ಬೆಂಗಳೂರು: ನಗರದ ನೆಲಮಂಗಲ ರೈಲ್ವೆ ನಿಲ್ದಾಣದಿಂದ ಸೋಲಾಪುರದ ಬಾಲೆ ರೈಲ್ವೆ ನಿಲ್ದಾಣದ ನಡುವೆ ಸಂಚರಿಸಲಿರುವ ರೋ-ರೋ ರೈಲು ಸೇವೆಯ ಮೊದಲ ಪ್ರಯಾಣಕ್ಕೆ ಮುಖ್ಯಮಂತ್ರಿ ಬಿ ಎಸ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಸರಕು ಸಾಮಾನು ಸಹಿತವಾದ ಅಥವಾ ಖಾಲಿ ಇರುವ 42 ಟ್ರಕ್‍ಗಳನ್ನು ಈ ರೊ-ರೊ ರೈಲಿನ ಮೇಲೆ ಲೋಡ್ ಮಾಡಿ ಸಾಗಿಸಬಹುದಾಗಿದೆ. ನೆಲಮಂಗಲ ಹಾಗೂ ಬಾಲೆಯಲ್ಲಿ ಈ ಟ್ರಕ್‍ಗಳನ್ನು ರೈಲಿಗೆ ಹತ್ತಿಸುವ ಹಾಗೂ ರೈಲಿಗೆ ಇಳಿಸುವಂತಹ ಕಾರ್ಯ ನಡೆಯುತ್ತದೆ. ರಸ್ತೆ ಮೂಲಕ ಸಂಚರಿಸುವ ಟ್ರಕ್‍ಗಳನ್ನು ರೈಲಿನ ಮೂಲಕ ಸಾಗಿಸುವ ಮೂಲಕ ಕ್ಷಿಪ್ರವಾಗಿ ಟ್ರಕ್‍ಗಳನ್ನು ಹಾಗೂ ಸರಕು ಸಾಮಗ್ರಿಗಳನ್ನು ಈ 2 ನಗರಗಳ ನಡುವೆ ಸಾಗಾಣಿಕೆ ಮಾಡಬಹುದಾಗಿದೆ ಎಂದು ಬಿಎಸ್ ವೈ ಹೇಳಿದರು.
ಗೋದಾಮುಗಳಿಂದ ಅಥವಾ ಮಾರುಕಟ್ಟೆಯಿಂದ ಲೋಡ್ ಆದಂತಹ ಟ್ರಕ್‍ಗಳು ರೈಲ್ವೆ ನಿಲ್ದಾಣದಲ್ಲಿ ಬಂದು ರೈಲಿನಲ್ಲಿ ಲೋಡ್ ಆಗುತ್ತವೆ. ರೈಲುಗಳ ಮೂಲಕ ಈ ಟ್ರಕ್‍ಗಳು ಮತ್ತೊಂದು ನಗರಕ್ಕೆ ಬಂದು ಸಾಮಾನು ಸರಂಜಾಮುಗಳೊಂದಿಗೆ ಗೋದಾಮು ಅಥವಾ ಮಾರುಕಟ್ಟೆಗೆ ಹೋಗಿ ಹೊತ್ತು ತಂದ ಸಾಮಾನುಗಳನ್ನು ಅನ್‍ಲೋಡ್ ಮಾಡಲು ಈ ವ್ಯವಸ್ಥೆಯಿಂದ ಸಹಕಾರಿಯಾಗುತ್ತದೆ. ಇಂತಹ ಒಂದು ರೊ-ರೊ ರೈಲಿನಲ್ಲಿ ಸರಕು ಹಾಗೂ ಟ್ರಕ್‍ಗಳೆರಡರ ಭಾರವು ಸೇರಿ 1,260 ಟನ್ ಭಾರವನ್ನು ಸಾಗಿಸಬಹುದಾಗಿದೆ.
ಬೆಂಗಳೂರಿನಿಂದ ತರಕಾರಿ, ತೆಂಗಿನ ಕಾಯಿ ಅಡಿಕೆ ತೋಟಗಾರಿಕೆ ಉತ್ಪನ್ನಗಳು ಕೈಗಾರಿಕಾ ಉತ್ಪನ್ನಗಳನ್ನು ಸೋಲಾಪುರಕ್ಕೆ ಸಾಗಿಸಲು ಹಾಗೂ ಸೋಲಾಪುರದಿಂದ ಈರುಳ್ಳಿ, ಬೇಳೆ ಕಾಳುಗಳು ಮುಂತಾದ ಸರಕುಗಳನ್ನು ಬೆಂಗಳೂರಿಗೆ ಸಾಗಿಸಲು ಇದರಿಂದ ನೆರವಾಗಲಿದೆ.
ಈ ಸಂದರ್ಭದಲ್ಲಿ ಕೇಂದ್ರ ರೈಲ್ವೇ ರಾಜ್ಯ ಸಚಿವ ಸುರೇಶ್ ಅಂಗಡಿ, ಕಂದಾಯ ಸಚಿವ ಆರ್ ಅಶೋಕ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರ್ ಗೌಡ ಪಾಟೀಲ್, ಶಾಸಕ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು