ಉಡುಪಿ: ಕೋಟ ಠಾಣೆ ವ್ಯಾಪ್ತಿಯಲ್ಲಿ ಒಡಿಶಾ ಮೂಲದ ಯುವಕನೊಬ್ಬ ರವಿವಾರ ಅಪಘಾತಕ್ಕೀಡಾಗಿದ್ದು, ಅವರನ್ನು ಸಮಾಜಸೇವಕ ವಿಶುಶೆಟ್ಟಿ ಅಂಬಲಪಾಡಿ ರಕ್ಷಿಸಿ, ಸೂಕ್ತ ಚಿಕಿತ್ಸೆ ಒದಗಿಸಲು ಸಹಕರಿಸಿದ್ದಾರೆ.
ಕೂಲಿ ಕಾರ್ಮಿಕ ಕೃಷ್ಣ (27) ಅವರಿಗೆ ಬೈಕ್ ಢಿಕ್ಕಿ ಹೊಡೆದು ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿತ್ತು. ಕೂಡಲೇ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು.
ಅಪಘಾತದ ಗಂಭೀರತೆ ಹಾಗೂ ಯುವಕನ ಆರ್ಥಿಕ ಪರಿಸ್ಥಿತಿಯನ್ನು ಅರಿತ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಶಿಫಾರಸು ಮಾಡಿ ಆ್ಯಂಬುಲೆನ್ಸ್ ಮೂಲಕ ಕಳುಹಿಸಿಕೊಟ್ಟಿದ್ದರು. ಶಸ್ತ್ರಚಿಕಿತ್ಸಾ ವಿಭಾಗ ದುರಸ್ತಿಯಲ್ಲಿದೆ ಎಂಬ ಕಾರಣ ನೀಡಿ ಚಿಕಿತ್ಸೆ ನೀಡದೆ ಹಿಂದಕ್ಕೆ ಕಳುಹಿಸಿದ್ದು, ಬಳಿಕ ವಿಶು ಶೆಟ್ಟಿ ಅವರು ಆತನನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಆತನಿಗೆ ಸೂಕ್ತ ಚಿಕಿತ್ಸೆ ಒದಗಿಸಿದ್ದಾರೆ.
ವೆನ್ಲಾಕ್ ನಿರ್ಲಕ್ಷ್ಯಕ್ಕೆ ಆಕ್ರೋಶ: ವೆನ್ಲಾಕ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆಯ ವಿಭಾಗ ದುರಸ್ತಿಯಲ್ಲಿದ್ದರೆ ಅದಕ್ಕೆ ಬದಲಿ ವ್ಯವಸ್ಥೆ ಮಾಡುವ ಜವಾಬ್ದಾರಿ ಆಯಾ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಆರೋಗ್ಯ ಇಲಾಖೆಯದ್ದಾಗಿದೆ. ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದಾದರೆ ಈ ಬಗ್ಗೆ ತುರ್ತು ಪತ್ರಿಕಾ ಪ್ರಕಟನೆ ನೀಡಿ ರೋಗಿಗಳ ಪ್ರಾಣ ಉಳಿಸುವ ಮಾನವೀಯತೆಯನ್ನು ಅಸ್ಪತ್ರೆ ತೋರಿಸ ಬೇಕಾಗಿತ್ತು. ಆದರೆ ಅಷ್ಟು ದೂರದಿಂದ ಬಂದ ರೋಗಿಯು ಗಂಭೀರತೆಯನ್ನು ಅರಿಯದೆ ಅವರ ಪ್ರಣದೊಡನೆ ಚೆಲ್ಲಾಟವಾಡುವುದು ಸರಿಯಲ್ಲ ಎಂದು ವಿಶು ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.