ಚಿತ್ರದುರ್ಗ: ಸೊಂಡೇಕೊಳ ಮತ್ತು ಗೊಡಬನಹಾಳ್ ವ್ಯಾಪ್ತಿಯಲ್ಲಿ 6.67 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದ್ದು, ಇದರಿಂದ ಸಾವಿರಾರು ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ತಾಲೂಕಿನ ಸೊಂಡೇಕೊಳ, ನಂದಿಪುರ, ಗೊಡಬನಾಳ್ ಗ್ರಾಮಗಳಲ್ಲಿ ಪಿಎಂಜಿಎಸ್‌ವೈ ಮತ್ತು ಕೆಆರ್‌ಐಡಿಎಲ್ ಅನುದಾನದಲ್ಲಿ ಸಿಸಿ ರಸ್ತೆ ಮತ್ತು ಡಾಂಬರೀಕರಣ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಗೊಡಬನಾಳ್ ಗ್ರಾಮದಿಂದ ಸೊಂಡೇಕೊಳದ ಮೂಲಕ ನಂದಿಪುರ, ಅಲಗಪ್ಪನಹಟ್ಟಿ, ಓಬೇನಹಳ್ಳಿ ಉಪ್ಪಾನಾಯಕನಹಳ್ಳಿ ವರೆಗೂ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಸುಮಾರು 3.17 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಮತ್ತು ಊರಿನ ಒಳಗಡೆ ಹಾದು ಹೋಗುವಾಗ ಸಿಸಿ ರಸ್ತೆಗಳು ಮಾಡಲು ಹಣ ನೀಡಿದ್ದೇನೆ. ನೀರು ಹೆಚ್ಚು ಹರಿಯುವ ಕಡೆಗಳಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಿಸುವ ಮೂಲಕ ಅಂತರ್ಜಲ ವೃದ್ಧಿ ಮಾಡುವ ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು.
ಉಪ್ಪಾನಾಯಕನಹಳ್ಳಿ ಕಡೆಯಿಂದ ಬುರುಜನರೊಪ್ಪ ಕಡೆ ತೆರಳುವ ರಸ್ತೆಗೂ ಪಿಎಂಜಿಎಸ್‌ವೈ ಯೋಜನೆಯಲ್ಲಿ 1.50 ಕೋಟಿ ಹಣ ನೀಡಿದ್ದು, ರಸ್ತೆ ಪೂರ್ಣವಾಗಿದೆ ಎಂದು ತಿಳಿಸಿದರು.
ಸೊಂಡೇಕೊಳ ಗ್ರಾಮದ ಎಲ್ಲ ರಸ್ತೆಗಳು ಪೂರ್ಣ
ಸೊಂಡೇಕೊಳ ಗ್ರಾಮದಲ್ಲಿ ಮಳೆ ಬಂದ ಸಂದರ್ಭದಲ್ಲಿ ನೂರಾರು ರೈತರು ತಮ್ಮ ಹೊಲಗಳಿಗೆ ಹೋಗಲು ಆಗುತ್ತಿರಲಿಲ್ಲ ಹಾಗಾಗಿ ಓಣಿ ರಸ್ತೆಗೆ ಕೆಆರ್ಡಿಎಲ್ ಯೋಜನೆಯಲ್ಲಿ 75 ಲಕ್ಷ ಅನುದಾನ ನೀಡಿದ್ದು ಹೊಲಗಳ ಬಾಗಿಲಲ್ಲಿ ಚಿಕ್ಕ ಡಕ್ ಮಾಡಲು ತಿಳಿಸಿದ್ದೇನೆ. ಸೊಂಡೇಕೊಳ ಗ್ರಾಮದ ಊರಿನ ಚಿಕ್ಕ ಪುಟ್ಟ ರಸ್ತೆಗಳಿಗೆ 45 ಲಕ್ಷ ಹಣ ನೀಡಿದ್ದು ಎಲ್ಲಾ ರಸ್ತೆಗಳು ಪೂರ್ಣವಾದಂತೆ ಆಗುತ್ತವೆ. ಮೊತ್ತೂಂದು ಭಾಗದ ರೈತರ ಹೊಲಗಳ ರಸ್ತೆಗೆ 80 ಲಕ್ಷ ನೀಡಿದ್ದು ಮಂಜೂರಾದ ತಕ್ಷಣ ಕೆಲಸ ಪ್ರಾರಂಭ ಮಾಡುತ್ತೇನೆ. 3 ಕೋಟಿ ವೆಚ್ಚದ ದೊಡ್ಡ ಚಕ್ ಡ್ಯಾಂ ಸಹ ಮಾಡಲಾಗಿದ್ದು ಎಲ್ಲಾವೂ ಸಹ ತುಂಬಿವೆ. ದೇವಸ್ಥಾನ ಅಭಿವೃದ್ಧಿಗೆ ಹಣ ಕೇಳಿದ್ದು ಶಾಸಕರ ಅನುದಾನದಲ್ಲಿ 5 ಲಕ್ಷ ನೀಡುತ್ತೇನೆ ಎಂದು ಭರವಸೆ ನೀಡಿದರು.
ಸೊಂಡೇಕೊಳ ಗ್ರಾಮದ ಮುಖಂಡ ರವೀಶ್ ಮಾತನಾಡಿದರು. ಸೊಂಡೆಕೊಳ ಗ್ರಾಪಂ ಅಧ್ಯಕ್ಷೆ ಭಾರತಮ್ಮ, ಗೊಡಬನಾಳ್ ಗ್ರಾಪಂ ಅಧ್ಯಕ್ಷೆ ಸವಿತಾ, ಗ್ರಾಪಂ ಸದಸ್ಯರಾದ ಸಂತೋಷ, ಓಬಮ್ಮ, ವಿಶಾಲಕ್ಷಮ್ಮ, ಕಲ್ಲಪ್ಪ, ಜಯ್ಯಪ್ಪ, ಉಮೇಶ್ ಮುಖಂಡರಾದ ಬಸವರಾಜ್, ನಾಗರಾಜ್, ಪ್ರಸನ್ನಕುಮಾರ್, ಕುಮಾರಸ್ವಾಮಿ ಮತ್ತಿತರರಿದ್ದರು.