Advertisement

Shirva: ರಸ್ತೆ ಸಂಪರ್ಕ ಕಡಿತ, ರಕ್ಷಣೆಗೆ ತೆರಳಿದ ಕಾಪು ತಹಶೀಲ್ದಾರ್‌

03:52 PM Aug 02, 2024 | Team Udayavani |

ಶಿರ್ವ: ಬೆಳ್ಳೆ, ಶಿರ್ವ ಪರಿಸರದಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಪಾಪನಾಶಿನಿ ನದಿ ಉಕ್ಕಿ ಹರಿಯುತ್ತಿದ್ದು, ಕೆಲವು ಮನೆಗಳು ಜಲಾವೃತಗೊಂಡಿವೆ. ಕೆಲವೆಡೆ ರಸ್ತೆಯ ಮೇಲೆಯೇ ನೆರೆ ನೀರು ಹರಿದು ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಜನರು ಪರ್ಯಾಯ ರಸ್ತೆ ಬಳಸುವಂತಾಗಿದೆ.

Advertisement

ಮನೆಗಳಿಗೆ ನುಗ್ಗಿದ ನೆರೆ ನೀರು

ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯ ಪಡುಬೆಳ್ಳೆ ಭದ್ರಮಾ ಸೇತುವೆ ಬಳಿಯ ಭಟ್ರಸಾಲ್‌ ತುಕ್ರ ಮುಖಾರಿ ಅವರ ಮನೆ ಜಲಾವೃತಗೊಂಡಿದ್ದು,ಮನೆಯಲ್ಲಿದ್ದ 9 ಮಂದಿಯನ್ನು ಕಾಪು ತಹಶೀಲ್ದಾರ್‌ ಡಾ|ಪ್ರತಿಭಾ ಆರ್‌. ಅವರ ನೇತೃತ್ವದಲ್ಲಿ ರಕ್ಷಣೆ ಮಾಡಿ ಸ್ಥಳಾಂತರಗೊಳಿಸಲಾಗಿದೆ. ಮನೆ ಮಂದಿ ರಕ್ಷಣಾ ಕೇಂದ್ರಕ್ಕೆ ತೆರಳದೆ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಶಿರ್ವ ಗ್ರಾ.ಪಂ.ವ್ಯಾಪ್ತಿಯ ಪಂಜಿಮಾರು ಶ್ರೀ ಸೋದೆ ಮಠದ ಬಳಿಯ ಹಿಲ್ಡಾ ರೊಡ್ರಿಗಸ್‌ ಅವರ ಮನೆ ಜಲಾವೃತಗೊಂಡಿದೆ. ಶಿರ್ವ ನ ಡಿಬೆಟ್ಟು, ಕಲ್ಲೊಟ್ಟು, ಅಟ್ಟಿಂಜೆ, ಬಡಗುಪಂಜಿ ಮಾರು ಪರಿಸರದಲ್ಲಿ ಕೃಷಿ ಭೂಮಿ ಮತ್ತುಶಿರ್ವ ನಡಿಬೆಟ್ಟು ಕಂಬಳಗದ್ದೆ ಸಂಪೂರ್ಣ ಜಲಾವೃತಗೊಂಡಿದೆ.

ದೋಣಿಯಲ್ಲಿ ತೆರಳಿದ ಕಾಪು ತಹಶೀಲ್ದಾರ್‌

Advertisement

ಕಾಪು ತಹಶೀಲ್ದಾರ್‌ ಡಾ|ಪ್ರತಿಭಾ ಆರ್‌. ಗೃಹ ರಕ್ಷಕ ದಳದ ಪಡುಬಿದ್ರಿ ಘಟಕದ ಪ್ಲಟೂನ್‌ ಕಮಾಂಡರ್‌ ನವೀನ್‌ ಕುಮಾರ್‌, ಸಿಬಂದಿಗಳಾದ ಸುಕೇಶ್‌ ಕುಮಾರ್‌,ದಿನೇಶ್‌ ಮೂಲ್ಯ ಮತ್ತು ಕೇಶವ ಆಚಾರ್ಯ ಅವರ ಜತೆಗೆ ಗೃಹ ರಕ್ಷಕ ದಳದ ದೋಣಿಯಲ್ಲಿ ಖುದ್ದು ತೆರಳಿ ನೆರೆಪೀಡಿತರನ್ನು ಸುರಕ್ಷಿತ ಸ್ಥಳಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಕಾಪು ಕಂದಾಯ ಪರಿವೀಕ್ಷಕ ಇಜಾರ್‌ ಶಬೀರ್‌,ಬೆಳ್ಳೆ ಗ್ರಾ.ಪಂ.ಉಪಾಧ್ಯಕ್ಷ ಶಶಿಧರ ವಾಗ್ಲೆ,ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ, ಗ್ರಾ.ಪಂ. ಸದಸ್ಯರಾದ ರಾಜೇಂದ್ರ ಶೆಟ್ಟಿ,ಹರೀಶ್‌ ಶೆಟ್ಟಿ ಕಕ್ರಮನೆ,ಸ್ಥಳೀಯರಾದ ರಾಘವೇಂದ್ರ ಶೆಟ್ಟಿ ಮತ್ತು ಗ್ರಾಮಸ್ಥರು ಸಹಕರಿಸಿದ್ದಾರೆ.

ಬೆಳ್ಳೆ ಗ್ರಾ.ಪಂ.ವ್ಯಾಪ್ತಿಯ ಪಡುಬೆಳ್ಳೆ, ಪೊಯ್ಯದಪಾಡಿ, ಕಬ್ಯಾಡಿ, ಪಾಂಬೂರು, ಶಿರ್ವ ನಡಿಬೆಟ್ಟು, ಅಟ್ಟಿಂಜೆ, ಕಲ್ಲೊಟ್ಟು ಪರಿಸರದಲ್ಲಿ ಹಲವರ ಮನೆಗೆ ಹೋಗುವರಸ್ತೆ, ನಡೆಯುವ ದಾರಿ ಮತ್ತು ಈ ಪರಿಸರದ ನದಿ ತೀರದಲ್ಲಿದ್ದ ನೂರಾರು ಎಕ್ರೆ ಕೃಷಿಭೂಮಿ, ಹಲವು ಮನೆಗಳು ಜಲಾವೃತಗೊಂಡಿದ್ದು ನಿವಾಸಿಗಳು ತೀವ್ರ ಆತಂಕದಲ್ಲಿದ್ದಾರೆ.

ರಸ್ತೆ ಸಂಪರ್ಕ ಕಡಿತ

ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಮೂಡುಬೆಳ್ಳೆ-ಪಡುಬೆಳ್ಳೆ ಸಂಪರ್ಕ ರಸ್ತೆಯಲ್ಲಿ ನೆರೆ ನೀರು ಹರಿಯುತ್ತಿದೆ.ಪೊಯ್ಯದ ಪಾಡಿ,ಕಬ್ಯಾಡಿಮತ್ತು ಪಾಂಬೂರು ದಿಂಡೊಟ್ಟು ಬಳಿ, ಬಡಗಪಂಜಿಮಾರು ಬಳಿರಸ್ತೆಯಲ್ಲಿಯೇ ನೆರೆ ನೀರು ಹರಿದು ಸಂಪರ್ಕ ಕಡಿತಗೊಂಡಿದ್ದು, ಜನರು ಸುತ್ತುಬಳಸಿ ಪರ್ಯಾಯ ರಸ್ತೆ ಬಳಸುವಂತಾಗಿದೆ.

ಪಾಂಬೂರು ದಿಂಡೊಟ್ಟುಆಣೆಕಟ್ಟಿನ ಮೇಲೆಯೇ ನೆರೆ ನೀರು ಹರಿದು ಕಟ್ಟಿಂಗೇರಿ ಸಂಪರ್ಕ ಕಡಿತಗೊಂಡಿದೆ. ಕೆಲವೆಡೆ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯ ರಸ್ತೆಗಳು ತಗ್ಗು ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದು, ಸಾಧಾರಣ ಮಳೆಗೆ ನೆರೆನೀರು ರಸ್ತೆಯಲ್ಲಿ ಹರಿದು ಸಂಪರ್ಕ ಕಡಿತಗೊಳ್ಳುತ್ತದೆ

Advertisement

Udayavani is now on Telegram. Click here to join our channel and stay updated with the latest news.

Next