Advertisement

ಪಟ್ಟೆ: ರಸ್ತೆ ಸಂಪರ್ಕ ಕಡಿತ, ನೂರಾರು ಮಂದಿಗೆ ತೀವ್ರ ಸಂಕಷ್ಟ

02:45 AM Jun 15, 2018 | Team Udayavani |

ಪುತ್ತೂರು: ಬುಧವಾರ ಸಂಜೆಯಿಂದ ಸುರಿದ ಭಾರೀ ಮಳೆಗೆ ಪಟ್ಟೆ – ಮುಂಡೋಳೆ – ಈಶ್ವರ ಮಂಗಲ ಸಂಪರ್ಕ ರಸ್ತೆಯ ಮುಂಡೋಳೆ ಸಮೀಪ ಸೀರೆ ಹೊಳೆ ತುಂಬಿ ಹರಿದ ಪರಿಣಾಮ ರಸ್ತೆ ಕುಸಿತ ಉಂಟಾಗಿ ಸಂಪರ್ಕ ಕಡಿತಗೊಂಡಿದೆ. ‘ಯು’ ಆಕಾರದಲ್ಲಿ ಹರಿಯುವ ಸೀರೆ ಹೊಳೆಯ ಮಧ್ಯೆ ಈ ಸಂಪರ್ಕ ರಸ್ತೆ ಸಾಗುತ್ತಿದ್ದು, ತೀವ್ರ ಮಳೆಯ ಸಂದರ್ಭದಲ್ಲಿ ಎರಡೂ ಬದಿಯ ಹೊಳೆಯಲ್ಲಿ ನೀರು ತುಂಬಿ ಸಮಾಗಮವಾಗುತ್ತದೆ. ಈ ಕಾರಣದಿಂದ ಮಧ್ಯದ ರಸ್ತೆ ನಿರಂತರ ಕೊರೆತಕ್ಕೆ ಒಳಗಾಗಿತ್ತು. ಮಂಗಳವಾರ ರಾತ್ರಿಯೂ ಹೊಳೆಯಲ್ಲಿ ನೀರು ತುಂಬಿ ರಸ್ತೆಗೆ ಬಂದಿದ್ದು, ರಸ್ತೆ ಸಂಪೂರ್ಣ ಕುಸಿತಕ್ಕೆ ಒಳಗಾಗಿದೆ.

Advertisement

ನೂರಾರು ಮಂದಿಗೆ ಸಂಕಷ್ಟ
ಮುಂಡೋಳೆ, ಅಂಬಟೆಮೂಲೆ, ಪಾದೆಕ ರ್ಯ ಸಹಿತ ವಿವಿಧ ಕಡೆಗಳಿಂದ ಬರುವ ಶಾಲಾ – ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಬೆಟ್ಟಂಪಾಡಿ, ಪಾಣಾಜೆ, ಕೇರಳ ಭಾಗಗಳು, ಪುತ್ತೂರು ಕಡೆಗಳಿಂದ ಈಶ್ವರಮಂಗಲಕ್ಕೆ ತೆರಳುವವರು ರಸ್ತೆ ಸಂಪರ್ಕ ಕಡಿತಕ್ಕೆ ಒಳಗಾಗಿರುವುದರಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪರ್ಯಾಯ ರಸ್ತೆ ಇದೆಯಾದರೂ ಮಕ್ಕಳು, ವಯಸ್ಕರಿಗೆ ಸುತ್ತಿ ಬಳಸಿ ಬರುವುದು ತ್ರಾಸದಾಯಕವಾಗಿದೆ.


ಅಣೆಕಟ್ಟಿನಲ್ಲಿ ಕಸ

ಈ ಜಾಗದಲ್ಲಿ ಕಿರಿದಾದ ಸೇತುವೆ, ಕೆಳಭಾಗದಲ್ಲಿ ಬಳಕೆಯಾಗದ ಅಣೆಕಟ್ಟು ಇದೆ. ಮಳೆಗಾಲದಲ್ಲಿ ಹೊಳೆಯಲ್ಲಿ ಹರಿದು ಬರುವ ಮರದ ತುಂಡುಗಳು, ಕಸ ಕೆಳಭಾಗದಲ್ಲಿ ಶೇಖರಣೆಗೊಂಡು ಬೇಗನೇ ಮುಳುಗಡೆಯಾಗುತ್ತಿದೆ. ಮಂಗಳವಾರವೂ ಈ ಅಣೆಕಟ್ಟಿನಲ್ಲಿ ಭಾರೀ ಪ್ರಮಾಣದ ಕಸ ತುಂಬಿಕೊಂಡಿತ್ತು.

