Advertisement

ಉಪ್ಪಿನಂಗಡಿ ಗ್ರಾಮಸಭೆ

02:13 PM Feb 07, 2018 | Team Udayavani |

ಉಪ್ಪಿನಂಗಡಿ : ಜೀವನದಿ ನೇತ್ರಾವತಿಯ ಪ್ರಾಕೃತಿಕ ಹರಿವಿಗೆ ತಡೆಯೊಡ್ಡುವ ಯಾವುದೇ ಕಾಮಗಾರಿಗಳಿಗೆ ಅವಕಾಶ ಬೇಡ. ಇಲ್ಲಿನ ಹಳೆಗೇಟು ಬಳಿ ನದಿಗಡ್ಡವಾಗಿ ರಸ್ತೆ ನಿರ್ಮಾಣ ಮಾಡಲಾಗಿದ್ದು, ನೀರ ಹರಿವಿಗೆ ತಡೆಯುಂಟಾಗಿದೆ. ಅದನ್ನು ತೆರವುಗೊಳಿಸಬೇಕೆಂಬ ಆಗ್ರಹ ಉಪ್ಪಿನಂಗಡಿ ಗ್ರಾಮ ಸಭೆಯಲ್ಲಿ ಕೇಳಿ ಬಂತು. ಈ ಬಗ್ಗೆ ಚರ್ಚೆಯಾಗಿ ರಸ್ತೆ ತೆರವುಗೊಳಿಸಲು ನಿರ್ಣಯ ಅಂಗೀಕರಿಸಲಾಯಿತು.

Advertisement

ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್‌ ಕೆ. ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಪುಳಿತ್ತಡಿಯ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಮುಹಮ್ಮದ್‌ ಕೆಂಪಿ, ಜೀವನದಿಯಾದ ನೇತ್ರಾವತಿಯ ಮೇಲೆ ಇನ್ನಿಲ್ಲದಂತೆ ಆಕ್ರಮಣಗಳು ನಡೆಯುತ್ತಿವೆ. ಇದೀಗ ಹಳೆಗೇಟಿನ ಬಳಿ ಮರಳು ಸಾಗಿಸಲು ನದಿಯ ಮಧ್ಯೆ ರಸ್ತೆ ನಿರ್ಮಿಸಲಾಗಿದೆ. 

ಇದರಿಂದ ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನೇತ್ರಾವತಿಯ ಹರಿವಿಗೆ ತಡೆಯೊಡ್ಡಿದಂತಾಗಿದೆ. ರಾಜಾರೋಷವಾಗಿ ನದಿಯಲ್ಲಿ ಹಿಟಾಚಿ ಬಳಸಿ ರಸ್ತೆ ಕಾಮಗಾರಿ ನಡೆಯುತ್ತಿದ್ದರೂ ಅಧಿಕಾರಿಗಳು ಯಾರದೋ ಒತ್ತಡಕ್ಕೆ ಮಣಿದು ಸುಮ್ಮನಿರುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಪಷ್ಟನೆ ನೀಡಿದ ಉಪ್ಪಿನಂಗಡಿ ಪ್ರಭಾರ ಗ್ರಾಮ ಲೆಕ್ಕಾಧಿಕಾರಿ ಚಂದ್ರ ನಾಯಕ್‌ ಎನ್‌., ಈ ಬಗ್ಗೆ ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಸಲಾಗಿದೆ. ಕೆಲಸವನ್ನು ನಿಲ್ಲಿಸಲು ಸೂಚಿಸಲಾಗಿದೆ. ಈಗ ಅಲ್ಲಿ ಕೆಲಸ ಸ್ಥಗಿತಗೊಂಡಿದೆ ಎಂದರು.

ನೇತ್ರಾವತಿ ನದಿ ಮಲಿನವಾಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿ, ನೇತ್ರಾವತಿ ನದಿಗೆ ತ್ಯಾಜ್ಯ ನೀರು ಬಿಡುವವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.

