Advertisement

ಕುಡಿಯುವ ನೀರಿಗೆ ನದಿ ಸಮೀಕ್ಷೆ: ಬೈಂದೂರು ಶಾಸಕ

12:19 AM Jul 03, 2019 | sudhir |

ಕುಂದಾಪುರ: ಬೇಸಗೆಯಲ್ಲಿ ಪ್ರತೀ ಬಾರಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು ಟ್ಯಾಂಕರ್‌ ನೀರು ಪೂರೈಸುವ ಬದಲು ನದಿ ನೀರು ಶಾಶ್ವತ ಪೂರೈಕೆಗೆ ಯೋಜನೆಯಾಗಬೇಕಿದೆ. ಕುಂದಾಪುರ ತಾಲೂಕಿನ ನೀರನ್ನು ಉಡುಪಿಗೆ ಕೊಂಡೊಯ್ಯುತ್ತೇವೆ. ಆದರೆ ತಾಲೂಕಿನಲ್ಲಿ ಐದು ನದಿಗಳಿದ್ದರೂ ಇಲ್ಲಿನ ಜನತೆಗೆ ಕುಡಿಯಲು ನೀರಿಲ್ಲ . ಆದ್ದರಿಂದ ತಾಲೂಕಿನಲ್ಲಿರುವ ನದಿಗಳನ್ನು ಸರ್ವೆ ಮಾಡಿ ಎಲ್ಲಿ ಯಾವ ರೀತಿ ನೀರು ಸಂಗ್ರಹಿಸಿ ಕುಡಿಯುವ ನೀರಿಗೆ ಸಮಗ್ರ ಯೋಜನೆ ರೂಪಿಸಬಹುದು ಎಂದು ನೀಲನಕ್ಷೆ ತಯಾರಿಸಿ. ಮುಂದಿನ ವರ್ಷದಿಂದ ಟ್ಯಾಂಕರ್‌ ನೀರು ಬದಲಿಗೆ ಶಾಶ್ವತ ನೀರು ಹರಿಸುವಂತಾಗಬೇಕು. ಇದು ಬೈಂದೂರು ವಿಧಾನಸಭಾ ಕ್ಷೇತ್ರದ ಜನರಿಗಷ್ಟೇ ಅಲ್ಲ ಕುಂದಾಪುರ ವಿಧಾನಸಭಾ ಕ್ಷೇತ್ರದ ಜನರಿಗೆ ತಲುಪುವಂತೆಯೂ ಇರಲಿ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದ್ದಾರೆ.

Advertisement

ಅವರು ಮಂಗಳವಾರ ಇಲ್ಲಿನ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆದ ತ್ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಲಧಾರೆಯಿಲ್ಲ

ಜಲಧಾರೆ ಯೋಜನೆ ರಾಜ್ಯದ ಮೂರು ಜಿಲ್ಲೆಗಷ್ಟೇ ಸೀಮಿತಗೊಳಿಸಲಾಗಿದ್ದು ಬಹು ಗ್ರಾಮ ಕುಡಿಯುವ ನೀರಿನ ಮಾದರಿಯ ಯೋಜನೆ ಯೊಂದು ಬೇಕಿದೆ ಎಂದು ಶಾಸಕರು, ಹಿಂದಿನ ಕಾಲದಲ್ಲಿ ಮಣ್ಣಿನ ಕಟ್ಟಗಳನ್ನು ರಚಿಸಿ ಅಲ್ಲಲ್ಲಿ ಅಂತರ್ಜಲ ಇಂಗುವಂತೆ ಮಾಡಲಾಗುತ್ತಿತ್ತು. ಈಗ ಕೃಷಿ ಚಟುವಟಿಕೆ ಕಡಿಮೆಯಾದ ಕಾಣ ಕಟ್ಟಗಳು ಕಡಿಮೆಯಾಗಿವೆ. ಆದ್ದರಿಂದ ಕಟ್ಟಗಳನ್ನು ರಚಿಸು ವವರಿಗೆ ಸಣ್ಣ ನೀರಾವರಿ ಇಲಾಖೆಯಿಂದ 20 ಸಾವಿರ ರೂ., ಪಂಚಾಯತ್‌ನಿಂದ 10 ಸಾವಿರ ರೂ. ಪ್ರೋತ್ಸಾಹಧನ ದೊರೆವಂತಾಗಬೇಕು. ಈ ಕುರಿತು ಸಚಿವರ ಜತೆ ಮಾತನಾಡುವುದಾಗಿ ಹೇಳಿದರು.

ವರ್ಗ ಬೇಡ

Advertisement

ಶಿಕ್ಷಕರ ವರ್ಗಾವಣೆ ಸಹಿಸುವುದಿಲ್ಲ ಎಂದ ಶಾಸಕರು, ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ಇತರ ಜಿಲ್ಲೆಗಳಂತೆ ವರ್ಗಾವಣೆ ನಿಯಮ ಅನ್ವಯಸ ಬಾರದು. ಈ ಕುರಿತು ಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿ ಜತೆ ಮಾತನಾಡುತ್ತೇನೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಸಂಖ್ಯೆ ಹೆಚ್ಚಿದೆ ಎಂದು ವರ್ಗಾಯಿಸಿದರೆ ಅದು ಶಿಕ್ಷಣ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಇಂತಹ ತೊಂದರೆ ಮಾಡಿದರೆ ಕ್ಷೇತ್ರದ ಎಲ್ಲ ಶಾಲೆಗಳನ್ನೂ ಮುಚ್ಚಿಸಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿ.ಪಂ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಉಪ್ಪುಂದ ಶಾಲೆ ಸಮಸ್ಯೆ ಬಗ್ಗೆ, ಜಿ.ಪಂ. ಸದಸ್ಯೆ ಶೋಭಾ ಪುತ್ರನ್‌ ಹೆಮ್ಮಾಡಿ ಸಂತೋಷ ನಗರ ಶಾಲೆ ಬಗ್ಗೆ, ಪ್ರಸನ್ನ ಕುಮಾರ್‌ ಶೆಟ್ಟಿ ಕೆರಾಡಿ ಶಾಲೆ ಬಗ್ಗೆ ಮಾತನಾಡಿದರು.

