ಕುಷ್ಟಗಿ: ಕೆರೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದ ಬಸವರಾಜ್ ನಾಗಪ್ಪ ಮಸ್ಕಿ ಕುಟುಂಬದಲ್ಲಿ ನೋವು ಮರೆಯುವ ಮುನ್ನವೇ ಮತ್ತೊಂದು ಸಾವು ಬರ ಸಿಡಿಲಿನ ಆಘಾತ ತಂದಿದೆ.
ಕಳೆದ ಭಾನುವಾರ 25 ರ ಯುವಕ ಬಸವರಾಜ್ ನಾಗಪ್ಪ ಮಸ್ಕಿ ಹುಲಿಯಾಪೂರ ಕೆರೆಯಲ್ಲಿ ಜೀವಂತ ಸಮಾಧಿಯಾಗಿದ್ದ. ಈ ನಿಧನ ವಾರ್ತೆ ಕೇಳಿದ್ದ ಬೆಂಗಳೂರಿನಲ್ಲಿದ್ದ ಮೃತ ಬಸವರಾಜ್ ನ ಸಹೋದರ ಸಂಬಂಧಿ (ದೊಡ್ಡಪ್ಪನ ಮಗ) ಈರಪ್ಪ ಮಸ್ಕಿ ಹಾಗೂ ಅವರ ಕೌಟುಂಬಿಕ ಸಂಬಂಧಿಕ ರಾಜು ತೋಟದ ಇವರೀರ್ವರು ಸೋಮವಾರ ಬೆಂಗಳೂರಿನಿಂದ ನೀರಲೂಟಿಗೆ ಬೈಕ್ ನಲ್ಲಿ ಅಂತ್ಯಕ್ರಿಯೆ ಗೆ ಬರುತ್ತಿದ್ದ ವೇಳೆ ಕೂಡ್ಲಿಗಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ, ರಾಜು ಎಂಬವರು ಸಾವನ್ನಪ್ಪಿದ್ದಾರೆ.
ಕುಷ್ಟಗಿ ತಾಲೂಕಿನ ನೀರಲೂಟಿ ನಿವಾಸಿ ಈರಪ್ಪ ಮಸ್ಕಿ ಬೈಕ್ ಚಲಾಯಿಸುತ್ತಿದ್ದರು. ಇದೇ ತಾಲೂಕಿನ ಹಿರೇಮನ್ನಾಪೂರ ನಿವಾಸಿ ರಾಜು ತೋಟದ್, ಹಿಂಬದಿಯ ಸವಾರರಾಗಿದ್ದರು. ಈ ವೇಳೆ ಕಾನಾಹೊಸಳ್ಳಿ ಬಳಿ ಹೆದ್ದಾರಿ ಡಿವೈಡರ್ ಗೆ ಢಿಕ್ಕಿಯಾಗಿ ಹಿಂಬದಿಯ ಸವಾರ ರಾಜು ತೋಟದ್ ತೀವ್ರ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಹಿಂಬಂದಿಯ ಸವಾರ ಈರಪ್ಪ ಮಸ್ಕಿ ಗಂಭೀರ ಗಾಯಗೊಂಡಿದ್ದು ಬಳ್ಳಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ನಾಳೆ ಸಿಎಂ ದೆಹಲಿ ಪ್ರವಾಸ: ಸಚಿವ ಸ್ಥಾನಾಕಾಂಕ್ಷಿಗಳಲ್ಲಿ ಹೆಚ್ಚಿದ ಕುತೂಹಲ
ಹುಲಿಯಾಪೂರ ಕೆರೆಯಲ್ಲಿ ಮೃತ ಪಟ್ಟಿದ್ದವನ ಅಂತ್ಯಕ್ರಿಯೆಗೆ ಬರುತ್ತಿದ್ದ ರಾಜು ತೋಟದ್ ದುರಂತ ಸಾವು ಕುಟುಂಬದವರನ್ನು ಕಂಗಾಲಾಗಿಸಿದೆ. ರಾಜು ತೋಟದ್ ಜೀವನ ನಿರ್ವಹಣೆಗೆ ಬೆಂಗಳೂರಿನಲ್ಲಿ ಕಾರ್ಮಿಕನಾಗಿದ್ದು, ಕ್ರಿಕೆಟ್ ಆಟಗಾರನಾಗಿದ್ದ.