ಚಿಕ್ಕಬಳ್ಳಾಪುರ: ಲಾರಿ ಮತ್ತು ಕಾರಿನ ನಡುವಿನ ನಡೆದ ಅಪಘಾತದಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ-7ರ ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡ ಪೈಲಗುರ್ಕಿ ಬಳಿ ನಡೆದಿದೆ.
ಹೈದರಾಬಾದ್ ನ ಜಯಶ್ರೀ (50), ಅಕ್ಷಯ್ (28) ಅರ್ಶು (24) ಮೃತ ದುರ್ದೈವಿಗಳು. ಮೃತ ಜಯಶ್ರೀ ಪತಿ ದಿನೇಶ್ (53) ಗಂಭೀರ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.
ಅಪಘಾತದಲ್ಲಿ ಮೃತಪಟ್ಟವರೆಲ್ಲ ಹೈದರಾಬಾದ್ ಮೂಲದವರು ಎಂದು ಗುರುತಿಸಲಾಗಿದೆ ಘಟನೆಯಲ್ಲಿ ಸ್ವಿಫ್ಟ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಜಯಶ್ರೀ ಹಾಗೂ ದಿನೇಶ್ ಕುಟುಂಬ ಹೈದರಾಬಾದ್ ನ ಜಿಗಣಿ ಮಾರ್ಬಲ್ ಶೋರೂಮ್ ಮಾಲೀಕರು ಎಂದು ವರದಿಯಾಗಿದೆ.
ಇದನ್ನೂ ಓದಿ: ಜಿನ್ಪಿಂಗ್ಗೆ ತೀವ್ರ ಮುಖಭಂಗ; ಭಾರತದ ಮೇಲೆ ಚೀನಾದಿಂದ ದೊಡ್ಡ ದಾಳಿಗೆ ಸಿದ್ಧತೆ?
ಬೆಂಗಳೂರಿನಿಂದ ಹೈದರಾಬಾದ್ ಗೆ ಹೊರಟಿದ್ದ ಕಾರಿಗೆ ಹಿಂಬದಿಯಿಂದ ಅತಿವೇಗಲ್ಲಿ ಬಂದ ಲಾರಿ ಗುದ್ದಿದೆ. ಸ್ಪೀಡ್ ಹಂಪ್ ಬಳಿ ಕಾರು ಬ್ರೇಕ್ ಹಾಕಿದ ವೇಳೆ ಹಿಂಬದಿಯಿಂದ ಅತಿ ವೇಗದಿಂದ ಲಾರಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ.