Advertisement

ರಾಜ್ಯದ ಪ್ರಥಮ ನದಿ ಉತ್ಸವ ಸಂಪನ್ನ

04:51 AM Jan 14, 2019 | Team Udayavani |

ಮಂಗಳೂರು: ರಾಜ್ಯದಲ್ಲೇ ಪ್ರಥಮವಾಗಿ ಮಂಗಳೂರಿನಲ್ಲಿ  ಆಯೋಜನೆಗೊಂಡಿದ್ದ ಎರಡು ದಿನಗಳ ನದಿ ಉತ್ಸವ ನಿರೀಕ್ಷೆಗೂ ಮೀರಿದ ಜನಸ್ಪಂದನೆಯೊಂದಿಗೆ ರವಿವಾರ ಸಂಪನ್ನಗೊಂಡಿತು. 2 ದಿನವೂ ಭಾರೀ ಸಂಖ್ಯೆಯಲ್ಲಿ ಜನರು ನದಿ ಉತ್ಸವದಲ್ಲಿ ಭಾಗವಹಿಸಿದ್ದು ಜಿಲ್ಲೆಯಲ್ಲಿ  ಜಲ ಪ್ರವಾಸೋದ್ಯಮದ ಹೊಸ ಆಯಾಮ
ಸೃಷ್ಟಿಸುವಲ್ಲಿ  ಯಶಸ್ವಿಯಾಗಿದೆ.

Advertisement

ನದಿ ಉತ್ಸವ ಆರಂಭಗೊಂಡ ಶನಿವಾರ ಬಂಗ್ರಕೂಳೂರು, ಸುಲ್ತಾನ್‌ಬತ್ತೇರಿ ಹಾಗೂ ಕೂಳೂರಿನಿಂದ ಬೋಟ್‌ಗಳಲ್ಲಿ  ಸುಮಾರು 5,000ಕ್ಕೂ ಅಧಿಕ ಮಂದಿ ಸಂಚರಿಸಿದ್ದರು. ರವಿವಾರ ಬೆಳಗ್ಗಿನಿಂದಲೇ ಜನರು ಆಗಮಿಸತೊಡಗಿದ್ದು 15,000ಕ್ಕೂ ಅಧಿಕ ಮಂದಿ ದೋಣಿಗಳಲ್ಲಿ  ನದಿ ಉತ್ಸವ ನಡೆಯುವ ತಾಣಗಳಿಗೆ ಭೇಟಿ ನೀಡಿದ್ದರು. ದಕ್ಷಿಣ ಕನ್ನಡ ಅಲ್ಲದೆ ನೆರೆಯ ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದಲೂ  ಸಾವಿರಾರು ಜನರು ಆಗಮಿಸಿ ಸಂಭ್ರಮಿಸಿದರು.  

ಬಂಗ್ರಕೂಳೂರು ಹಾಗೂ ಸುಲ್ತಾನ್‌ ಬತ್ತೇರಿಯಲ್ಲಿ  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು  ನದಿ ಉತ್ಸವಕ್ಕೆ ಇನ್ನಷ್ಟು  ಮೆರುಗು ನೀಡಿತು. ಇದಲ್ಲದೆ  ನದಿಚಲನಚಿತ್ರಗಳನ್ನು ಪ್ರದರ್ಶಿಸಿ ನದಿ ಸಂರಕ್ಷಣೆ ಪ್ರಾಮುಖ್ಯದ ಬಗ್ಗೆ  ಅರಿವು ಮೂಡಿಸಲಾಯಿತು. 

ಎರಡು ದಿನಗಳ ಕಾಲ ಜಲ
ಸಂಬಂಧಿತ ಕ್ರೀಡೆಗಳನ್ನು ಆಯೋ ಜಿಸಲಾಗಿತ್ತು. ರೋಯಿಂಗ್‌, ಸ್ಟಾಂಡ್‌ ಆಫ್‌ ಫೆಡಲಿಂಗ್‌, ವಿಂಡ್‌ ಸರ್ಫಿಂಗ್‌ ಜೆಟ್ಸೆಕಿ, ಸ್ಪೀಡ್‌ಬೋಟು ಸೇರಿದಂತೆ ವಿವಿಧ ಜಲಕ್ರೀಡೆಗಳನ್ನು ಆಯೋಜಿಸಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.  ಸಾರ್ವಜನಿಕರು  ಜಲಕ್ರೀಡೆಗಳಲ್ಲಿ  ಭಾಗವಹಿಸಿ ಆನಂದಿಸಿದರು. ನದಿ ಕಿನಾರೆಯನ್ನು ವರ್ಣರಂಜಿತ ವಿದ್ಯುತ್‌ದೀಪಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿತ್ತು. 

ಪ್ರಥಮ ಬಾರಿ ಆಯೋಜನೆಗೊಂಡ ನದಿ ಉತ್ಸವಕ್ಕೆ  ನಿರೀಕ್ಷೆಗೂ ಮೀರಿ ಜನರ ಸ್ಪಂದನೆ ದೊರಕಿದೆ.  ಮುಂದಿನ ದಿನಗಳಲ್ಲಿ ಇದು ಇನ್ನಷ್ಟು  ವಿಸ್ತಾರಗೊಳ್ಳುವ ನಿಟ್ಟಿನಲ್ಲಿ ಇಲ್ಲಿ ವ್ಯವಸ್ಥಿತ ಜೆಟ್ಟಿಗಳ ನಿರ್ಮಾಣವಾಗಬೇಕಾಗಿದೆ. ಈ ದೃಷ್ಟಿಯಲ್ಲಿ  13 ಜೆಟ್ಟಿಗಳ ನಿರ್ಮಾಣಕ್ಕೆ  ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.
 ಶಶಿಕಾಂತ ಸೆಂಥಿಲ್‌, ದ.ಕ.ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next