ರಿಯಾಧ್ : ಸೌದಿ ಅರೇಬಿಯದ ರಾಜಧಾನಿಯಾಗಿರುವ ರಿಯಾಧ್ ನ ಕಿಂಗ್ ಖಲೀದ್ ಇಂಟರ್‌ನ್ಯಾಶಲನಲ್ ಏರ್ ಪೋರ್ಟ್ ನಿಂದ ಮುಂಬಯಿಗೆ ಹಾರಲಿದ್ದ 9ಡಬ್ಲ್ಯು 523 ಸಂಖ್ಯೆಯ ಜೆಟ್ ಏರ್ ವೇಸ್ ವಿಮಾನ ರನ್ ವೇ ಯಿಂದ ಆಚೆ ಸರಿದ ಕಾರಣ ಟೇಕ್ ಆಫ್ ಪ್ರಕ್ರಿಯೆಯನ್ನು ಒಡನೆಯೇ ನಿಲ್ಲಿಸಲಾದ ಘಟನೆ ವರದಿಯಾಗಿದೆ.
ವಿಮಾನದಲ್ಲಿ ಒಟ್ಟು 149 ಮಂದಿ ಇದ್ದರು. ಇವರಲ್ಲಿ 142 ಮಂದಿ ಪ್ರಯಾಣಿಕರು ಮತ್ತು 7 ಮಂದಿ ಚಾಲಕ ಸಿಬಂದಿಗಳು. ಬಿ737-800 ವಿಮಾನದಲ್ಲಿದ್ದ ಎಲ್ಲರನ್ನೂ ಆ ಬಳಿಕ ಸ್ಥಳಾಂತರಿಸಲಾಯಿತು. ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಮೂಲಗಳು ಹೇಳಿವೆ.
‘ಘಟನೆಯ ಬಗ್ಗೆ ಸ್ಥಳೀಯ ನಿಯಂತ್ರಣ ಪ್ರಾಧಿಕಾರದಿಂದ ತನಿಖೆ ನಡೆಸಲಾಗುತ್ತಿದೆ. ನಮ್ಮ ತಂಡದವರು ಪ್ರಾಧಿಕಾರಕ್ಕೆ ಸಕಲ ರೀತಿಯಲ್ಲಿ ತನಿಖೆಗೆ ನೆರವಾಗುತ್ತಿದ್ದಾರೆ; ನಮಗೆ ನಮ್ಮ ಪ್ರಯಾಣಿಕರ ಸುರಕ್ಷೆ ಅತೀ ಮುಖ್ಯ’ ಎಂದು ಜೆಟ್ ಏರ್ ವೇಸ್ ಹೇಳಿದೆ.
‘ರನ್ ವೇ ಬಿಟ್ಟು ಆ ಕಡೆಗೆ ಸರಿದ ವಿಮಾನದಿಂದ ತೆರವು ಗೊಂಡ ಎಲ್ಲ ಪ್ರಯಾಣಿಕರಿಗೆ ಅನಂತರ ಟರ್ಮಿನಲ್ ಕಟ್ಟಡದಲ್ಲಿ ವಿಶ್ರಾಂತಿಗೆ ಅವಕಾಶ ಕಲ್ಪಿಸಲಾಯಿತಲ್ಲದೆ ಅವರಿಗೆ ಅಗತ್ಯವಿರವ ಊಟ, ಉಪಾಹಾರ ಪೂರೈಸಲಾಯಿತು’ ಎಂದು ಜೆಟ್ ಏರ್ ವೇಸ್ ಹೇಳಿದೆ.
‘ಪ್ರಯಾಣಿಕರಿಗೆ ಬದಲಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಹಾಗಿದ್ದರೂ ಜೆಟ್ ಏರ್ ವೇಸ್ ನ ಜಾಲದ ವಿಮಾಗಳ ಹಾರಾಟ, ರಿಯಾಧ್‌ಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ಸೇವೆ ಸೇರಿದಂತೆ, ಯಾವುದೇ ರೀತಿಯಲ್ಲಿ ಬಾಧಿತವಾಗಿಲ್ಲ’ ಎಂದು ಅದು ತಿಳಿಸಿದೆ.