ಹೊಸದಿಲ್ಲಿ : ತಮಿಳು ನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಆವರು 2016ರ ಡಿಸೆಂಬರ್‌ನಲ್ಲಿ ನಿಧನ ಹೊಂದಿದ ಕಾರಣ ತೆರವಾದ ತಮಿಳು ನಾಡಿನ ರಾಧಾಕೃಷ್ಣ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು ಡಿಸೆಂಬರ್ 21ರಂದು ನಡೆಯಲಿದೆ ಮತ್ತು ಡಿ.24ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.
ಇವೇ ದಿನಾಂಕಗಳನ್ನು ಉತ್ತರ ಪ್ರದೇಶದ ಸಿಕಂದರಾ ಕ್ಷೇತ್ರ, ಪಶ್ಚಿಮ ಬಂಗಾಲದ ಸಬಾಂಗ್ ಕ್ಷೇತ್ರ ಮತ್ತು ಅರುಣಾಚಲದ ಪಕ್ಕೆ ಕಸಾಂಗ್ ಮತ್ತು ಲಿಕಬಾಲಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೂ ನಿಗದಿಸಲಾಗಿದೆ.
ಆರ್ ಕೆ ನಗರ ಉಪಚುನಾವಣೆಯನ್ನು ಈ ಹಿಂದೆ ಎಪ್ರಿಲ್ 10ಕ್ಕೆ ನಿಗದಿಸಲಾಗಿತ್ತು. ಆದರೆ ಓಟಿಗಾಗಿ ಭಾರೀ ಪ್ರಮಾಣದಲ್ಲಿ ನೋಟುಗಳನ್ನು ಹಂಚಲಾಗಿದೆ ಎಂಬ ವರದಿಗಳನ್ನು ಅನುಸರಿಸಿ ಎ.10ರ ಉಪ ಚುನಾವಣೆಯನ್ನು ರದ್ದು ಮಾಡಲಾಗಿತ್ತು.
ತಮಿಳು ನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರ ಸಂಘಟಿತ ಬಣಕ್ಕೆ ಎಐಎಡಿಎಂಕೆ ಪಕ್ಷದ ಎರಡೆಲೆ ಚಿಹ್ನೆಯನ್ನು ಚುನಾವಣಾ ಆಯೋಗವು ನೀಡಿದ ಒಂದು ದಿನದ ತರುವಾಯ ಆರ್ ಕೆ ನಗರ ಕ್ಷೇತ್ರಕ್ಕೆ ಉಪ ಚುನಾವಣೆ ನಿರ್ಧಾರವಾಗಿರುವುದು ಗಮನಾರ್ಹವಾಗಿದೆ.
ಈ ಉಪಚುನಾವಣೆಯಲ್ಲಿ ವಿ ಕೆ ಶಶಿಕಲಾ ಬಣದ ನೇತೃತ್ವ ಹೊಂದಿರುವ ಟಿ ಟಿ ವಿ ದಿನಕರನ್ ಅವರು ಸ್ಫರ್ಧಿಸುತ್ತಾರೆಯೇ ಇಲ್ಲವೇ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.