ನವದೆಹಲಿ: ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ರತ್ನ ಘೋಷಿಸಿದ ಬೆನ್ನಲ್ಲೇ ಚರಣ್ ಸಿಂಗ್ ಮೊಮ್ಮಗ, ಆರ್ ಎಲ್ ಡಿ ವರಿಷ್ಠ ಜಯಂತ್ ಚೌಧರಿ ಭಾರತೀಯ ಜನತಾ ಪಕ್ಷದ ಜತೆಗಿನ ಮೈತ್ರಿಯನ್ನು ಖಚಿತಪಡಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: JDS; 6 ಲೋಕಸಭಾ ಕ್ಷೇತ್ರಗಳನ್ನು ಕೇಳಲಾಗಿದೆ: ಜಿ.ಟಿ. ದೇವೇಗೌಡ
ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ರತ್ನ ಘೋಷಿಸಿದ ಕೆಲವೇ ಕ್ಷಣಗಳ ಬಳಿಕ ರಾಷ್ಟ್ರೀಯ ಲೋಕದಳ (ಆರ್ ಎಲ್ ಡಿ)ದ ವರಿಷ್ಠ, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಮೊಮ್ಮಗ ಜಯಂತ್ ಚೌಧರಿ “ ದಿಲ್ ಜೀತ್ ಲಿಯಾ”(ಹೃದಯ ಗೆದ್ದಿದೆ) ಎಂದು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆರ್ ಎಲ್ ಡಿ ಬಿಜೆಪಿ ಜತೆ ಕೈಜೋಡಿಸಲಿದೆಯೇ ಎಂಬ ಊಹಾಪೋಹಕ್ಕೆ ತೆರೆಬಿದ್ದಿದ್ದು, ಬಿಜೆಪಿ ಜತೆಗಿನ ಮೈತ್ರಿಗೆ ಒಪ್ಪಿಗೆ ಇಲ್ಲ ಎಂದು ಹೇಗೆ ಹೇಳಲಿ ಎಂದು ಜಯಂತ್ ಚೌಧರಿ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಜಯಂತ್ ಚೌಧರಿ, ದೇಶಕ್ಕೆ ಇದೊಂದು ಮರೆಯಲಾಗದ ದಿನವಾಗಿದೆ. ನನಗೆ ಭಾವನಾತ್ಮಕ ಕ್ಷಣವಾಗಿದೆ. ಮುಖ್ಯವಾಗಿ ಪ್ರಧಾನಿ ಮೋದಿ, ರಾಷ್ಟ್ರಪತಿ ಮತ್ತು ಕೇಂದ್ರ ಸರ್ಕಾರ ಧನ್ಯವಾದ ಅರ್ಪಿಸುತ್ತೇನೆ. ನನ್ನ ಅಜ್ಜ, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸುವ ಮೂಲಕ ದೇಶಕ್ಕೊಂದು ದೊಡ್ಡ ಸಂದೇಶ ರವಾನಿಸಿದಂತಾಗಿದೆ ಎಂದು ಹೇಳಿದರು.
ದೇಶದ ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹ ರಾವ್, ಚೌಧರಿ ಚರಣ್ ಸಿಂಗ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಕಳೆದ ತಿಂಗಳು ಬಿಜೆಪಿಯ ಹಿರಿಯ ರಾಜಕಾರಣಿ ಎಲ್.ಕೆ.ಅಡ್ವಾಣಿ ಮತ್ತು ಬಿಹಾರ ಮಾಜಿ ಸಿಎಂ ಕರ್ಪೂರಿ ಠಾಕೂರ್ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಘೋಷಿಸಿತ್ತು.