ನವದೆಹಲಿ: ಮೇವು ಹಗರಣಕ್ಕೆ ಸಂಬಂಧಿಸಿದಂತೆ ಸೆರೆಮನೆ ವಾಸದಲ್ಲಿರುವ RJD ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಕಿಡ್ನಿ (ಮೂತ್ರಪಿಂಡ) ಕೇವಲ 25%ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಇದು ಸಂದರ್ಭದಲ್ಲಿಯೂ ಕೂಡಾ ಸಮಸ್ಯೆಗೆ ಎಡೆಮಾಡಿಕೊಡಬಹುದು ಎಂದು ಲಾಲೂ ವೈದ್ಯರಾದ ಡಾ. ಉಮೇಶ್ ಪ್ರಸಾದ್ ತಿಳಿಸಿದ್ದಾರೆ.
ಈ ಕುರಿತಾಗಿ ವೈದ್ಯರು ಮತ್ತು ಆಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸದ್ಯ ಲಾಲೂ ಪ್ರಸಾದ್ ಯಾದವ್ ರನ್ನು ರಾಂಚಿಯ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಹಿರಿಯ ವಿದ್ವಾಂಸ, ಉಡುಪಿ ಬನ್ನಂಜೆ ಗೋವಿಂದಾಚಾರ್ಯ ನಿಧನ
ಲಾಲು ಪ್ರಸಾದ್ ಯಾದವ್ ಅವರು ಕಳೆದ 20 ವರ್ಷಗಳಿಂದ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದು, ಜೊತೆಗೆ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಯನ್ನೂ ಹೊಂದಿದ್ದಾರೆ. ಇದು ಅವರ ಅಂಗಾಗಗಳ ಮೇಲೆ ತೀವ್ರವಾದ ಪರಿಣಾಮ ಬೀರುತ್ತಿದೆ. ಸದ್ಯಕ್ಕೆ ಅವರ ಪರಿಸ್ಥಿತಿ ಹದಗೆಟ್ಟಿದ್ದು, ಯಾವ ಸಂದರ್ಭದಲ್ಲಿ ಬೇಕಾದರೂ ಪರಿಸ್ಥಿತಿ ಚಿಂತಾಜನಕವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
Related Articles
ಅವರ ಅಂಗಾಗಗಳು ಕ್ಷೀಣಿಸುತ್ತಿದ್ದು, ಅದರ ಕಾರ್ಯವೈಖರಿಯನ್ನು ಔಷಧಿಯಿಂದಲೂ ಸರಿಪಡಿಸಲು ಕಷ್ಟವಾಗುತ್ತಿದೆ. ಲಾಲೂ ಅವರನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸುವುದರಿಂದ ಯಾವುದೇ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಈ ಕುರಿತಾಗಿ ಕೋರ್ಟ್ ಮತ್ತು ಸರ್ಕಾರ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಡಾ. ಉಮೇಶ್ ಪ್ರಸಾದ್ ತಿಳಿಸಿದ್ದಾರೆ.