ಸ್ಥಳೀಯರ ಆಕ್ರೋಶ
ವಿಪತ್ತು ನಿರ್ವಹಣೆಯ ತಂಡವಾಗಲೀ ಆಡಳಿತ ವ್ಯವಸ್ಥೆಯ ಅಧಿಕಾರಿಗಳಾಗಲೀ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಕೆಲಸವನ್ನೂ ಮಾಡಿಲ್ಲ. ಮುನ್ನೆಚ್ಚರಿಕೆ ಕ್ರಮ ಅನುಸರಿಸಿದ್ದರೆ ರಸ್ತೆ ಸಂಪೂರ್ಣ ಕುಸಿಯುತ್ತಿರಲಿಲ್ಲ ಎಂದು ಸ್ಥಳೀಯರು ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂಜಿನಿಯರ್‌, ಜನಪ್ರತಿನಿಧಿಗಳ ಭೇಟಿ
ಸ್ಥಳಕ್ಕೆ ಬಡಗನ್ನೂರು ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಕನ್ನಾಯ, ಸದಸ್ಯರು, ತಾ.ಪಂ. ಸದಸ್ಯ ರಾಧಾಕೃಷ್ಣ ಬೋರ್ಕರ್‌, ಜಿ.ಪಂ. ಎಂಜಿನಿಯರ್‌ ಗೋವರ್ಧನ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನೀರು ಕಡಿಮೆಯಾಗದ ಹೊರತು ಏನೂ ಮಾಡಲು ಸಾಧ್ಯವಿಲ್ಲ. ನೀರು ಕಡಿಮೆಯಾದ ಬಳಿಕ ಹೊಗೆಯ ಗೋಣಿ ಅಳವಡಿಸಿ ತಾತ್ಕಾಲಿಕ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ. ಎಂಜಿನಿಯರ್‌ ಭರವಸೆ ನೀಡಿದ್ದಾರೆ.

Advertisement

‘ಸುದಿನ’ ಎಚ್ಚರಿಸಿತ್ತು
ದಿನದಿಂದ ದಿನಕ್ಕೆ ಕುಸಿತವಾಗುತ್ತಿರುವ ಸಂಪೂರ್ಣ ಕಡಿತದ ಭೀತಿ ಎದುರಾಗಿರುವ ಹಾಗೂ ಇದರಿಂದ ನೂರಾರು ಮಂದಿಗೆ ಸಂಚಾರ ಸಮಸ್ಯೆ ಉಂಟಾಗಬಹುದಾದ ಸಾಧ್ಯತೆಯ ಕುರಿತು ‘ಉದಯವಾಣಿ’ ಸುದಿನದಲ್ಲಿ ಜೂ. 11ರಂದು ‘ಕುಸಿಯುತ್ತಿದೆ ಸಂಪರ್ಕ ರಸ್ತೆ’ ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟಿಸಲಾಗಿತ್ತು.

ಸಂಪರ್ಕವೇ ಕಡಿತ


ಇಲ್ಲಿನ ಅಪಾಯಕಾರಿ ಸ್ಥಿತಿಯ ಕುರಿತು ಗ್ರಾ. ಪಂ.ನಿಂದ ನಿರ್ಣಯ ಕೈಗೊಂಡು ಜಿ.ಪಂ.ಗೆ ಕಳುಹಿಸಲಾಗಿತ್ತು ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆಯ ಭಾಗಕ್ಕೆ ಸರಿಯಾದ ತಡೆಗೋಡೆ ನಿರ್ಮಿಸಬೇಕು, ವ್ಯರ್ಥವಾಗಿರುವ ಅಣೆಕಟ್ಟನ್ನು ತೆರವುಗೊಳಿಸುವ ಅಥವಾ ಅಭಿವೃದ್ಧಿಗೊಳಿಸುವ ಕೆಲಸ ಮಾಡುವಂತೆ ವಿನಂತಿ ಮಾಡಿದ್ದೆವು. ಈಗ ರಸ್ತೆಯೇ ಕುಸಿದು ಸಂಪರ್ಕ ಕಡಿತಗೊಂಡಿದೆ.
– ಕೇಶವ ಕನ್ನಾಯ, ಅಧ್ಯಕ್ಷರು, ಬಡಗನ್ನೂರು ಗ್ರಾ. ಪಂ.

Advertisement

Udayavani is now on Telegram. Click here to join our channel and stay updated with the latest news.

Next