Advertisement

ಹೊಂಡಗುಂಡಿ ರಸ್ತೆ ದುರಸ್ತಿಪಡಿಸಿ

11:36 PM Sep 07, 2019 | Team Udayavani |

ಸದ್ಯ ಟ್ರಾಫಿಕ್‌ ನಿಯಮ ಉಲ್ಲಂಘನೆಗೆ ವಿಧಿಸುತ್ತಿರುವ ದೊಡ್ಡ ಮೊತ್ತದ ದಂಡದ ಬಗ್ಗೆಯೇ ಸುದ್ದಿಯಾಗುತ್ತಿದೆ. ಟ್ರಾಫಿಕ್‌ ನಿಯಮ ಪಾಲನೆಗೆ ಜನರಲ್ಲಿ ಜಾಗೃತಿಗಾಗಿ ನಿಯಮ ಉಲ್ಲಂಘನೆಗೆ ದೊಡ್ಡ ಮೊತ್ತದ ದಂಡ ವಿಧಿಸುವುದು ಸರಿಯೇ. ನಿಯಮ ಉಲ್ಲಂಘನೆ ಮಾಡಿದರೆ ಸಾವಿರಾರು ರೂ. ತೆರಬೇಕಾಗುತ್ತದೆ ಎಂಬ ನಿಟ್ಟಿ ನಲ್ಲಾದರೂ ರಸ್ತೆ ನಿಯಮ ಪಾಲನೆ ಮಾಡುತ್ತಾ ಸಂಚರಿಸಲು ಅನುಕೂಲವಾಗುತ್ತದೆ. ಜಾಗೃತಿ ಮೂಡಿಸಿದಂತಾಗುತ್ತದೆ.

Advertisement

ಈ ನಡುವೆ ಚರ್ಚೆಗೆ ಬಂದಿರುವ ವಿಷಯವೆಂದರೆ, ಅತಿಯಾದ ದಂಡ ವಿಧಿಸುವ ಮೊದಲು ಸುಗಮ ಸಂಚಾರಕ್ಕೆ ಸರಿಯಾದ ರಸ್ತೆಗಳನ್ನು ನೀಡಿ ಎಂಬುದು. ಪ್ರಸ್ತುತ ನಮ್ಮ ರಸ್ತೆಗಳ ದುಃಸ್ಥಿತಿ ಹೇಗಿದೆ ಎಂದರೆ, ರಾಷ್ಟ್ರೀಯ ಹೆದ್ದಾರಿಗಳೇ ಆಟದ ಮೈದಾನದಂತೆ ಪರಿವರ್ತನೆಯಾಗಿರುವುದನ್ನು ಗಮನಿಸಬಹುದು. ಬೇಸಗೆಯಲ್ಲಿ ಡಾಮರು ಹಾಕಿದ ರಸ್ತೆಗಳು ಮಳೆಗಾಲದಲ್ಲಿ ಅಲ್ಲಲ್ಲಿ ಹೊಂಡ ಏರ್ಪಟ್ಟು ಸಂಚಾರಕ್ಕೇ ಸಂಚಕಾರ ತಂದೊಡ್ಡುತ್ತಿವೆ. ನಂತೂರು ವೃತ್ತ, ಆರ್ಯ ಸಮಾಜ ರಸ್ತೆ, ಬಂಟ್ಸ್‌ಹಾಸ್ಟೆಲ್‌ನಿಂದ ಬಲ್ಮಠಕ್ಕೆ ಹೋಗುವ ಒಳರಸ್ತೆ, ಹಂಪನಕಟ್ಟೆ, ಮಠದಕಣಿ ರಸ್ತೆ, ಜೈಲ್‌ರೋಡ್‌, ಪಿವಿಎಸ್‌, ಬಂಟ್ಸ್‌ಹಾಸ್ಟೆಲ್‌ ಮುಂತಾದೆಡೆಗಳಲ್ಲಿ ರಸ್ತೆಗಳ ಸ್ಥಿತಿ ಶೋಚನೀಯವಾಗಿದ್ದು ಸಂಚಾರ ಸಾಧ್ಯವಾಗದೆ, ಜೋರು ಮಳೆಗೆ ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್‌ನಲ್ಲಿ ಕಳೆಯಬೇಕಾದ ಸ್ಥಿತಿ ಬಂದಿದೆ. ಮಳೆ ಇರುವಾಗ ಈ ಗುಂಡಿಗಳು ಗೊತ್ತಾಗದೆ, ಬೈಕ್‌ ಸವಾರರು ಗುಂಡಿಗೆ ಬೀಳುವ ಅಪಾಯವೂ ಎದುರಾಗಿದೆ. ಕೊಟ್ಟಾರ ಕ್ರಾಸ್‌ನಿಂದ ಕೊಟ್ಟಾರ ಸಂಪರ್ಕಿಸುವ ರಸ್ತೆಗೆ ಕಳೆದ ಕೆಲ ತಿಂಗಳ ಹಿಂದಷ್ಟೇ ಡಾಮರು ಹಾಕಲಾಗಿದ್ದು, ಕಳಪೆ ಕಾಮಗಾರಿಯಿಂದಾಗಿ ಪ್ರಸ್ತುತ ಸಂಪೂರ್ಣ ಹೊಂಡ ಗುಂಡಿಮಯವಾಗಿದೆ. ಕಳಪೆ ರಸ್ತೆ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ರಸ್ತೆಗಳ ದುಃಸ್ಥಿತಿ ಎದುರಾಗುತ್ತಿದೆ. ಹೀಗಾಗಿ ಜನಸಾಮಾನ್ಯರಿಗೆ ಸಂಚರಿಸಲು ಉತ್ತಮ ಗುಣಮಟ್ಟದ ರಸ್ತೆಗಳನ್ನು ಒದಗಿಸಿಕೊಡಲು ಸ್ಥಳೀಯಾಡಳಿತ, ಹೆದ್ದಾರಿ ಇಲಾಖೆ ಮತ್ತು ಸಂಬಂಧಪಟ್ಟವರು ಗಮನ ಹರಿಸಬೇಕು.

ಗುತ್ತಿಗೆದಾರರ ಮೇಲೆ ಕ್ರಮ
ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಅಥವಾ ಹೊಂಡಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ಅಪಘಾತ ಸಂಭವಿಸಿದರೆ, ಅಂತಹ ರಸ್ತೆ ನಿರ್ಮಾಣ ಮಾಡಿದ ಗುತ್ತಿಗೆದಾರರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಎಂಬ ಪ್ರಸ್ತಾವವಿತ್ತು. ಆದರೆ ಇದು ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಅಪಘಾತಕ್ಕೆ ಕಾರಣವಾದ ರಸ್ತೆಯ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ಮೇಲೆ ಪ್ರಕರಣ ದಾಖಲಿಸುವ ಮತ್ತು ಸಂಚಾರ ನಿಯಮ ಉಲ್ಲಂಘನೆಯಂಥ ದುಪ್ಪಟ್ಟು ದಂಡ ವಿಧಿಸುವ ನಿಯಮ ಜಾರಿಗೊಳ್ಳಬೇಕು. ಬಹುತೇಕ ಜನಸಾಮಾನ್ಯರ ಬೇಡಿಕೆಯೂ ಇದೇ ಆಗಿದೆ.

- ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next