ಹುಬ್ಬಳ್ಳಿ: ಉದ್ಯಮಿ ದಿ.ಆರ್.ಎನ್. ಶೆಟ್ಟಿ ಅವರ ಉದ್ಯಮ ಸಾಧನೆ ಜತೆಗೆ ಸಮಾಜಮುಖೀ ಕಾರ್ಯ ಹಾಗೂ ಸಾಮಾಜಿಕ ಕಳಕಳಿ ಪ್ರತಿಯೊಬ್ಬರಿಗೂ ಮಾದರಿ ಹಾಗೂ ಪ್ರೇರಣಾದಾಯಕವಾಗಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಇಲ್ಲಿನ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹುಬ್ಬಳ್ಳಿ-ಧಾರವಾಡ ಬಂಟರ ಸಂಘ ಆಯೋಜಿಸಿದ್ದ ದಿ| ಡಾ|ಆರ್.ಎನ್.ಶೆಟ್ಟಿ ಪುತ್ಥಳಿ ಅನಾವರಣ ಹಾಗೂ ಅವರ ಸ್ಮರಣಾರ್ಥ ಮೊದಲ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆರ್.ಎನ್.ಶೆಟ್ಟಿಯವರು ಮುರುಡೇ ಶ್ವರ ಸಣ್ಣ ಗ್ರಾಮದಲ್ಲಿ ಜನಿಸಿ ದರೂ ಉದ್ಯಮ, ಸಾಮಾಜಿಕ ಕಳಕಳಿ ಕಾರ್ಯದೊಂದಿಗೆ ರಾಷ್ಟ್ರಮಟ್ಟದಲ್ಲಿ ಪರಿಚಿತರಾಗಿದ್ದು, ಸಾರ್ಥಕ ಬದುಕು ಅವರದ್ದು. ಉದ್ಯಮ, ವ್ಯಾಪಾರ, ನಿರ್ಮಾಣ, ಸಾಮಾಜಿಕ ಕಳಕಳಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಸಾಧನೆ ಮಾಡಿದ್ದು, ಮಹತ್ವದ ಕೊಡುಗೆ ನೀಡಿದ್ದಾರೆ. ಇಂತಹವರ ಪುತ್ಥಳಿ ಅನಾವರಣ ಯುವ ಪೀಳಿಗೆಗೆ ಮಾರ್ಗದರ್ಶಿಯಾಗಲಿದೆ ಎಂದರು.
ಹೊಟೇಲ್ ಸಂಘದ ರಾಜ್ಯಾಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಡಾ|ಆರ್. ಎನ್.ಶೆಟ್ಟಿ ಅವರದ್ದು ಅರ್ಥಪೂರ್ಣ ಬದುಕು. ಶಿಕ್ಷಣ-ಆರೋಗ್ಯ ಸೇವೆ ನೀಡಲು ಯಾವ ಸಮುದಾಯ ಮುಂದಾಗುತ್ತದೆಯೋ ಆ ಸಮುದಾಯದ ಸೇವೆ ಅನನ್ಯ. ಅಂತಹ ಅನನ್ಯ ಸೇವೆಗೆ ಆರ್.ಎನ್.ಶೆಟ್ಟಿಯವರು ತಮ್ಮ ಕೊಡುಗೆ ಮೂಲಕ ಸಮಾಜಕ್ಕೆ ಹೆಸರು ತರುವ ಕೆಲಸ ಮಾಡಿದ್ದಾರೆ. ಹೊಟೇಲ್ ಉದ್ಯಮದಲ್ಲೂ ಅವರ ಸಾಧನೆ ಅಪಾರವಾಗಿದೆ ಎಂದರು.
ಹು.ಧಾ.ಬಂಟರ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರ್.ಎನ್.ಶೆಟ್ಟಿ ಅವರದ್ದು ಮೇರು ವ್ಯಕ್ತಿತ್ವ , ಕೇವಲ ಬಂಟರ ಸಮಾಜಕ್ಕಷ್ಟೇ ಅಲ್ಲ ವಿವಿಧ ಸಮಾಜಗಳ ಜತೆಗೂ ಅನ್ಯೋನ್ಯ ಸಂಬಂಧ ಹೊಂದಿದ್ದು, ಎಲ್ಲ ಸಮಾಜಕ್ಕೆ ನೆರವು ನೀಡಿದ್ದಾರೆ. ಆರ್. ಎನ್.ಶೆಟ್ಟಿ ಅವರಿಗೆ ಆರ್.ಎನ್.ಶೆಟ್ಟರೇ ಸಾಟಿ ಎಂದರು. ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ ಇನ್ನಿತರರು ಮಾತನಾಡಿದರು.
ಪ್ರಶಸ್ತಿ ಪ್ರದಾನ
ಡಾ|ಆರ್.ಎನ್.ಶೆಟ್ಟಿ ಅವರ ಸ್ಮರಣಾರ್ಥ ಇದೇ ಮೊದಲ ಬಾರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ, ಬಂಟರ ಸಂಘದ ಸಂಸ್ಥಾಪಕ ಸದಸ್ಯ ಕೆ.ಜಯಂತ ರೈ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಕೆ.ಜಯಂತ ರೈ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರ ವಸಂತ ಹೊರಟ್ಟಿ ಪ್ರಶಸ್ತಿ ಪಡೆದರು.
ಡಾ|ಆರ್.ಎನ್.ಶೆಟ್ಟಿ ಕುಟುಂಬ ದವರಾದ ಸುನಿಲ್ ಶೆಟ್ಟಿ, ಕೆ.ಜೀವನಶೆಟ್ಟಿ, ಶೋಭಾ ಶೆಟ್ಟಿ, ರಮೇಶ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ಡಾ|ಡಿ. ಶೆಟ್ಟಿ, ಎಂ.ಸತೀಶಚಂದ್ರ ಶೆಟ್ಟಿ, ಬಿ.ಸಿ.ಶೆಟ್ಟಿ, ಎಚ್.ದಿನೇಶ ಶೆಟ್ಟಿ, ಯು. ಸೀತಾರಾಮ ಶೆಟ್ಟಿ ಇನ್ನಿತರರು ಹಾಜರಿದ್ದರು. ಎಸ್.ಬಿ.ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿಶ್ವನಾಥ ಶೆಟ್ಟಿ ವಂದಿಸಿದರು.