Advertisement

ಕೃಷ್ಣೆಗಾಗಿ ನಿಲ್ಲದ ನಿರಂತರ ಕೂಗು!

03:36 PM Apr 19, 2022 | Team Udayavani |

ಬಾಗಲಕೋಟೆ: ಕಾವೇರಿಗೆ ಕರುನಾಡಿನ ಜೀವ ನದಿ ಎಂಬ ಬಿರುದು ಸಾಂಸ್ಕೃತಿಕ ವಲಯದಲ್ಲೂ ಹೆಸರು ಪಡೆದಿದೆ. ಕಾವೇರಿಗಿಂತ ಮೂರು ಪಟ್ಟು ಅತಿಹೆಚ್ಚು ಭೌಗೋಳಿಕ ವಿಸ್ತಾರ ಹೊಂದಿರುವ ಕೃಷ್ಣೆಯೂ ಈ ನಾಡಿನ ಜೀವಜಲವಾಗಿದೆ. ಆದರೆ, ಸಾಂಸ್ಕೃತಿಕ, ರಾಜಕೀಯ ಹಾಗೂ ಈ ಜೀವ ನದಿಯ ನೀರಿನ ಸದ್ಭಳಕೆ ವಿಷಯದಲ್ಲಿ ನಿರಂತರ ಕೂಗು ಹಾಕುವುದು ನಿಂತಿಲ್ಲ.

Advertisement

ಹೌದು, ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಹುಟ್ಟಿ, ಕರ್ನಾಟಕದ ಉತ್ತರ ಹಾಗೂ ಹೈದ್ರಾಬಾದ್‌ ಕರ್ನಾಟಕ ಭಾಗದಲ್ಲಿ ವಿಸ್ತಾರವಾಗಿ ಹರಿದು, ಆಂದ್ರದ ಮೂಲಕ ಸಮುದ್ರ ಸೇರುತ್ತದೆ. ಮೂರು ರಾಜ್ಯಗಳಲ್ಲಿ ಈ ಜೀವಜಲ ಹರಿದಿರುವುದು ಕರ್ನಾಟಕದಲ್ಲೇ ಅತಿಹೆಚ್ಚು. ಆದರೆ, ಕೃಷ್ಣೆಯ ನೀರಿನ ಸದ್ಬಳಕೆ ವಿಷಯದಲ್ಲಿ ಮಹಾರಾಷ್ಟ್ರ ಮತ್ತು ಆಂಧ್ರವೇ ಮೊದಲ ಸ್ಥಾನದಲ್ಲಿವೆ. ಕರ್ನಾಟಕದಲ್ಲಿ ಮಾತ್ರ, ಕೃಷ್ಣೆಯ ಹೊಸರಿನಲ್ಲಿ ದೊಡ್ಡ ರಾಜಕೀಯ ನಡೆದು, ಅಧಿಕಾರಕ್ಕೆ ಬರಲು ಮೆಟ್ಟಿಲಾಗಿದೆ ಹೊರತು, ಇದರ ಸದ್ಬಳಕೆ ಮಾತ್ರ ಆಗಲಿಲ್ಲ ಎಂಬ ಕೊರಗು ತೀವ್ರ ಭಾಗದಲ್ಲಿ ತೀವ್ರವಾಗಿದೆ.

ಈ ಭಾಗದ ಸಂತ್ರಸ್ತರಿಗೆ, ಜನರಿಗೆ ಕೃಷ್ಣಾ ಮೇಲ್ದಂಡೆ ಯೋಜನೆ, ನಮ್ಮ ಜೀವಿತಾವಧಿಯಲ್ಲೇ ಮುಗಿಯುತ್ತದೆಯೋ ಇಲ್ಲವೇ ಎಂಬ ಜಿಜ್ಞಾಸೆಗೆ ಬಂದಿದ್ದಾರೆ. ರಾಜಕಾರಣಿಗಳು ಮಾತ್ರ, ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಲೇ ಇದ್ದಾರೆ ಹೊರತು, ರೈತರ ಹೊಲಕ್ಕೆ ನೀರು ಕೊಡುವ ನಿಟ್ಟಿನಲ್ಲಿ ದಿಟ್ಟತನದ ಹಾಗೂ ಇಚ್ಛಾಸಕ್ತಿಯ ಕ್ರಮಕ್ಕೆ ಮುಂದಾಗಿಲ್ಲ.

ಅನುಮತಿ ಕೊಟ್ಟು 12 ವರ್ಷ: ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಡಿ ಆಲಮಟ್ಟಿ ಜಲಾಶಯವನ್ನು ಈಗಿರುವ 519.60 ಮೀಟರ್‌ ನಿಂದ 524.256 ಮೀಟರ್‌ಗೆ ಎತ್ತರಿಸುವುದರಿಂದ ನಮ್ಮ ಪಾಲಿಗೆ ಇನ್ನೂ 130 ಟಿಎಂಸಿ ಅಡಿ ನೀರು ಬಳಕೆಗೆ ಅವಕಾಶವಿದೆ. ಈ ಕುರಿತು ವ್ಯಾಜ್ಯ, ಕೃಷ್ಣಾ ನ್ಯಾಯಾಧೀಕರಣದ ಎದುರು ಸುಧೀಘ್ರವಾಗಿ ವಿಚಾರಣೆ ನಡೆದು, ಆಲಮಟ್ಟಿ ಜಲಾಶಯ ಎತ್ತರಿಸಲು ಹಾಗೂ ಅದರಿಂದ ಸಂಗ್ರಹವಾಗುವ 130 ಟಿಎಂಸಿ ನೀರನ್ನು ಬಳಸಿಕೊಳ್ಳಲು ಕರ್ನಾಟಕ ರಾಜ್ಯಕ್ಕೆ ಅನುಮತಿ ಕೊಡಲಾಗಿದೆ. ಈ ತೀರ್ಪು ಬಂದ ತಕ್ಷಣವೇ ಕೇಂದ್ರ ಸರ್ಕಾರ ಇದಕ್ಕೊಂದು ಅಧಿಕೃತವಾಗಿ ಅಧಿಸೂಚನೆ ಹೊರಡಿಸಬೇಕಿತ್ತು. ಈ ವಿಷಯದಲ್ಲಿ ಕೊಂಚ ನಿರ್ಲಕ್ಷ್ಯವಾದರೂ, ನೀರು ಬಳಕೆಗೆ ಯಾವುದೇ ಸಮಸ್ಯೆ ಇಲ್ಲ. ಆದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಗ್ಗಟ್ಟಿನ ಇಚ್ಛಾಸಕ್ತಿ ಪ್ರದರ್ಶನವಾಗುತ್ತಿಲ್ಲ. ಹೀಗಾಗಿ ಕಳೆದ 2010ರಲ್ಲೇ ಈ ತೀರ್ಪು ಬಂದರೂ ಇಂದಿಗೂ 130 ಟಿಎಂಸಿ ನೀರು ಬಳಸಲು ನಮ್ಮ ರಾಜ್ಯದಿಂದ ಸಾಧ್ಯವಾಗಿಲ್ಲ.

ಈ ನೀರು ಬಳಸಬೇಕಾದರೆ, ಆಲಮಟ್ಟಿ ಜಲಾಯಶವನ್ನು 524.256 ಮೀಟರ್‌ಗೆ ಎತ್ತರಿಸಬೇಕು. ಆಗ ವಿಜಯಪುರ-ಬಾಗಲಕೋಟೆ ಎರಡೂ ಜಿಲ್ಲೆಯ ಇನ್ನೂ 20 ಗ್ರಾಮಗಳು ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗುತ್ತವೆ. ಆ ಗ್ರಾಮಗಳ ಸ್ಥಳಾಂತರವಾಗಬೇಕು. ಅಲ್ಲಿನ ಜನರಿಗೆ ಮನೆ ಹಾಗೂ ಭೂಮಿಗೆ ಪರಿಹಾರ ಕೊಡಬೇಕು. ಸ್ಥಳಾಂತರಗೊಳ್ಳುವ ಗ್ರಾಮಗಳ ಸಂತ್ರಸ್ತರಿಗೆ ಪುನರ್‌ವಸತಿ ಕೇಂದ್ರಗಳ ನಿರ್ಮಾಣ ಆಗಬೇಕು. ಇದು ಮುಖ್ಯವಾಗಿ ಪೂರ್ಣಗೊಂಡಾಗ ಮಾತ್ರ ಜಲಾಶಯದ ಗೇಟ್‌ ಎತ್ತರಿಸಿ, ನೀರು ನಿಲ್ಲಿಸಲು ಅವಕಾಶವಿದೆ.