Advertisement

ಅರಣ್ಯ ಇಲಾಖೆಯವರು ಉಚಿತವಾಗಿ ನೀಡುವ ಗ್ಯಾಸ್‌ ಸ್ಟವ್‌ ಕಳಪೆಯಾಗಿದೆ ಎಂಬ ಆರೋಪ ಸಭೆಯಲ್ಲಿ ವ್ಯಕ್ತವಾ
ಯಿತು. ಮಾತೃಪೂರ್ಣ ಯೋಜನೆ ಜಿಲ್ಲೆಯಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಗರ್ಭಿಣಿಯರಿಗೆ ಮೊದಲಿದ್ದ ಹಾಗೆ ಆಹಾರ ಧಾನ್ಯ ಕೊಡುವ ವ್ಯವಸ್ಥೆಯಾಗಬೇಕು ಎಂದು ಲಕ್ಷ್ಮಣ ಗೌಡ ಆಗ್ರಹಿಸಿದರಲ್ಲದೆ, 2 ತಿಂಗಳಿನಿಂದ ಅಕ್ಷರ
ದಾಸೋಹ ಯೋಜನೆಗಾಗಿ ಶಾಲೆಗಳಿಗೆ ತೊಗರಿ ಬೇಳೆ, ಉಪ್ಪು ಸರಬರಾ ಜಾಗದ ಬಗ್ಗೆ ಸಭೆಯ ಗಮನಕ್ಕೆ ತಂದರು.

ಉಪ್ಪಿನಂಗಡಿ ಪಶು ವೈದ್ಯ ಆಸ್ಪತ್ರೆಯ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಿಸಿಕೊಂಡ ಬಗ್ಗೆ ಸಭೆಯಲ್ಲಿ ಪ್ರಸ್ತಾವವಾದಾಗ ಉತ್ತರ ನೀಡಿದ ಪಶು ವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ| ರಾಮ್‌ ಪ್ರಕಾಶ್‌, ಈ ಪ್ರಕರಣ
ನ್ಯಾಯಾಲಯದಲ್ಲಿದೆ. ಆದ್ದರಿಂದ ಅದು ಮುಗಿಯುವವರೆಗೆ ಯಥಾ ಸ್ಥಿತಿ ಮುಂದುವರಿಸಿಕೊಂಡು ಹೋಗಬೇಕಾಗುತ್ತದೆ. 

ಈ ನಡುವೆ ಜಾಗ ಅತಿಕ್ರಮಿಸಿಕೊಂಡಿರುವ ವ್ಯಕ್ತಿ ಅಲ್ಲಿ ಕಟ್ಟಡ ನಿರ್ಮಿಸಲು 9(11) ನಡಿ ಅರ್ಜಿ ಸಲ್ಲಿಸಿದ್ದು, ಅದನ್ನು ತಡೆಹಿಡಿಯುವಂತೆ ಉಪ್ಪಿನಂಗಡಿ ಗ್ರಾ.ಪಂಗೆ ಆಕ್ಷೇಪಣ ಅರ್ಜಿ ಸಲ್ಲಿಸಲಾಗಿದೆ ಎಂದರು. ಅಧ್ಯಕ್ಷ ಅಬ್ದುರ್ರಹ್ಮಾನ್‌ ಕೆ. ಮಾತನಾಡಿ, ಅಭಿವೃದ್ಧಿಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಈ ಪ್ರಕರಣ ಇತ್ಯರ್ಥವಾಗುವವರೆಗೆ ಅಲ್ಲಿ 9(11)ಗೆ ಪಂ. ಅನುಮತಿ ನೀಡುವುದಿಲ್ಲ ಎಂದರು.

