವಾಹನ ಸಂಚಾರ ಕಷ್ಟವಾಗುತ್ತಿತ್ತು. ರಸ್ತೆ ತಿರುವುಗಳನ್ನು ಕಡಿಮೆ ಮಾಡಿ ರಸ್ತೆ ವಿಸ್ತರಿಸುವ ಅಗತ್ಯವಿತ್ತು. ಸದ್ಯ ಈ ಕೆಲಸ ಆರಂಭವಾಗಿದೆ. ಮಳೆಗಾಲದ ಒಳಗಾಗಿ ಕಾಮಗಾರಿ ಪೂರ್ಣಗೊಂಡರೆ ಸಾರ್ವಜನಿಕರಿಗೆ ಅನುಕೂಲ, ಇಲ್ಲದಿದ್ದರೆ ತೊಂದರೆ.
– ಮೋಹನ ಪಾಟಾಳಿ ಅಣಿಲೆ, ಸ್ಥಳೀಯ ನಿವಾಸಿ ಬೇಗನೆ ಮುಗಿಸಲು ಪ್ರಯತ್ನ
ಮುಡಿಪಿನಡ್ಕ – ಪೇರಾಲು ನಡುವಿನ ರಸ್ತೆ ಕಾಮಗಾರಿಗೆ 1.20 ಕೋಟಿ ರೂ. ಅನುದಾನ ಮಂಜೂರಾಗಿದೆ. ರಸ್ತೆಯನ್ನು 3.75 ಮೀ. ಅಗಲಗೊಳಿಸಿ ಡಾಮರು ಹಾಕಲಾಗುವುದು. ರಸ್ತೆ ಒಟ್ಟು 6 ಮೀ.ನಷ್ಟು ಅಗಲವಾಗಲಿದೆ. ಮಳೆಗಾಲದ ಮೊದಲು ಕಾಮಗಾರಿ ಮುಗಿಸುವ ಪ್ರಯತ್ನ ಪಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಒತ್ತಡ ಹಾಕಲಾಗುತ್ತಿದೆ.
– ಬಾಲಕೃಷ್ಣ ಭಟ್, ಪಿಡಬ್ಲ್ಯುಡಿ ಎಂಜಿನಿಯರ್ — ದಿನೇಶ್ ಬಡಗನ್ನೂರು