Advertisement

ಮೋಹನ್‌ ಹ್ಯಾಟ್ರಿಕ್‌ಗೆ ರಿಜ್ವಾನ್‌ ಬ್ರೇಕ್‌ ಹಾಕ್ತಾರಾ?

09:48 AM Apr 05, 2019 | Sriram |

ಬೆಂಗಳೂರು:ಮಿನಿ ಇಂಡಿಯಾ ಖ್ಯಾತಿಯ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಹಾಲಿ ಸಂಸದ ಬಿಜೆಪಿಯ ಪಿ.ಸಿ.ಮೋಹನ್‌ ಹಾಗೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ನಡುವೆ ನೇರ ಪೈಪೋಟಿ ನಡೆದಿದೆ.

Advertisement

ನಟ ಪ್ರಕಾಶ ರಾಜ್‌ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದು ಯಾರ ಗೆಲುವಿಗೆ ಅಡ್ಡಿಯಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಅಲ್ಪಸಂಖ್ಯಾತರು, ತಮಿಳರು, ಕ್ರೈಸ್ತರು ಹಾಗೂ ರೆಡ್ಡಿ ಸಮುದಾಯದ ಮೇಲೆ ಪ್ರಮುಖವಾಗಿ ಕಣ್ಣಿಟ್ಟಿರುವ ಕಾಂಗ್ರೆಸ್‌ ಆ ಮತಬ್ಯಾಂಕ್‌ ಜತೆಗೆ ಇತರೆ ವರ್ಗದ ಮತ ಪಡೆಯಲು ನಾನಾ ಕಸರತ್ತು ನಡೆಸುತ್ತಿದ್ದರೆ, ಬಿಜೆಪಿಯು ನರೇಂದ್ರಮೋದಿಯವರ ವರ್ಚಸ್ಸು, ಹಿಂದುತ್ವ ಆಧಾರದಲ್ಲಿ ಮತಬೇಟೆ ನಡೆಸಿದೆ. ಪ್ರಕಾಶ್‌ ರಾಜ್‌ ಅವರು ತಮ್ಮದೇ ಆದ ಶೈಲಿಯಲ್ಲಿ ಪ್ರಚಾರ ಮಾಡಿ ಮತದಾರರ ಸೆಳೆಯಲು ಮುಂದಾಗಿದ್ದಾರೆ.

ಹಿಂದೂ-ಮುಸ್ಲಿಂ ಅಭ್ಯರ್ಥಿ ಆಧಾರದಲ್ಲೇ ಚುನಾವಣೆ ನಡೆಯಲಿದೆ ಎಂಬುದು ಬಿಜೆಪಿಯವರ ವಾದ. ಆದರೆ, ನಮಗೂ ಹಿಂದೂ ಮತಬ್ಯಾಂಕ್‌ ಸಹ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳು ಮತ ಪಡೆದಿರುವುದು ಇದಕ್ಕೆ ಸಾಕ್ಷಿ. ಜತೆಗೆ ಈ ಬಾರಿ ಜೆಡಿಎಸ್‌ ಮತಗಳು ನಮಗೆ ಸಿಗಲಿರುವುದರಿಂದ ಅನುಕೂಲವಾಗಲಿದೆ ಎಂಬುದು ಕಾಂಗ್ರೆಸ್‌ ವಾದ.

ಕ್ಷೇತ್ರ ವ್ಯಾಪ್ತಿ: ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂವರು ಬಿಜೆಪಿ, ಐವರು ಕಾಂಗ್ರೆಸ್‌ ಶಾಸಕರಿದ್ದು , ಪಾಲಿಕೆ ಸದಸ್ಯರ ವಿಚಾರಕ್ಕೆ ಬಂದರೆ ಬಿಜೆಪಿ ಹಾಗೂ ಕಾಂಗ್ರೆಸ್‌ ಹೆಚ್ಚು ಕಡಿಮೆ ಸಮ ಪ್ರಮಾಣದಲ್ಲೇ ಇದೆ.

Advertisement

ಜಮೀರ್‌ -ಜಾರ್ಜ್‌ಗೆ ಪ್ರತಿಷ್ಠೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌, ಸಚಿವರಾದ ಜಮೀರ್‌ ಅಹಮದ್‌ ಹಾಗೂ ಕೆ.ಜೆ.ಜಾರ್ಜ್‌ ಅವರು ಹೈಕಮಾಂಡ್‌ ಮೇಲೆ ಒತ್ತಡ ಹೇರಿ ರಿಜ್ವಾನ್‌ ಅರ್ಷದ್‌ಗೆ ಟಿಕೆಟ್‌ ಕೊಡಿಸಿದ್ದಾರೆ. ಜಮೀರ್‌ ಅಹಮದ್‌ ಹಾಗೂ ಜಾರ್ಜ್‌ ಅವರಿಗೆ ರಿಜ್ವಾನ್‌ ಗೆಲುವು ಪ್ರತಿಷ್ಠೆಯೂ ಆಗಿದೆ. ಅಲ್ಪಸಂಖ್ಯಾತರ ಮತಗಳ ಜತೆಗೆ ಹಿಂದೂ ಮತಬ್ಯಾಂಕ್‌ ಸೆಳೆಯಲು ನಾನಾ ಕಸರತ್ತು ನಡೆಸುತ್ತಿದ್ದಾರೆ.

