Advertisement

ಸ್ಥಳೀಯರಿಂದ ರಸ್ತೆ  ಉಬ್ಬು ನಿರ್ಮಾಣ

04:29 PM Dec 08, 2017 | Team Udayavani |

ಉಪ್ಪಿನಂಗಡಿ: ದಿನನಿತ್ಯ ಅಪಘಾತಕ್ಕೆ ಕಾರಣವಾಗುತ್ತಿರುವ ಬಾರ್ಯ ಗ್ರಾ.ಪಂ. ವ್ಯಾಪ್ತಿಯ ಗಿರಿ ಗುಡ್ಡೆ ಎಂಬಲ್ಲಿ ರಸ್ತೆಗೆ ಉಬ್ಬುಗಳನ್ನು ನಿರ್ಮಿಸಬೇಕೆಂದು ಗ್ರಾಮಸ್ಥರು ಬೇಡಿಕೆ ಸಲ್ಲಿಸಿದ್ದರು. ಆದರೆ ಇಲಾಖೆ ಸ್ಪಂದಿಸದೇ ಇರುವುದರಿಂದ ಗ್ರಾಮಸ್ಥರು ತಾವೇ ಹಣ ಹಾಕಿ ರಸ್ತೆ ಉಬ್ಬು ನಿರ್ಮಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Advertisement

ಅಪಘಾತ ವಲಯ
ಬಂಟ್ವಾಳವನ್ನು ಸಂಪರ್ಕಿಸುವ ಕಲ್ಲೇರಿ- ಗೋದಾಮುಗುಡ್ಡೆ ಸಡಕ್‌ ರಸ್ತೆಯು ಗಿರಿಗುಡ್ಡೆ ಎಂಬಲ್ಲಿ ಅಪಾಯಕಾರಿ ತಿರುವನ್ನು ಹೊಂದಿದೆ. ಇಲ್ಲಿ ರಸ್ತೆ ಕೂಡ ಸಮತಟ್ಟಾಗಿರದೇ ತಗ್ಗು ಪ್ರದೇಶದತ್ತ ವಾಲಿಕೊಂಡಂತಿದೆ. ಈ ಪ್ರದೇಶದಲ್ಲಿ ದಿನ ನಿತ್ಯ ಅಪಘಾತಗಳು ನಡೆಯುತ್ತಿದ್ದವು. ಕಳೆದ ಕೆಲವು ದಿನಗಳ ಹಿಂದೆ ಪಿಕಪ್‌ ವಾಹನವೊಂದು ರಿಕ್ಷಾಕ್ಕೆ ಢಿಕ್ಕಿಯಾಗಿ  ರಿಕ್ಷಾದಲ್ಲಿದ್ದ ಎಲ್‌ಕೆಜಿ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದ. ಅದಾದ ಕೆಲವು ದಿನಗಳ ಅಂತರದಲ್ಲಿ ಜೀಪು-ಆಮ್ನಿ ಪರಸ್ಪರ ಢಿಕ್ಕಿಯಾಗಿ ಹಲವು ಮಂದಿ ಗಾಯಗೊಂಡಿದ್ದರು. ವಾಹನಗಳು ವೇಗದಲ್ಲಿ ಬರುವುದರಿಂದ ತಿರುವಿನಲ್ಲಿ ಅಪಘಾತ ನಡೆಯುತ್ತಿದ್ದು, ವಾಹನಗಳ ವೇಗ ನಿಯಂತ್ರಿಸಲು ಇಲ್ಲಿ ರಸ್ತೆ ಉಬ್ಬುಗಳನ್ನು ಹಾಕಬೇಕೆಂಬ ಒತ್ತಾಯ ಸ್ಥಳೀಯ ರದ್ದಾಗಿತ್ತು. 

