ಹೊನ್ನಾಳಿ: ತುಂಗಾ ನಾಲಾ ಆಧುನೀಕರಣ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ತಾಲೂಕು ಬಿಜೆಪಿ ವತಿ ಯಿಂದ ಶಿವಮೊಗ್ಗ ನಗರದ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಜೂನ್ 12ಕ್ಕೆ ಸೋಮವಾರ ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ ಚೀಲೂರು ಗ್ರಾಮದಿಂದ ರೈತರು, ವಿದ್ಯಾರ್ಥಿಗಳು, ಸಾರ್ವಜನಿಕರೊಂದಿಗೆ ಬೈಕ್‌ಗಳು ಹಾಗೂ ವಿವಿಧ ವಾಹನಗಳೊಂದಿಗೆ ಶಿವಮೊಗ್ಗ ನಗರದ ಫ್ಲೆ çಓವರ್ ಸೇತುವೆ ಮುಂಭಾಗ ಇರುವ ಸಂಗೊಳ್ಳಿರಾಯಣ್ಣ ವೃತ್ತಕ್ಕೆ ತಲುಪಿ ರಸ್ತೆ ತಡೆ ಪ್ರಾರಂಭಿಸಲಾಗುವುದು. ತುಂಗಾ ನಾಲಾ ಆಧುನೀಕರಣ ಮಾಡದೇ ಇರುವುದರಿಂದ ತಾಲೂಕಿನ ಕೊನೆ ಭಾಗದ ರೈತರಿಗೆ ತೀವ್ರ ತೊಂದರೆಯಾಗಿದ್ದು ಕಳೆದ ನಾಲ್ಕು ವರ್ಷಗಳಿಂದ ಸರಿಯಾಗಿ ಬೆಳೆ ಬೆಳೆದಿರುವುದಿಲ್ಲ ಎಂದು ಹೇಳಿದರು.
ಬಸ್ ಸಂಚಾರದ ವಿರುದ್ಧ ಪ್ರತಿಭಟನೆ: ಹೊನ್ನಾಳಿಯಿಂದ ಶಿವಮೊಗ್ಗ ನಗರಕ್ಕೆ ತೆರಳುವ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್ ಗಳ ಮಾರ್ಗವನ್ನು ಜಿಲ್ಲಾಡಳಿತ ಬದಲಾವಣೆ ಮಾಡಿ ಇನ್ನಿಲ್ಲದ ತೊಂದರೆಯನ್ನು ಸಾರ್ವಜನಿಕರಿಗೆ ಮಾಡಿದೆ. ಈ ಮೊದಲು ಬಸ್ ಗಳು ನಗರದೊಳಗೆ ಕೋರ್ಟ್ ಸರ್ಕಲ್, ಗೋಪಿ ಸರ್ಕಲ್, ಅಮೀರಾಮ್ ಸರ್ಕಲ್ ಮೂಲಕ ಕೇಂದ್ರ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದವು ಇದರಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸೇರಿದಂತೆ ಎಲ್ಲಾ ಸಾರ್ವಜನಿಕರಿಗೆ ಉಪಯೋಗವಾಗುತ್ತಿತ್ತು.
ಈಗ ಮಾರ್ಗವನ್ನು ಫ್ಲೆ ç ಓವರ್‌ನಿಂದ ನಗರದ ಹೊರಗೆ ಚಲಿಸುವಂತೆ ಮಾಡಿ ಸುಮಾರು 10 ಕಿ.ಮೀ ದೂರ ಚಲಿಸಿ ಕೇಂದ್ರ ಬಸ್ ನಿಲ್ದಾಣ ತಲುಪುವ ಅವೈಜ್ಞಾನಿಕ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದರು. ಪ್ರಯಾಣಿಕರು ಶಿವಮೊಗ್ಗ ನಗರಕ್ಕೆ ಹೋದ ಮೇಲೆ ಹೊನ್ನಾಳಿಯಿಂದ ಶಿವಮೊಗ್ಗ ನಗರಕ್ಕೆ ತೆರಳಲು ಕೊಡಬೇಕಾದ ಬಸ್ ದರವನ್ನು ನಗರದ ಇತರ ಸ್ಥಳ ತಲುಪಲು ಆಟೋಗಳಿಗೆ ಕೊಡಬೇಕಾಗಿದೆ.
ಹಾಗೂ ಬಸ್ ಗಳು ಬೇಕಾಬಿಟ್ಟಿಯಾಗಿ ದೂರ ಚಲಿಸುವುದರಿಂದ ಸರ್ಕಾರಕ್ಕೂ ಅತಿ ನಷ್ಠ ಉಂಟಾಗುತ್ತದೆ ಇದರ ವಿರುದ್ಧ ತಮ್ಮ ಹೋರಾಟವಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಸ್ತೆ ತಡೆ ಚಳವಳಿಗೆ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದರು. ಜಿಪಂ ಸದಸ್ಯರಾದ ಎಂ.ಆರ್. ಮಹೇಶ್, ಸುರೇಂದ್ರನಾಯ್ಕ, ತಾಪಂ ಸದಸ್ಯ ಸಿ.ಆರ್. ಶಿವಾನಂದ್, ಮುಖಂಡರಾದ ಎಚ್.ಬಿ.ಮೋಹನ್, ಪಾಲಾಕ್ಷಪ್ಪ, ಮಾರುತಿನಾಯ್ಕ, ಕೃಷ್ಣಮೂರ್ತಿ, ತುಂಡಾ ಇತರರು ಇದ್ದರು.