Advertisement

ಹದಗೆಟ್ಟ ಹತ್ತಾರು ಹಳ್ಳಿಗಳ ಸಂಪರ್ಕ ರಸ್ತೆ

03:22 PM Jan 03, 2022 | Team Udayavani |

ದೇವದುರ್ಗ: ಪಟ್ಟಣದ ಬೆಟ್ಟದ ಶಂಭುಲಿಂಗೇಶ್ವರ ಮಾರ್ಗವಾಗಿ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟು ಹೋಗಿದೆ. ಆರೇಳು ವರ್ಷ ಕಳೆದರೂ ಡಾಂಬರ್‌ ರಸ್ತೆ ಮಾಡುವುದಿರಲ್ಲಿ ಕನಿಷ್ಟ ಪಕ್ಷ ದುರಸ್ತಿಗೂ ಮುಂದಾಗುತ್ತಿಲ್ಲ.

Advertisement

ಎಲ್ಲೆಂದರಲ್ಲಿ ತಗ್ಗುಗುಂಡಿಗಳು ಬಿದ್ದಿವೆ. ಶಾಲೆಗಳಿಗೆ ತಡವಾಗಿ ಹೋಗುವ ಶಿಕ್ಷಕರು ಹಿಡಿಶಾಪ ಹಾಕುವಂತಾಗಿದೆ. ರಸ್ತೆ ಮಧ್ಯೆ ಎಲ್ಲೆಂದರಲ್ಲಿ ಬಿದ್ದಿರುವ ತಗ್ಗುಗಳಿಗೆ ತಾತ್ಕಾಲಿಕವಾದರೂ ಮರಂ ಹಾಕಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಅಧಿಕಾರಿಗಳಿಗೆ ಪುರುಸೊತ್ತಿಲ್ಲ. ಬೈಕ್‌, ಟಂಟಂ ವಾಹನಗಳ ಚಾಲಕರು ಎದ್ದು ಬಿದ್ದು, ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಬೆಟ್ಟದ ಶಂಭುಲಿಂಗೇಶ್ವರ ಮಾರ್ಗದಿಂದ ತಳವಾರದೊಡ್ಡಿ, ಕೋತ್ತಿಗುಡ್ಡ, ಹೇಮನೂರು, ಮರಿಗೆಮ್ಮದಿಬ್ಬಿ ತಾಂಡಾ, ಎಚ್‌.ತಾಂಡಾ, ತುಗ್ಲೇರದೊಡ್ಡಿ, ಮಾನಸಗಲ್‌, ಕೆ.ಇರಬಗೇರಾ ಸೇರಿದಂತೆ ಇತರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಚಾಲಕರನ್ನು ಜೀವ ಹಿಂಡುತ್ತಿದೆ. ದಿನಕ್ಕೊಬ್ಬರಾದರೂ ಬೈಕ್‌ ಸವಾರರು ಬಿದ್ದು ಗಾಯ ಮಾಡಿಕೊಳ್ಳುತ್ತಿರುವ ಘಟನೆಗಳು ನಡೆಯುತ್ತಲೇ ಇವೆ.

ರಸ್ತೆಯಲ್ಲಿ ಅಲ್ಲಲ್ಲಿ ಡಾಂಬರ್‌ ಕಿತ್ತಿ ಜಲ್ಲಿಕಲ್ಲುಗಳು ಹೊರ ಬಂದಿವೆ. ಭಾರವಾದ ವಾಹನಗಳ ಓಡಾಟದಿಂದ ಸಣ್ಣಪುಟ್ಟ ಇದ್ದ ತಗ್ಗು ಗುಂಡಿಗಳು ದೊಡ್ಡಮಟ್ಟದಲ್ಲಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿದ್ದಾರೆ.

ತಿರುವು ಅಪಘಾತ

Advertisement

ಒಂದೆಡೆ ತೀರಾ ಹದಗೆಟ್ಟಿರುವ ರಸ್ತೆ, ಮತ್ತೂಂದೆಡೆ ತಿರುವು ರಸ್ತೆಯಲ್ಲಿ ಅಪಘಾತ ಎಚ್ಚರಿಕೆ ನಾಮಫಲಕವಿಲ್ಲ. ಹೀಗಾಗಿ ಬೈಕ್‌ ಸವಾರರು ಪ್ರಾಣವನ್ನು ಗಟ್ಟಿಯಾಗಿ ಹಿಡಿದುಕೊಂಡು ಸಂಚರಿಸುವಂತಹ ಸ್ಥಿತಿ ಇದೆ. ಬೆಟ್ಟದಿಂದ ತರವಾಳದೊಡ್ಡಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲೇ ತಿರುವು ಇದ್ದುದರಿಂದ ನೋಡಿಕೊಂಡು ಚಲಿಸಬೇಕು. ವೇಗವಾಗಿ ಬಂದಲ್ಲಿ ಅಪಘಾತ ತಪ್ಪಿದ್ದಲ್ಲ.

