ತಿ.ನರಸೀಪುರ: ಗೋ ರಕ್ಷಣೆಯ ನೆಪದಲ್ಲಿ ವಂಚನೆ, ಶಾಲೆಯನ್ನು ನಡೆಸಲಿಕ್ಕೆ ಸಮುದಾಯದ ನೆರವು ಪಡೆದುಕೊಂಡು ಕುರುಬೂರು ಗ್ರಾಮದ ಬಳಿಯಿರುವ ಪಿಂಜಾರಪೋಲ್(ಗೋ ಶಾಲೆ)ಯಲ್ಲಿ ನೂರಾರು ಗೋವುಗಳಿಗೆ ನೀರು ಮತ್ತು ಮೇವನ್ನು ನೀಡದೆ ಶೋಷಣೆ ಮಾಡುತ್ತಿರುವುದನ್ನು ಖಂಡಿಸಿ ಬಹುಜನ ಸಮಾಜ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 212ರಲ್ಲಿ ರಸ್ತೆತಡೆ ಪ್ರತಿಭಟನೆ ನಡೆಸಿದರು.
ತಾಲೂಕಿನ ಕುರುಬೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಪಿಂಜಾರ ಪೋಲ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎತ್ತುಗಳ ಬಿಡುಗಡೆ ಮಾಡಿಸಲಿಕ್ಕೆ ರೈತರೊಂದಿಗೆ ತೆರಳಿದ್ದ ಸಂದರ್ಭದಲ್ಲಿ ವಿವಿಧ ಪ್ರಕರಣದಡಿ ಸೆರೆಯಾಗಿದ್ದ ಗೋವುಗಳು ಮತ್ತು ರಕ್ಷಣೆ ಮಾಡಲ್ಪಟ್ಟಿದ್ದ ಜಾನುವಾರುಗಳಿಗೆ ಸಮರ್ಪಕವಾಗಿ ಮೇವಾಗಲಿ, ಕುಡಿಯುವ ನೀರಾಗಲಿ ನೀಡದ್ದರಿಂದ ಗೋವುಗಳೆಲ್ಲವೂ ದೈಹಿಕವಾಗಿ ದುರ್ಬಲಗೊಂಡು ನರಳುತ್ತಿದ್ದನ್ನು ಕಂಡ ಮುಖಂಡರು ಮತ್ತು ಕಾರ್ಯಕರ್ತರು ಗೋ ಶೋಷಣೆ ಖಂಡಿಸಿ ಧಿಡೀರ್ ರಸ್ತೆತಡೆ ನಡೆಸಿದರು.
ಬಿಎಸ್ಪಿ ಹಿರಿಯ ಮುಖಂಡ ಹಾಗೂ ಕ್ಷೇತ್ರ ಉಸ್ತುವಾರಿ ಬಿ.ಆರ್.ಪುಟ್ಟಸ್ವಾಮಿ ಮಾತನಾಡಿ, ಕುರುಬೂರು ಪಿಂಜಾರಪೋಲ್‌ನಲ್ಲಿ ಗೋ ಶಾಲೆ ಹಾಗೂ ಗೋವುಗಳ ರಕ್ಷಣೆಯ ನೆಪದಲ್ಲಿ ಹಣ ಮಾಡುವ ದಂಧೆ ನಡೆಯುತ್ತಿದೆ. ಗೋ ಶಾಲೆಯಲ್ಲಿರುವ 300ಕ್ಕೂ ಹೆಚ್ಚು ಜಾನುವಾರುಗಳಿಗೆ ಮೇವು, ನೀರು ನೀಡುತ್ತಿಲ್ಲ. ಅಕ್ರಮ ಮರಳು ಪ್ರಕರಣದಡಿ ದಾಖಲಾಗಿರುವ ಗೋವುಗಳ ನಿರ್ವಹಣೆಗೆ ಜೊತೆ ಎತ್ತುಗಳಿಗೆ ರೈತರಿಂದ 400 ರೂಗಳ ಶುಲ್ಕ ಪಡೆಯುತ್ತಿದ್ದರೂ ಜಾನುವಾರುಗಳನ್ನು ಬಡಕಲು ಮಾಡಲಾಗಿದೆ ಎಂದು ದೂರಿದರು.
ಜಾನುವಾರುಗಳ ಸಂಖ್ಯೆ ಗನುಗುಣವಾಗಿ ದನಗಾಹಿಗಳನ್ನು ನೇಮಿಸಿಕೊಂಡಿಲ್ಲ. ಆಹಾರವಿಲ್ಲದ ಸಾವನ್ನಪ್ಪಿದ ಜಾನುವಾರುಗಳ ಮಾಹಿತಿಯೂ ಇಲ್ಲ. ಕೇಂದ್ರ ಸರ್ಕಾರ ಗೋ ರಕ್ಷಣೆಗೆ ಕಾಯ್ದೆ ಜಾರಿಗೆ ತಂದಿದ್ದರೆ ಪಿಂಜಾರಪೋಲ್‌ನಲ್ಲಿ ಗೋವುಗಳ ಶೋಷಣೆ ನಡೆಯುತ್ತಿರುವುದು ದೊಡ್ಡ ದುರಂತವಾಗಿದೆ ಎಂದು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎನ್.ಆನಂದ್ ಮಾತನಾಡಿ, ಕುರುಬೂರು ಪಿಂಜಾರಪೋಲ್‌ಗೆ ರೈತರಿಂದ ವಶಪಡಿಸಿ ಕೊಳ್ಳುವ ಯಾವುದೇ ಜಾನುವಾರುಗಳನ್ನು ಬಿಡಲು ಅವಕಾಶ ಮಾಡಿಕೊಡಲ್ಲ. ಗೋವುಗಳ ಶೋಷಣೆ ಮತ್ತು ಹಣದ ದಂಧೆಯ ಬಗ್ಗೆ ದೂರನ್ನು ಕೊಡಿ, ಸಂಬಂಧಪಟ್ಟವರಿಗೆ ತನಿಖೆಗೆ ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನಾನಿರತರು ಪ್ರತಿಭಟನೆ ಹಿಂದಕ್ಕೆ ಪಡೆದರು.
ಏಳು ಜೊತೆ ಜಾನುವಾರುಗಳ ಬಿಡುಗಡೆ: ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಸೆರೆಯಾಗಿದ್ದ ಏಳು ಜೊತೆ ಎತ್ತುಗಳ ಬಿಡುಗಡೆಗೆ ನ್ಯಾಯಾಲಯ ಜಾಮೀನು ನೀಡಿದ್ದರಿಂದ ಗ್ರಾಮದ ರೈತರಿಗೆ ಎಲ್ಲಾ ಎತ್ತುಗಳನ್ನು ಬಿಡುಗಡೆ ಮಾಡಲಾಯಿತು.
ಪ್ರತಿಭಟನೆಯಲ್ಲಿ ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎನ್.ಪ್ರಭುಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಬಿ.ಮಹದೇವಸ್ವಾಮಿ, ಚಾ.ನಗರ ಜಿಲ್ಲಾಧ್ಯಕ್ಷ ಬಾಗಳಿ ರೇವಣ್ಣ, ಮುಳ್ಳೂರು ಗ್ರಾಪಂ ಸದಸ್ಯ ಸೋಮಣ್ಣ ಉಪ್ಪಾರ್, ಮುಖಂಡರಾದ ಪುಟ್ಟಮರುಡಯ್ಯ, ಕುರುಬೂರು ಮಹೇಂದ್ರ, ಮಹದೇವಸ್ವಾಮಿ, ತಾಯೂರು ಸಾಗರ್, ಪ್ರವೀಣ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.