ಜಿ.ಪಂ. ಸದಸ್ಯೆ ಶ್ರೀಲತಾ ಸುರೇಶ್‌ ಶೆಟ್ಟಿ, ಬೀಜಾಡಿ, ಹೊದ್ರೋಳಿ, ದೊಡ್ಡೋಣಿ ಅಂಗನವಾಡಿ ಸಮಸ್ಯೆಗಳ ಕುರಿತು ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರಂಜನ್‌ ಭಟ್ ಉತ್ತರಿಸಿದರು.

ವೈದ್ಯರಿಲ್ಲ

ಶಂಕರನಾರಾಯಣ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯರಿರುವುದಿಲ್ಲ ಎಂದು ಜಿ.ಪಂ. ಸದಸ್ಯ ರೋಹಿತ್‌ ಕುಮಾರ್‌ ಶೆಟ್ಟಿ ಹೇಳಿದರು. ದಾದಿಯರ ಕೊರತೆಯಿದೆ ಎಂದು ಶ್ರೀಲತಾ, ಅಂಪಾರು ಉಪಕೇಂದ್ರದಲ್ಲಿ ಎಎನ್‌ಎಂ ಇಲ್ಲ ಎಂದು ಜ್ಯೋತಿ ಎಂ., ತೊಂಬಟ್ಟಿನಲ್ಲಿ ವೈದ್ಯರ ಕೊರತೆಯಿದೆ ಎಂದು ಸುಪ್ರೀತಾ ಉದಯ ಕುಲಾಲ್, ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆಯಿದೆ ಎಂದು ಶೋಭಾ ಪುತ್ರನ್‌ ಹೇಳಿದರು. ಕೊಲ್ಲೂರು, ಹಳ್ಳಿಹೊಳೆಯಲ್ಲಿ ವೈದ್ಯರಿಲ್ಲ. ಬೇರೆ ನಿಯೋಜಿಸಲಾಗಿದೆ. ಪಿಎಚ್ಸಿಯಲ್ಲಿ 24×7 ವೈದ್ಯರನ್ನು ನಿಯೋಜಿಸಲು ಅವಕಾಶ ಇಲ್ಲ. ಪ್ರಯೋಗಾಲಯ ಸಿಬಂದಿ ಕೊರತೆಯಿದೆ. ಔಷಧ ಕೊರತೆಯಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್‌ ಉಡುಪ ಹೇಳಿದರು. ಗ್ರಾಮಾಂತರದ ರೋಗಿಗಳ ನಿರ್ಲಕ್ಷ್ಯ ಸಲ್ಲದು ಎಂದು ಶಾಸಕ ಸುಕುಮಾರ ಶೆಟ್ಟಿ ಹೇಳಿದರು.

ಆಯುಷ್ಮಾನ್‌ಭವದಲ್ಲಿ ಸರಕಾರಿ ಆಸ್ಪತ್ರೆಗೆ ದಾಖಲಾಗದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವಂತಾಗಬೇಕು, 108 ಆ್ಯಂಬುಲೆನ್ಸ್‌ನಲ್ಲಿ ಸರಕಾರಿ ಆಸ್ಪತ್ರೆಗೆ ಕಡ್ಡಾಯ ಮಾಡುವ ಬದಲು ಖಾಸಗಿಗೂ ದಾಖಲಿಸಲು ಅವಕಾಶ ಕೊಡಬೇಕೆಂದು ನಿರ್ಣಯಿಸಲಾಯಿತು. ಆಯುಷ್ಮಾನ್‌ ಭವ ಕಾರ್ಡ್‌ ಬೈಂದೂರು ಹಾಗೂ ಕುಂದಾಪುರ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ. ಜನಸೇವಾ ಕೇಂದ್ರದ ಮೂಲಕ ನೀಡಲು ಕುಂದಾಪುರ ವೈದ್ಯಾಧಿಕಾರಿ ಡಾ| ರಾಬರ್ಟ್‌ ಮನವಿ ಮಾಡಿದರು. ಸೇವಾಸಿಂಧು ಸೇವಾ ಕೇಂದ್ರ ಹಳ್ಳಿಗಳಲ್ಲಿ ತೆರೆಯಲು ಕ್ರಮ ವಹಿಸಲಾಗುತ್ತಿದೆ ಎಂದು ನೋಡೆಲ್ ಅಧಿಕಾರಿ ಸಚ್ಚಿದಾನಂದ ಹೇಳಿದರು.

ಮಂಗನ ಕಾಯಿಲೆಗೆ ಇತರ ಜಿಲ್ಲೆಯವರಿಗೆ ಉಚಿತ ಚಿಕಿತ್ಸೆ ದೊರೆತರೂ ಉಡುಪಿಯವರಿಗೆ ದೊರೆತಿಲ್ಲ ಎಂದು ಬಾಬು ಶೆಟ್ಟಿ ಹೇಳಿದರು.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಕುಂದರ್‌, ಉಪಾಧ್ಯಕ್ಷ ರಾಮ್‌ಕಿಶನ್‌ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣ ಗುಜ್ಜಾಡಿ, ಜಿ.ಪಂ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಕಿರಣ್‌ ಪೆಡ್ನೇಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next