ನವದೆಹಲಿ: ಬಿಹಾರ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕ್ ಜನಶಕ್ತಿ ಪಕ್ಷಕ್ಕೆ ಯಾವುದೇ ಸೀಟು ಸಿಗದಿರುವುದಕ್ಕೆ ಅಸಮಾಧಾನಗೊಂಡ ಕೇಂದ್ರ ಸಚಿವ ಪಶುಪತಿ ಪರಾಸ್ ಮಂಗಳವಾರ (ಮಾರ್ಚ್ 19) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
ಸೋಮವಾರ ಬಿಜೆಪಿ ಮೈತ್ರಿಕೂಟ ಎನ್ ಡಿಎ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸೀಟು ಹಂಚಿಕೆಯ ಘೋಷಣೆ ಮಾಡಿತ್ತು. ಬಿಹಾರದಲ್ಲಿ ಬಿಜೆಪಿ 17 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಜೆಡಿಯುಗೆ 16 ಸ್ಥಾನ, ಎಲ್ ಜೆಪಿಗೆ 5 ಸ್ಥಾನ, ಹಿಂದೂಸ್ತಾನಿ ಏವಂ ಮೋರ್ಚಾಗೆ ಒಂದು ಹಾಗೂ ರಾಷ್ಟ್ರೀಯ ಲೋಕ್ ಮೋರ್ಚಾಗೆ ಒಂದು ಸ್ಥಾನ ಸೀಟು ಹಂಚಿಕೆ ಮಾಡಿತ್ತು.
ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಯಾವುದೇ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನಗೊಂಡಿರುವ ಪರಾಸ್ ಎನ್ ಡಿಎ ತೊರೆಯುವುದಾಗಿ ತಿಳಿಸಿದ್ದು, ಯಾವುದೇ ಪಕ್ಷದ ಜೊತೆ ಮೈತ್ರಿಗೆ ಬಾಗಿಲು ತೆರೆದಿದೆ ಎಂದು ಪರಾಸ್ ತಿಳಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಜತೆಗಿನ ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಹಾಜಿಪುರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪರಾಸ್ ಪಕ್ಷ ಸ್ಪರ್ಧಿಸುವ ಇಂಗಿತ ಹೊಂದಿತ್ತು. ಆದರೆ ಎನ್ ಡಿಎ ಸೀಟು ಹಂಚಿಕೆ ಮಾಡದಿರುವುದು ಇದೀಗ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ವರದಿ ವಿವರಿಸಿದೆ.