Advertisement

ಆರ್‌ಎಲ್‌ಎಸ್‌ಪಿ ನಾಯಕನ ಕಗ್ಗೊಲೆ; ಹಿಂಸಾತ್ಮಕ ಪ್ರತಿಭಟನೆ, ಫೈರಿಂಗ್‌

11:03 AM Aug 14, 2018 | Team Udayavani |

ಹಾಜೀಪುರ, ಬಿಹಾರ :ರಾಷ್ಟ್ರೀಯ ಲೋಕ ಸಮತಾ ಪಕ್ಷದ (ಆರ್‌ಎಲ್‌ಎಸ್‌ಪಿ) ನಾಯಕ ಮನೀಶ್‌ ಸಹಾನಿ ಅವರನ್ನು ಬಿಹಾರದ ವೈಶಾಲಿ ಜಿಲ್ಲೆಯ ಜಂದಹಾನ್‌ ಪ್ರದೇಶದಲ್ಲಿರುವ ಅವರ ಆಫೀಸಿನಲ್ಲೇ ನಿನ್ನೆ ಸೋಮವಾರ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಸಹಾನಿ ಅವರು ಜಂದಹಾನ್‌ ಬ್ಲಾಕ್‌ ಆಫೀಸಿನಲ್ಲಿರುವ ತಮ್ಮ ಚೇಂಬರ್‌ನಿಂದ ಹೊರ ಬರುತ್ತಿದ್ದಂತೆಯೇ ಬೈಕ್‌ನಲ್ಲಿ ಬಂದ ಅಪರಿಚಿತ ಹಂತಕರು ಸಹಾನಿ ಅವರ ಮೇಲೆ ಯದ್ವಾತದ್ವಾ ಗುಂಡು ಹಾರಿಸಿದರು. ಕೊಲೆ ಕೃತ್ಯ ಮುಗಿಸಿದ ಕೂಡಲೇ ಹಂತಕರು ಅಲ್ಲಿಂದ ಪರಾರಿಯಾದರು. 

ತೀವ್ರವಾಗಿ ಗಾಯಗೊಂಡ ಸಹಾನಿ ಅವರನ್ನು ಒಡನೆಯೇ ಜಂದಹಾನ್‌ನಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಯ್ಯಲಾಯಿತು. ಅಲ್ಲಿನ ವೈದ್ಯರು ಹಾಜೀಪುರಕ್ಕೆ ಒಯ್ಯಲು ಸೂಚಿಸಿದರು. ಖಾಸಗಿ ನರ್ಸಿಂಗ್‌ ಹೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಸಹಾನಿ ಕೊನೆಯುಸಿರೆಳೆದರು. 

ಘಟನೆಯನ್ನು ಅನುಸರಿಸಿ ಸಹಾನಿ ಅವರ ಬೆಂಬಲಿಗರು ಜಂದಹಾನ್‌ ಪೊಲೀಸ್‌ ಠಾಣೆ ಎದುರು ಹಿಂಸಾತ್ಮಕ ಪ್ರತಿಭಟನೆ ನಡೆಸಿದರು. 

ಆದರೆ ಅವರು ಪೊಲೀಸ್‌ ಠಾಣೆಯ ಮೇಲೆ ಕಲ್ಲೆಸೆಯಲು ಆರಂಭಿಸಿದಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಪ್ರತಿಭಟನಕಾರರನ್ನು ಚದುರಿಸಿದರು. 

Advertisement

ಪೊಲೀಸ್‌ ಫೈರಿಂಗ್‌ನಲ್ಲಿ ಕನಿಷ್ಠ 10 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ. 

ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಸಚಿವರೂ ಆರ್‌ಎಲ್‌ಎಸ್‌ಪಿ ನಾಯಕರೂ ಆಗಿರುವ ಉಪೇಂದ್ರ ಕುಶವಾಹಾ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರನ್ನು ಟೀಕಿಸಿ, ಪೊಲೀಸ್‌ ಠಾಣೆ ಸಮೀಪದಲ್ಲೇ ಇದ್ದರೂ ಹಂತಕರು ಸ್ಥಳದಿಂದ ಪರಾರಿಯಾದದ್ದು ಹೇಗೆ ಎಂದು ಪ್ರಶ್ನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next