Advertisement

ಆದರೆ, 2010ರಿಂದಲೂ ಅಧಿಕಾರದಲ್ಲಿರುವ ಸರ್ಕಾರಗಳು, ಮುಖ್ಯವಾಗಿ ಮಾಡಬೇಕಾದ ಕೆಲಸಕ್ಕೆ ಮುಂದಾಗುವ ಬದಲು, ಈ 130 ಟಿಎಂಸಿ ನೀರು ಬಳಸಿಕೊಳ್ಳಲು ಬೇಕಾದ ಕಾಲುವೆ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಿವೆ. ಸಂತ್ರಸ್ತರಿಗೆ ಮನೆ-ಭೂಮಿಯ ಪರಿಹಾರ ನೀಡಿದರೆ ಅದು ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತದೆ. ಅದೇ ಕಾಲುವೆ ನಿರ್ಮಾಣ ಕಾಮಗಾರಿ ಕೈಗೊಂಡರೆ, ರಾಜಕಾರಣಿಗಳ ಮತ್ತು ಗುತ್ತಿಗೆದಾರರ ಹೊಂದಾಣಿಕೆ ಬಲು ಸುಲಭ. ಅದರಿಂದ ಉಳಿತಾಯವೂ ಹೆಚ್ಚು ಎಂಬ ಆರೋಪವಿದೆ. ಹೀಗಾಗಿಯೇ ಮೂಲ ಕಾರ್ಯಕ್ಕಿಂತ ಕಾಮಗಾರಿ ಕೆಲಸಕ್ಕೆ ಬಹುತೇಕ ಸರ್ಕಾರ ಆದ್ಯತೆ ಕೊಟ್ಟಿವೆ ಎನ್ನಲಾಗಿದೆ.

ರಾಜಕೀಯಕ್ಕೆ ಮೆಟ್ಟಿಲಾದ ಕೃಷ್ಣೆ: ಕೃಷ್ಣೆಯ ಒಡಲಿಗೆ ಜಲಾಶಯ ನಿರ್ಮಿಸಲು 1963ರಲ್ಲೇ ಆರಂಭಿಸಲಾಗಿದೆ. ಆದರೆ, ನೀರು ನಿಲ್ಲಿಸಲು ಆರಂಭಿಸಿದ್ದು, 2000 ಇಸ್ವಿಯ ಬಳಿಕ. ಅಂದರೆ ಬರೋಬ್ಬರಿ 45 ವರ್ಷಗಳ ಬಳಿಕ ನೀರು ನಿಲ್ಲಿಸಲು ಆರಂಭಿಸಿ, ಕ್ರಮೇಣ 1ನೇ ಹಂತದ ಕಾಮಗಾರಿಯಡಿ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಕೃಷ್ಣೆ, ಸಂತ್ರಸ್ತರ ಹೆಸರಿನಲ್ಲಿ ಹೋರಾಟ, ಪ್ರತಿಭಟನೆ, ಪಾದಯಾತ್ರೆ, ಯಾತ್ರೆ, ಪತ್ರಿಕಾ ಹೇಳಿಕೆ ನೀಡಿದ ವ್ಯಕ್ತಿಗಳು, ಇದನ್ನು ರಾಜಕೀಯವಾಗಿ ಬಳಕೆ ಮಾಡಿಕೊಂಡರೆ ಹೊರತು, ಅಧಿಕಾರಕ್ಕೆ ಬಂದ ಬಳಿಕ, ತಾವೇ ಮಾತನಾಡಿದಂತೆ ಯಾರೂ ನಡೆದುಕೊಂಡಿಲ್ಲ ಎಂಬ ಆಕ್ರೋಶ ಈ ಭಾಗದ ಜನರಲ್ಲಿದೆ.

ಇದೀಗ, ಚುನಾವಣೆಗೆ ಮತ್ತೂಂದು ವರ್ಷ ಬಾಕಿ ಇದೆ. ಹೀಗಿರುವಾಗಲೇ ಕೃಷ್ಣೆಯ ಹೆಸರಿನಲ್ಲಿ ಹೋರಾಟ ಆರಂಭಗೊಂಡಿವೆ. ಅದರಲ್ಲೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೃಷ್ಣೆಯ ಜಲ ಸಂಗ್ರಹಿಸಿ, ತಮ್ಮ ಬೆಂಗಳೂರಿನ ಕಚೇರಿಯಲ್ಲಿಟ್ಟು ಚುನಾವಣೆ ಮುಗಿಯುವರೆಗೂ ಪೂಜೆ ಮಾಡುವ ಸಂಕಲ್ಪ ಮಾಡಿ, ಜನತಾ ಜಲಧಾರೆ ಎಂಬ ಯಾತ್ರೆ ಆರಂಭಿಸಿದೆ.

ಒಟ್ಟಾರೆ, ಚುನಾವಣೆ ಸಮೀಪಿಸುತ್ತಿದ್ದಂತೆ ಕೃಷ್ಣೆಗಾಗಿ ರಾಜಕಾರಣಿಗಳ ಕೂಗು ಒಂದೆಡೆ ಕೇಳಿ ಬರುತ್ತದೆ. ಆದರೆ, ಸಂತ್ರಸ್ತರ ಕೂಗು ಮಾತ್ರ ನಿರಂತರವಾಗಿದೆ.

 -ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next