Advertisement
ಪರಿಸರಕ್ಕೆ ನೀರುಣಿಸುತ್ತಿದ್ದ ಕೆರೆಅರ್ಪಾಜೆಯ ಸರಕಾರಿ ಕೆರೆ ಉದೇರಿ, ನಾಲ್ಗುತ್ತು ಹಾಗೂ ಅರ್ಪಾಜೆ ಪರಿಸರದ ಕೃಷಿ ತೋಟಗಳಿಗೆ ಹಾಗೂ ಭತ್ತದ ಗದ್ದೆಗಳಿಗೆ ನೀರುಣಿಸುತ್ತಿತ್ತು. ಈ ಪರಿಸರದಲ್ಲಿ ಅಂತರ್ಜಲ ಮಟ್ಟ ಏರಿಕೆಗೂ ಕಾರಣವಾಗಿತ್ತು. ಆದರೆ ಇದೀಗ ಈ ಕೆರೆಯಲ್ಲಿ ಮಳೆಗಾಲದಲ್ಲಿಯೂ ನೀರು ನಿಲ್ಲಲು ಅವಕಾಶ ನೀಡುತ್ತಿಲ್ಲ. ಕೆರೆಯ ಪಶ್ಚಿಮ ಭಾಗದಲ್ಲಿ ಹೆಚ್ಚುವರಿ ನೀರು ಹರಿದು ಹೋಗಲು ಇರುವ ಕಾಲುವೆಯನ್ನು ಸುಮಾರು 7ರಿಂದ 8 ಅಡಿ ಆಳಗೊಳಿಸಿರುವುದರಿಂದ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ನೀರು ನಿಲ್ಲದೇ ಇರುವುದರಿಂದ ಕೆರೆಯು ಬಯಲು ಪ್ರದೇಶದಂತಾಗಿದೆ. ಪರಿಸರದಲ್ಲಿ ಅಂತ ರ್ಜಲ ಮಟ್ಟವೂ ಕುಸಿದಿದೆ. ಆದುದರಿಂದ ಕೆರೆಯ ಒತ್ತುವರಿಯನ್ನು ತೆರವುಗೊಳಿಸಿ, ಕೆರೆಯ ನೀರು ಹರಿದು ಹೋಗುವ ಕಾಲುವೆಯನ್ನು ಮುಚ್ಚಿಸಿ ಕೆರೆಯನ್ನು ಸಂರಕ್ಷಣೆ ಮಾಡಬೇಕೆಂದು ಮನವಿ ಮಾಡಲಾಗಿದೆ. ಜಿಲ್ಲಾಧಿಕಾರಿಗಳಿಗೆ ನೀಡಿರುವ ದೂರಿನ ಪ್ರತಿಯನ್ನು ಪುತ್ತೂರು ಸಹಾಯಕ ಕಮೀಶನರ್, ಕಡಬ ವಿಶೇಷ ತಹಶೀಲ್ದಾರ್, ಕಡಬ ಕಂದಾಯ ನಿರೀಕ್ಷಕರು ಹಾಗೂ ಕಡಬ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೂ ಕಳುಹಿಸಲಾಗಿದೆ.
ಅರ್ಪಾಜೆ ಕೆರೆ ಒತ್ತುವರಿಯಾಗಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಸ್ಥಳ ತನಿಖೆ ನಡೆಸಿ ಕೆರೆಯನ್ನು ಸರ್ವೆ ನಡೆಸಲು ಕಡಬ ಕಂದಾಯ ನಿರೀಕ್ಷಕರಿಗೆ ಸೂಚಿಸಲಾಗಿದೆ. ಸರಕಾರಿ ಕೆರೆ ಒತ್ತುವರಿ ಮಾಡಲು ಅವಕಾಶ ಇಲ್ಲ. ಸರ್ವೆ ವೇಳೆ ಕೆರೆ ಒತ್ತುವರಿಯಾಗಿದ್ದು ಕಂಡುಬಂದಲ್ಲಿ ಒತ್ತುವರಿಯನ್ನು ತೆರವುಗೊಳಿಸಲಾಗುವುದು.
– ಅನಂತ ಶಂಕರ, ಪುತ್ತೂರು ತಹಶೀಲ್ದಾರ್ — ನಾಗರಾಜ್ ಎನ್. ಕೆ.