Advertisement

ಬೆಂಗಳೂರು –ಸೋಲಾಪುರ: ರೋ ರೋ ಸಂಚಾರಕ್ಕೆ ಚಾಲನೆ

08:41 AM Aug 31, 2020 | Hari Prasad |

ಬೆಂಗಳೂರು: ನೈಋತ್ಯ ರೈಲ್ವೇಯ ಮೊದಲ ರೋ-ರೋ ಸೇವೆಗೆ (ನೆಲಮಂಗಲ – ಸೋಲಾಪುರ ನಡುವೆ) ಸಿಎಂ ಯಡಿಯೂರಪ್ಪ ಅವರು ರವಿವಾರ ಹಸಿರು ನಿಶಾನೆ ತೋರಿದರು.

Advertisement

ಈ ಸಂದರ್ಭ ಮಾತನಾಡಿದ ಅವರು, ರಾಜ್ಯದ ರೈಲ್ವೇ ಯೋಜನೆಗಳ ಜಾರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಬೆಳಗ್ಗೆ ರೋ- ರೋ ರೈಲು ಸೇವೆಗೆ ವೀಡಿಯೋ ಲಿಂಕ್‌ ಮೂಲಕ ಚಾಲನೆ ನೀಡಿ, ಪ್ರಧಾನಿ ವಿವಿಧ ಸಾರಿಗೆ ಪ್ರಕಾರಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ‘ಮಲ್ಟಿ ಮಾಡೆಲ್‌ ಟ್ರಾನ್ಸ್‌ಪೋರ್ಟ್‌ ಸಿಸ್ಟಮ್‌’ ಬಗ್ಗೆ ನಿರಂತರ ಪ್ರತಿಪಾದಿಸುತ್ತಿದ್ದು, ಅವರ ಆಶಯದ ಫ‌ಲವಾಗಿ ಈ ಸುಧಾರಿತ ಸೇವೆ ಆರಂಭವಾಗಿದೆ ಎಂದರು.

ಈ ವಿಶೇಷ ಯೋಜನೆಯನ್ನು ಮಂಜೂರು ಮಾಡಿದ ಪ್ರಧಾನಿ ಮೋದಿ, ರೈಲ್ವೇ ಸಚಿವ ಪಿಯೂಷ್‌ ಗೋಯೆಲ್‌ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು. ಈ ಹಿಂದೆ ಕೊಂಕಣ್‌ ರೈಲ್ವೇ ಪ್ರದೇಶದಲ್ಲಿ ಸಂಚರಿಸುತ್ತಿದ್ದ ರೋ-ರೋ ಸೇವೆಯನ್ನು ಬೆಂಗಳೂರು ಮತ್ತು ಸೋಲಾಪುರದ ಮಧ್ಯೆ ಆರಂಭಿಸುತ್ತಿರುವುದಕ್ಕಾಗಿ ರೈಲ್ವೇ ಇಲಾಖೆಗೆ ಧನ್ಯವಾದ ಸಲ್ಲಿಸಲಾಗುವುದು ಎಂದು ತಿಳಿಸಿದರು.

ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿಯವರು ರಾಜ್ಯದ ರೈಲ್ವೇ ಯೋಜನೆಗಳ ಸಂಬಂಧ ಕೆಲ ಸಲಹೆಗಳನ್ನು ನೀಡಿದ್ದಾರೆ. ಅದರಂತೆ ರಾಜ್ಯ ಸರಕಾರದಿಂದ ಏನೆಲ್ಲ ಮಾಡಲು ಸಾಧ್ಯವಿದೆಯೋ ಅದನ್ನೆಲ್ಲ ಪ್ರಥಮ ಆದ್ಯತೆ ಮೇರೆಗೆ ಮಾಡಿಕೊಡಲಾಗುವುದು ಎಂದರು.

Advertisement

ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ, ಸಚಿವರಾದ ಅಶೋಕ್‌, ರಮೇಶ್‌ ಜಾರಕಿಹೊಳಿ, ಸಿಎಂ ರಾಜಕೀಯ ಕಾರ್ಯದರ್ಶಿ ಶಂಕರ ಗೌಡ ಪಾಟೀಲ್‌, ಶಾಸಕ ನಾರಾಯಣ ಸ್ವಾಮಿ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಮಾರ್ಗವೇ ಏಕೆ?
ಕೃಷಿ ಉತ್ಪನ್ನಗಳಿಂದ ಸಮೃದ್ಧವಾಗಿರುವ ಬೆಂಗಳೂರು ಮತ್ತು ಸೋಲಾಪುರ ನಗರಗಳು ವ್ಯಾಪಾರ ಕೇಂದ್ರಗಳಾಗಿವೆ. ಹೆಚ್ಚಿನ ಸಂಖ್ಯೆಯ ಸರಕು ಸಾಗಣೆ ಈ ಎರಡು ನಗರಗಳ ನಡುವೆ ನಡೆಯುತ್ತದೆ. ಈ ನಗರಗಳ ನಡುವಿನ ರೋ ರೋ ರೈಲು ಸೇವೆಗಳ ಮಾರ್ಗವು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರಗಳ ರಾಜ್ಯಗಳ ಮೂಲಕ ಹಾದುಹೋಗಲು ನಿರ್ಧರಿಸಲಾಗಿದೆ. ಬೆಂಗಳೂರು – ಸೋಲಾಪುರ ರೋರೋ ಸೇವೆಯು ಭಾರತೀಯ ರೈಲ್ವೆಯಲ್ಲಿ ಖಾಸಗಿಯಾಗಿ ಕಾರ್ಯ ನಿರ್ವಹಿಸುವ ಏಕೈಕ ರೈಲು ಸೇವೆಯಾಗಿದೆ.

ಮೊದಲ ರೋ-ರೋ ಕೊಂಕಣ ರೈಲ್ವೇಯಿಂದ
ರೋ-ರೋ ರೈಲು ಸೇವೆಯನ್ನು ಮೊತ್ತಮೊದಲ ಬಾರಿಗೆ ಪರಿಚಯಿಸಿದ್ದು ಕೊಂಕಣ ರೈಲ್ವೇ ಕಾರ್ಪೊರೇಷನ್‌ ಲಿ. (ಕೆಆರ್‌ಸಿಎಲ್‌) ಆಗಿದೆ. ಕರಾವಳಿಯಲ್ಲಿ ಹಾದುಹೋಗುವ ರಸ್ತೆಗಳ‌ಲ್ಲಿ ಸರಕು ಸಾಗಣೆ ತುಂಬಾ ಕಷ್ಟಕರವಾಗಿತ್ತು. ಹಲವು ಅಪಘಾತಗಳಿಗೂ ಇದು ಕಾರಣವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರೋ-ರೋ ಸೇವೆಯಂತಹ ವಿನೂತನ ಪ್ರಯೋಗಗಳನ್ನು ಕೆಆರ್‌ಸಿಎಲ್‌ ಪರಿಚಯಿಸಿ ಯಶಸ್ವಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next