ರಸ್ತೆ ಪಕ್ಕ ರಾರಾಜಿಸುವ ಜಾಲಿಮರಗಳು

ಕೋತ್ತಿಗುಡ್ಡ, ಹೇಮನೂರು, ಕೋತ್ತದೊಡ್ಡಿ ಸೇರಿ ಇತರೆ ಗ್ರಾಮಕ್ಕೆ ಸಂಕರ್ಪ ರಸ್ತೆ ಪಕ್ಕದಲ್ಲಿ ಜಾಲಿಮರಗಳು ರಾರಾಜಿಸುತ್ತಿವೆ. ಟಂಟಂ ವಾಹನ ಬಂದರೆ ಬೈಕ್‌ ಸವಾರರು ಕೈಯಿಗೆ, ಕಾಲಿಗೆ ಮುಳ್ಳು ಚುಚ್ಚಿಸಿಕೊಳ್ಳುವುದು ಗ್ಯಾರಂಟಿ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಂತಹ ರಸ್ತೆಯನ್ನು ಕಂಡೂ ಕಾಣದಂತಿದ್ದಾರೆ. ಪ್ರತಿ ವರ್ಷ ಮಾರ್ಚ್‌ನಲ್ಲಿ ನಿರ್ವಹಣೆಗೆ ಲಕ್ಷಾಂತರ ರೂ. ಅನುದಾನ ವ್ಯಯ ಮಾಡಲಾಗುತ್ತಿದೆಯಾದರೂ ದುರಸ್ತಿ ದೂರದ ಮಾತಾಗಿದೆ. ಕೋವಿಡ್‌ ನೆಪವೊಡ್ಡಿ ಹಿಂದೇಟು ಹಾಕಲಾಗಿದೆ. ಇಲ್ಲಿನ ಸಮಸ್ಯೆ ಕುರಿತು ಗ್ರಾಮಸ್ಥರು ಮೌಖೀಕವಾಗಿಯೂ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ವಹಿಸಿಲ್ಲ.

ಬೆಟ್ಟದ ಶಂಭುಲಿಂಗೇಶ್ವರ ಮಾರ್ಗವಾಗಿ ಹಲವು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರ ಹದಗೆಟ್ಟಿದೆ. ತಿರುವು ರಸ್ತೆಯಲ್ಲಿ ಎಚ್ಚರಿಕೆ ನಾಮಫಲಕವಿಲ್ಲ. ಬೆಳೆದ ಜಾಲಿಗಿಡಗಳು ನಡುರಸ್ತೆಗೆ ಬಾಗಿ ಸ್ವಾಗತಿಸುವಂತಿವೆ. ಜಂಗಲ್‌ ಕಟ್ಟಿಂಗ್‌ ಮಾಡದೇ ಇದ್ದುದರಿಂದ ಸಮಸ್ಯೆ ಹೆಚ್ಚಿದೆ. -ಶ್ರೀನಿವಾಸ ದಾಸರ, ಕರವೇ ತಾಲೂಕಾಧ್ಯಕ್ಷ

ಹದಗೆಟ್ಟ ರಸ್ತೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ವಹಿಸುತ್ತೇನೆ. ಕಳೆದ ವರ್ಷ ಮಾರ್ಚ್‌ ಅವಧಿಯಲ್ಲಿ ಕೆಲವು ಕಡೆ ಜಂಗಲ್‌ ಕಟ್ಟಿಂಗ್‌ ಮಾಡಲಾಗಿದೆ. ಕೋವಿಡ್‌ ಹಿನ್ನೆಲೆ ಅನುದಾನ ಕೊರತೆ ಇದೆ. -ನೂಸರತ್‌ ಅಲಿ, ಎಇಇ, ಪಿಡಬ್ಲೂಡಿ ಇಲಾಖೆ

-ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next