ಸಭೆಯಲ್ಲಿ ಜಿ.ಪಂ. ಸದಸ್ಯೆ ಶಯನಾ ಜಯಾನಂದ್‌, ತಾ.ಪಂ. ಸದಸ್ಯೆ ಸುಜಾತಾ ಕೃಷ್ಣ, ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ಹೇಮಲತಾ, ಸದಸ್ಯರಾದ ಮುಹಮ್ಮದ್‌ ತೌಸೀಫ್, ಗೋಪಾಲ ಹೆಗ್ಡೆ, ಯು.ಕೆ. ಇಬ್ರಾಹಿಂ, ಯೋಗಿನಿ, ಸುರೇಶ್‌ ಎ., ಜಮೀಳಾ, ಉಮೇಶ್‌ ಗೌಡ ಉಪಸ್ಥಿತರಿದ್ದರು. ಗ್ರಾಮಸ್ಥರಾದ ಅಬ್ದುಲ್‌ ಅಝೀಝ್ ನಿನ್ನಿಕಲ್ಲ್, ವೆಂಕಪ್ಪ
ಪೂಜಾರಿ, ಆದಂ ಮಠ, ಧರ್ಣಪ್ಪ ನಾಯ್ಕ ಚರ್ಚೆಯಲ್ಲಿ ಭಾಗವಹಿಸಿದರು. ಉಪ್ಪಿನಂಗಡಿ ಪಶುವೈದ್ಯ ಆಸ್ಪತ್ರೆಯ
ಸಹಾಯಕ ನಿರ್ದೇಶಕ ಡಾ| ರಾಮ್‌ ಪ್ರಕಾಶ್‌ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ನಿಯಂತ್ರಿಸಿದರು. ಕಾರ್ಯದರ್ಶಿ
ಶಾರದಾ ಸ್ವಾಗತಿಸಿದರು. ಅಬ್ದುಲ್ಲಾ ಅಸಾಫ್ ವಂದಿಸಿದರು

ರಸ್ತೆಗೆ ಅನುಮತಿ ಇಲ್ಲ
ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್‌ ಕೆ. ಮಾತನಾಡಿ, ಎಲ್‌ ಆ್ಯಂಡ್‌ ಟಿ ಕಂಪೆನಿಗೆ ಹೆದ್ದಾರಿ ಕಾಮಗಾರಿಗೆ ಮರಳು ತೆಗೆಯಲು ಇಳಂತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಮರಳು ಬ್ಲಾಕ್‌ ನೀಡಲಾಗಿದೆ. ಅದಕ್ಕೆ ಉಪ್ಪಿನಂಗಡಿ ಕಡೆಯಿಂದ ರಸ್ತೆ ನಿರ್ಮಿಸುತ್ತಿದ್ದೇವೆ. ಇದಕ್ಕೆ ಡಿಸಿಯವರು ಅನುಮತಿ ನೀಡಿದ್ದಾರೆ ಎಂಬ ಮಾಹಿತಿ ಅಲ್ಲಿ ರಸ್ತೆ ನಿರ್ಮಿಸುತ್ತಿರುವ ವ್ಯಕ್ತಿಗಳಿಂದ ದೊರೆತಿತ್ತು. ಇದರ ಪ್ರತಿ ಪಂಚಾಯತ್‌ ಕಚೇರಿಗೆ ತಂದು ತೋರಿಸಿ ಕಾಮಗಾರಿ
ಮುಂದುವರಿಸಿ ಎಂದು ಸೂಚಿಸಿದ್ದೆವು.

ಅವರು ತಂದ ಅನುಮತಿ ಪತ್ರ ಮರಳುತೆಗೆಯಲು ಮಾತ್ರವಿದೆ. ಆದ್ದರಿಂದಅಲ್ಲಿ ರಸ್ತೆ ನಿರ್ಮಾಣ ಮಾಡಬಾರದು
ಎಂದು ಹೇಳಿದ್ದೇವೆ. ಪಂ. ಅನುಮತಿ ನೀಡದಿದ್ದರೂ ಅಕ್ರಮವಾಗಿ ರಸ್ತೆ ಕಾಮಗಾರಿ ನಡೆಸಿದ್ದಾರೆ. ಇದರಿಂದ
ನೇತ್ರಾವತಿ ನದಿಯ ಹರಿವಿನ ಪಥ ಬದಲಾಗಿ ಪಂ.ನ ನೀರಿನ ಸ್ಥಾವರಕ್ಕೂ ತೊಂದರೆಯಾಗುವ ಸಂಭವವಿದೆ. ರಸ್ತೆಯನ್ನು ಗ್ರಾ.ಪಂ. ವತಿಯಿಂದ ತೆರವುಗೊಳಿಸಲಾಗುವುದು ಎಂದರು. ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next