Advertisement

ರಸ್ತೆ ಅಪಘಾತದಲ್ಲಿ ಮಾಜಿ ಶಾಸಕ ಹಕ್ಯಾಗೋಳ ಸಾವು

12:30 AM Dec 29, 2018 | Team Udayavani |

ಚಿಕ್ಕೋಡಿ: ಸರಳ ಸಜ್ಜನ ರಾಜಕಾರಣಿ, ಚಿಕ್ಕೋಡಿ ವಿಧಾನಸಭೆ ಮತಕ್ಷೇತ್ರದ ಮಾಜಿ ಶಾಸಕ ದತ್ತು ಹಕ್ಯಾಗೋಳ(78) ಹುಕ್ಕೇರಿ ತಾಲೂಕಿನ ಕಣಗಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ ಮತ್ತು ಲಾರಿ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Advertisement

ಕೇರೂರ ಗ್ರಾಮದವರಾದ ದತ್ತು ಹಕ್ಯಾಗೋಳ ಶುಕ್ರವಾರ ಬೆಳಗ್ಗೆ 11.30ರ ಸುಮಾರಿಗೆ ಸ್ವಗ್ರಾಮದಿಂದ ಹಿಟ್ನಿಗೆ ತೆರಳುವಾಗ ಅವರ
ಬೈಕ್‌ಗೆ ಲಾರಿ ಹಾಯ್ದು ಬೈಕ್‌ ಸವಾರ ಸುರೇಶ ಗಾಡಿಕರ ಮತ್ತು ದತ್ತು ಹಕ್ಯಾಗೋಳ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ದತ್ತು ಹಕ್ಯಾಗೋಳ 2004ರಲ್ಲಿ ಚಿಕ್ಕೋಡಿ ಮೀಸಲು ಕ್ಷೇತ್ರದಿಂದ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಬಿಜೆಪಿಯ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಅವರು, ಇತ್ತೀಚೆಗೆ ಚಿಕ್ಕೋಡಿ ಜಿಲ್ಲಾ ಹೋರಾಟದಲ್ಲಿ ಗುರುತಿಸಿಕೊಂಡು ಜಿಲ್ಲಾ ಹೋರಾಟ ಸಮಿತಿ ಮುಖಂಡ ಬಿ.ಆರ್‌.ಸಂಗಪ್ಪಗೋಳ ಜತೆಗೂಡಿ ಚಿಕ್ಕೋಡಿ ಜಿಲ್ಲೆ ರಚನೆಗೆ ಅಥಣಿ, ಕಾಗವಾಡ, ನಿಪ್ಪಾಣಿ,
ರಾಯಬಾಗ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು. ಅವರ ನಿಧನದಿಂದ ಕೇರೂರ ಗ್ರಾಮದಲ್ಲಿ ಮೌನ ಆವರಿಸಿದೆ. 

ಗುಡಿಸಲಿನಿಂದ ವಿಧಾನಸಭೆಗೆ: ಬಡ ಕುಟುಂಬದಿಂದ ಬಂದ ದತ್ತು ಹಕ್ಯಾಗೋಳ ಎಲ್ಲರ ಜತೆ ಆತ್ಮೀಯವಾಗಿ ಬೆರೆತು ಪ್ರೀತಿ
ವಾತ್ಸಲ್ಯದಿಂದ ಕಾಣುತ್ತಿದ್ದರು. ಕೇಂದ್ರ ಸಚಿವ ರಮೇಶ ಜಿಗಜಿಣಗಿ ಗರಡಿಯಲ್ಲಿ ಬೆಳೆದ ಅವರು, 1998ರಲ್ಲಿ ಕೇರೂರ ಜಿಪಂ ಸದಸ್ಯರಾಗಿ ಆಯ್ಕೆಯಾಗಿದ್ದರು. ರಮೇಶ ಜಿಗಜಿಣಗಿ ಬಿಜೆಪಿ ಸೇರಿದ ನಂತರ 2004ರಲ್ಲಿ ಚಿಕ್ಕೋಡಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಜಿಪಂ ಸದಸ್ಯರಾಗಿ, ಶಾಸಕರಾಗಿ ಕಾರ್ಯ ನಿರ್ವಹಿಸಿದ್ದರೂ ಗುಡಿಸಲಿನಲ್ಲೇ ವಾಸವಾಗಿದ್ದ ಸರಳ ವ್ಯಕ್ತಿ ಅವರು.
ಶಾಸಕರಾದ ಎರಡು ವರ್ಷದ ನಂತರ ಕೇರೂರ ಗ್ರಾಮದಲ್ಲಿ ಸಣ್ಣ ಮನೆ ಕಟ್ಟಿಕೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next