ಅಪಘಾತ ನಡೆದ ಸಂದರ್ಭ ಸ್ಥಳಕ್ಕೆ ಬರುತ್ತಿದ್ದ ಸಂಚಾರಿ ಪೊಲೀಸರನ್ನೂ ಈ ಬಗ್ಗೆ ಸ್ಥಳೀಯರು ಒತ್ತಾಯಿಸಿದ್ದರು. ಅವರು ಕೂಡ ಇದನ್ನು ಅಪಾಯಕಾರಿ ರಸ್ತೆ ಎಂದು ದೃಢಪಡಿಸಿದ್ದು, ಪಿಡಬ್ಲ್ಯುಡಿ ಇಲಾಖೆಗೆ ಈ ಬಗ್ಗೆ ಪತ್ರ ಬರೆದಿರುವುದಾಗಿ ಸ್ಥಳೀಯರಿಗೆ ತಿಳಿಸಿದ್ದರು. ಆದರೂ ಈವರೆಗೆ ರಸ್ತೆಗೆ ಉಬ್ಬು ನಿರ್ಮಿಸಲು ಇಲಾಖೆ ಮುಂದಾಗಿರಲಿಲ್ಲ. 

ಸ್ಥಳೀಯರ ಸಹಕಾರ
ಪ್ರತಿದಿನ ನಡೆಯುವ ಅಪಘಾತಗಳಿಂದ ಬೇಸತ್ತ ಸ್ಥಳೀಯರು ಇಲ್ಲಿ ತಾವೇ ರಸ್ತೆ ಉಬ್ಬು ನಿರ್ಮಿಸುವ ತೀರ್ಮಾನಕ್ಕೆ ಬಂದರಲ್ಲದೆ, ಸುಮಾರು 15 ಸಾವಿರ ರೂ. ವೆಚ್ಚದಲ್ಲಿ ಇಲಾಖೆಗಳ ಮಾರ್ಗದರ್ಶನ ಪಡೆದು ತಿರುವಿಗಿಂತ ಸ್ವಲ್ಪ ದೂರದಲ್ಲಿ ರಸ್ತೆ ಉಬ್ಬು ನಿರ್ಮಿಸಿದ್ದಾರೆ. ವಾಹನ ಸವಾರರಿಗೆ ಉಬ್ಬು ಎದ್ದು ಕಾಣುವಂತೆ ಅದಕ್ಕೆ ಬಿಳಿ ಹಾಗೂ ಹಳದಿ ಬಣ್ಣ ಕೂಡ ಬಳಿಯಲಾಗಿದೆ. ಅಲ್ಲದೆ, ಜೆಸಿಬಿ ಮೂಲಕ ರಸ್ತೆಯ ಇಕ್ಕೆಲಗಳಲ್ಲಿದ್ದ ಗಿಡಗಂಟಿಗಳನ್ನು ತೆಗೆದು ರಸ್ತೆಯನ್ನು ಅಗಲಗೊಳಿಸಲಾಗಿದೆ.

ಗ್ರಾ.ಪಂ. ಮಾಜಿ ಸದಸ್ಯ ಸುಲೈಮಾನ್‌, ಹಾಲಿ ಸದಸ್ಯ ಧರ್ನಪ್ಪ ಗೌಡ, ಅಶ್ರಫ್, ಬಾರ್ಯ ಸಿಎ ಬ್ಯಾಂಕ್‌ ಅಧ್ಯಕ್ಷ ಸುಬ್ರ ಹ್ಮಣ್ಯ, ಸ್ಥಳೀಯರಾದ ಪ್ರಶಾಂತ್‌ ಜೈನ್‌, ಮಜೀದ್‌, ನಾಗೇಶ್‌ ಪೂಜಾರಿ ಸೇರಿದಂತೆ ವಿವಿಧ ಸಂಘ ಟನೆಗಳು, ಸ್ಥಳೀಯರ ಸಹಕಾರದಿಂದ ಈ ಕಾರ್ಯ ನಡೆಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next