Advertisement

ಜೀವನದಿಗಳು ಮಲಿನವಾಗುತ್ತಿದೆ: ದಿನೇಶ್‌ಹೊಳ್ಳ

11:07 AM Mar 24, 2018 | Team Udayavani |

ಮಹಾನಗರ: ದ.ಕ. ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಮತ್ತು ಪಲ್ಗುಣಿ ನದಿಗಳು ಮಲಿನವಾಗುತ್ತಿದ್ದು, ತ್ಯಾಜ್ಯಮಯವಾಗಿದೆ ಎಂದು ಪರಿಸರವಾದಿ ದಿನೇಶ್‌ಹೊಳ್ಳ ಹೇಳಿದರು. ವಿಶ್ವಜಲ ದಿನದ ಪ್ರಯುಕ್ತ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಮತ್ತು ಸಹ್ಯಾದ್ರಿ ಸಂಚಯ ನದಿ ಜಾಗೃತಿಗಾಗಿ ಶುಕ್ರವಾರ ನಗರದ ಸುಲ್ತಾನ್‌ ಬತ್ತೇರಿಯಲ್ಲಿ ಆಯೋಜಿಸಿದ್ದ ಜಲ ಪಯಣ ಜಲಜಾಗೃತಿಯ ಸಿ.ಡಿ. ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ನದಿಯಲ್ಲಿನ ಮಲಿನದಿಂದಾಗಿ ನಾವು ದಿನನಿತ್ಯ ವಿಷಯುಕ್ತ ಮೀನನ್ನು ತಿನ್ನುತ್ತಿದ್ದೇವೆ. ಮನೆಯಲ್ಲಿ ಹೆತ್ತವರು ಮಕ್ಕಳ ವಿದ್ಯಾಭ್ಯಾಸ, ಉದ್ಯೋಗದ ಬಗ್ಗೆ ಯೋಚಿಸುತ್ತಿದ್ದಾರೆಯೇ ವಿನಾ ಭವಿಷ್ಯದಲ್ಲಿ ಶುದ್ಧ ನೀರು ಉಳಿಸುವತ್ತ ಯಾರು ಕೂಡ ಗಮನಹರಿಸುತ್ತಿಲ್ಲ ಎಂದು ಹೇಳಿದರು.

ಅಂತರ್ಜಲ ಕುಸಿತ
ಕಾರ್ಯಕ್ರಮದಲ್ಲಿ ಪರಿಸರ ಹೋರಾಟಗಾರ ಗಿರಿ ಮಾತನಾಡಿ, ಹತ್ತು ವರ್ಷಗಳಿಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಒಂದು ಅಡಿಯಷ್ಟು ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದಿನ 40 ವರ್ಷಗಳಲ್ಲಿ ಮಂಗಳೂರಿಗೆ ಕಂಠಕ ಎಂದು ಹೇಳಿದರು.

ಜೀವಜಲದ ಕಾಳಜಿ ಇಲ್ಲ
ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಅನಿತಾ ಮಾತನಾಡಿ, ರಾಜಕಾರಣಿಗಳು ಓಟಿಗೋಸ್ಕರ ಮನೆ ಮನೆಗೆ ಪ್ರಚಾರಕ್ಕೆ ಬರುತ್ತಾರೆ. ಆದರೆ ಜೀವಜಲದ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲ. ಭವಿಷ್ಯದಲ್ಲಿ ಮಕ್ಕಳು ಚೆನ್ನಾಗಿ ಇರಬೇಕು ಎಂದಾದರೆ ಪ್ರತಿಯೊಬ್ಬರ ಮನೆಯಿಂದ ಹೋರಾಟಕ್ಕೆ ಕೈಜೋಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ‘ಕಡಲ ಕೂಗು’ ಎಂಬ ಸಿ.ಡಿ. ಬಿಡುಗಡೆ ಮಾಡಲಾಯಿತು. ಇದೇ ವೇಳೆ ಸ್ವರೂಪ ಅಧ್ಯಯನ ಕೇಂದ್ರದ ಮಕ್ಕಳು ಸೇರಿದಂತೆ ಪರಿಸರ ಪ್ರೇಮಿಗಳು ಉಪಸ್ಥಿತರಿದ್ದರು.

Advertisement

ನೀರಿನ ಗುಣಮಟ್ಟ ನಾಶ
ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟ ಕಾರ್ಯದರ್ಶಿ ಶಶಿಧರ ಶೆಟ್ಟಿ ಮಾತನಾಡಿ, ನೀರಿನ ಗುಣಮಟ್ಟವು ಶೇ.60ರಷ್ಟು ಹಾಳಾಗಿದೆ. ಮೀನುಗಳು ಸಾಯುತ್ತಿದ್ದು, ಮೀನುಗಾರರ ಪರಿಸ್ಥಿತಿ ಹೇಳತೀರದು. ಇದರಿಂದಾಗಿ ಅವರು ತಮ್ಮ ವೃತ್ತಿಯನ್ನು ಬಿಟ್ಟು ಬೇರೆ ಕೆಲಸಕ್ಕೆ ತೆರಳುತ್ತಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next