Advertisement
ಆರಿಗಮಜಲಿನಲ್ಲಿ ಸೋಮವಾರ ರಸ್ತೆ ತಡೆ ನಡೆಸಿದ ಗ್ರಾಮಸ್ಥರು, ರಸ್ತೆ ದುರಸ್ತಿಗೆ ಪಟ್ಟು ಹಿಡಿದರು.ಹದಗೆಟ್ಟಿರುವ ರಸ್ತೆ ಬಗ್ಗೆ ಈ ಹಿಂದೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ನೀಡಲಾಗಿದೆ. ಸಮೀಪದ ಎಲ್ಲ ರಸ್ತೆಗಳು ಅಭಿವೃದ್ಧಿಗೊಳ್ಳುತ್ತಿದ್ದರೂ, ಈ ರಸ್ತೆ ಮಾತ್ರ ಅಭಿವೃದ್ಧಿ ವಂಚಿತವಾಗಿದೆ. ಸುಮಾರು 7 ಕಿ.ಮೀ. ದೂರದ ಈ ರಸ್ತೆ, ವಾಹನ ಸಂಚಾರಕ್ಕೂ ಅಯೋಗ್ಯವಾಗಿದೆ. ಜಿಲ್ಲಾ ಪಂಚಾಯತ್ ರಸ್ತೆಯಾಗಿರುವ ಇದರ ಅರ್ಧ ಭಾಗ ಪುತ್ತೂರು ವಿಧಾನಸಭಾ ಕ್ಷೇತ್ರದ ನೆಟ್ಟಣಿಗೆ ಮುಟ್ನೂರು ಕ್ಷೇತ್ರಕ್ಕೆ ಒಳಪಟ್ಟರೆ ಉಳಿದರ್ಧಭಾಗ ಸುಳ್ಯ ವಿಧಾನಸಭಾ ಕ್ಷೇತ್ರದ ಬೆಳಂದೂರು ಕ್ಷೇತ್ರಕ್ಕೆ ಒಳಪಟ್ಟಿದೆ. ಆದ್ದರಿಂದ ಗ್ರಾ.ಪಂ. ಅನುದಾನವನ್ನು ಬಳಸುವ ಹಾಗಿಲ್ಲ. ಇದೆಲ್ಲದರ ನೇರ ಪರಿಣಾಮ ಆಗಿರುವುದು ಜನಸಾಮಾನ್ಯರ ಮೇಲೆ. 1800 ಜನಸಂಖ್ಯೆಯಿರುವ ಈ ಗ್ರಾಮದಲ್ಲಿ ಎರಡು ಸರಕಾರಿ ಪ್ರಾಥಮಿಕ ಶಾಲೆ, ಅಂಚೆ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಹಕಾರಿ ಸಂಘ, ಯುವಕ- ಯುವತಿ ಮಂಡಲ, ಭಜನ ಮಂಡಳಿ, ಸೇವಾ ಸಮಿತಿ, ಒಕ್ಕೂಟ ಎಲ್ಲವೂ ಇದೆ. ಹಾಗಿದ್ದು ಮೂಲ ಸೌಕರ್ಯದ ಬಗ್ಗೆ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ಆರೋಪಿಸಿದರು.
Related Articles
Advertisement
ಪಿಡಿಒ ದೇವಪ್ಪ ಪಿ.ಆರ್. ಮಾತನಾಡಿ, ಜಿ.ಪಂ.ರಸ್ತೆ ದುರಸ್ತಿಗೆ ಕ್ರಿಯಾ ಯೋಜನೆಯಲ್ಲಿ ಅನುದಾನ ಇಟ್ಟು ತಾಲೂಕು ಪಂಚಾಯತ್ ಇಒ ಅನುಮತಿಸಿದರೆ ಕಾಮಗಾರಿ ನಡೆಸಬಹುದು ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ಪ್ರಮೀಳಾ ಜನಾರ್ದನ್ ಮಾತನಾಡಿ, ಲಭ್ಯ ಅನುದಾನವನ್ನು ಕ್ಷೇತ್ರದ ಎಲ್ಲ ರಸ್ತೆಗಳಿಗೆ ಹಂಚಿಕೆ ಮಾಡಲಾಗಿದೆ. ಈ ರಸ್ತೆಗೂ ರೂ.5 ಲಕ್ಷ ಇಡಲಾಗಿದೆ. ಇಲ್ಲಿನ ವಸ್ತುಸ್ಥಿತಿಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಮನವರಿಕೆ ಮಾಡಿ, ಹೆಚ್ಚುವರಿ ಅನುದಾನ ತರಿಸಲು ಪ್ರಯತ್ನಿಸಲಾಗುವುದು ಎಂದರು.
ಪ್ರತಿಭಟನೆ ಹಿಂದಕ್ಕೆರಸ್ತೆ ದುರಸ್ತಿ ಬಗ್ಗೆ ಜನಪ್ರತಿನಿಧಿಗಳಿಂದ ಸೂಕ್ತ ಭರವಸೆ ದೊರಕಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲಾಯಿತು. ಬೆಳಗ್ಗೆ 7 ಗಂಟೆಯಿಂದಲೇ ಪ್ರತಿಭಟನೆ ಆರಂಭವಾಗಿತ್ತು. ಪ್ರತಿಭಟನೆ ಹಿಂದೆಗೆದುಕೊಂಡ ಬಳಿಕ ರಸ್ತೆ ಬದಿಯ ಪೊದೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಶ್ರಮದಾನದ ಮೂಲಕ ನಡೆಸಲಾಯಿತು. ಜನಪ್ರತಿನಿಧಿಗಳ ಭೇಟಿ
ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ ಕೆ. ಮಾತನಾಡಿ, ಈ ಭಾಗದವಳೇ ಆದ ನನಗೆ ಸಮಸ್ಯೆಯ ಅರಿವಿದೆ. ರಸ್ತೆ ದುರಸ್ತಿಗೆ ಅನುದಾನ ಇರಿಸುತ್ತೇನೆ. ತಾ.ಪಂ. ಅಧ್ಯಕ್ಷರ ವಿಶೇಷ ನಿಧಿಯಿಂದಲೂ ಅನುದಾನ ನೀಡಲು ಅಧ್ಯಕ್ಷರಲ್ಲಿ ಮನವಿ ಮಾಡಲಾಗುವುದು ಎಂದರು.