ಬಿಜೆಪಿಗೆ ಮೋದಿ ಜಪ: ಇನ್ನು, ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಪರವಾಗಿ ಶಾಸಕರಾದ ಅರವಿಂದ ಲಿಂಬಾವಳಿ, ಎಸ್‌.ರಘು, ಸುರೇಶ್‌ಕುಮಾರ್‌, ಪಾಲಿಕೆ ಪ್ರತಿಪಕ್ಷ ನಾಯಕ ಪದ್ಮನಾಭನರೆಡ್ಡಿ ಸೇರಿ ಹಲವು ನಾಯಕರು ಕೆಲಸ ಮಾಡುತ್ತಿದ್ದಾರೆ.

2014 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 5,57. 130 ಮತ ಪಡೆದಿದ್ದು ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌ 4,19.630 ಮತ ಪಡೆದಿದ್ದರು. 1.37 ಲಕ್ಷ ಮತಗಳ ಅಂತರದಿಂದ ಬಿಜೆಪಿಯ ಪಿ.ಸಿ.ಮೋಹನ್‌ ಗೆಲುವು ಸಾಧಿಸಿದ್ದರು.

2018 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ 8 ಅಭ್ಯರ್ಥಿಗಳು 5,57,271 ಮತ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು 1,13,588 ಮತ ಪಡೆದಿದ್ದು ಇದರ ಆಧಾರದ ಮೇಲೆ ಗೆಲುವಿನ ಲೆಕ್ಕಾಚಾರವನ್ನು ಕಾಂಗ್ರೆಸ್‌ ಹಾಕುತ್ತಿದೆ. ಆದರೆ, ವಿಧಾನಸಭೆ ಚುನಾವಣೆಯೇ ಬೇರೆ, ಲೋಕಸಭೆ ಚುನಾವಣೆಯೇ ಬೇರೆ. ನರೇಂದ್ರಮೋದಿ ಸಾಧನೆ ನೋಡಿ ಲೋಕಸಭೆಗೆ ಮತ ಹಾಕುತ್ತಾರೆ ಎಂದು ಬಿಜೆಪಿ ಹೇಳುತ್ತಿದೆ ಹೀಗಾಗಿ, ಯಾರ ಲೆಕ್ಕಾಚಾರ ಸರಿ ಎಂಬುದು ಫ‌ಲಿತಾಂಶ ಹೊರಬಿದ್ದಾಗಲೇ ಗೊತ್ತಾಗಲಿದೆ.

3ನೇ ಬಾರಿಗೆ ಚುನಾವಣೆ
ಕ್ಷೇತ್ರ ಪುನರ್‌ ವಿಂಗಡಣೆ ನಂತರ ಬೆಂಗಳೂರು ಕೇಂದ್ರ ಕ್ಷೇತ್ರವಾಗಿ ಉದಯವಾಗಿದ್ದು, 2009ಹಾಗೂ 2014ರಲ್ಲಿ ಚುನಾವಣೆ ನಡೆದಿದೆ.ಎರಡೂ ಬಾರಿ ಬಿಜೆಪಿಯ ಪಿ.ಸಿ.ಮೋಹನ್‌ ಗೆಲುವು ಸಾಧಿಸಿದ್ದಾರೆ. 2009ರಲ್ಲಿ 35 ಸಾವಿರ, 2014ರಲ್ಲಿ 1.37 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2009ರಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಜಮೀರ್‌ ಅಹಮದ್‌, 1.62 ಲಕ್ಷ ಮತ ಪಡೆದಿದ್ದರು.ಆದರೆ, 2014ರಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ನಂದಿನಿ ಆಳ್ವಾ ಕೇವಲ 20,387 ಮತ ಪಡೆದಿದ್ದರು.

ನಿರ್ಣಾಯಕ ಅಂಶ
ಮುಸ್ಲಿಂ, ಕ್ರಿಶ್ಚಿಯನ್‌, ತಮಿಳು, ರೆಡ್ಡಿ,ಒಕ್ಕಲಿಗ ಮತಗಳು ನಿರ್ಣಾಯಕ ಮತಗಳು.ಉಳಿ ದಂತೆ ಎಲ್ಲ ವರ್ಗದ ಮತದಾರರು ಇಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ, ರೋಷನ್‌ ಬೇಗ್‌ ಮೊದಲಿಗೆ ಮುನಿಸಿಕೊಂಡಿದ್ದರಾದರೂ, ನಂತರ ಅವರ ಮನವೊಲಿಸಿ ಪ್ರಚಾರಕ್ಕೆ ಕರೆ ತರಲಾಗುತ್ತಿದೆ. ಆದರೆ,ಕ್ರಿಶ್ಚಿಯನ್‌ ಸಮುದಾಯದ ಮುಖಂಡ, ಮಾಜಿ ಸಂಸದ, ಎಚ್‌.ಟಿ.ಸಾಂಗ್ಲಿ ಯಾನ ಮುನಿಸು ಇನ್ನೂ ದೂರವಾಗಿಲ್ಲ. ಮತ್ತೂಬ್ಬ ಮಾಜಿ ಸಚಿವ, ಅಲೆಕ್ಸಾಂಡರ್‌ ಅವರು ಟಿಕೆಟ್‌ ಸಿಗದ ಕಾರಣ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದಾರೆ. ಇದು ಫ‌ಲಿತಾಂಶದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದನ್ನು ನೋಡಬೇಕಿದೆ.

– ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next