Advertisement

ಪರಿಸರ ರಕ್ಷಣೆಯನ್ನು ಮರೆತರೆ ಗಂಡಾಂತರ

11:25 AM Sep 13, 2017 | |

ಬೆಂಗಳೂರು: ಸರ್ಕಾರ, ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಯುವ ಸಮೂಹ ಪರಿಸರ ಸಂರಕ್ಷಣೆಯನ್ನು ಸವಾಲಾಗಿ ಸ್ವೀಕರಿಸಿ, ದೊಡ್ಡ ಕ್ರಾಂತಿ ಮಾಡಬೇಕು ಎಂದು ಯುವ ಸಬಲೀಕರಣ, ಕ್ರೀಡಾ ಮತ್ತು ಮೀನುಗಾರಿಕೆ ಸಚಿವ ಪ್ರಮೋದ್‌ ಮಧ್ವರಾಜ್‌ ಕರೆ ನೀಡಿದರು.

Advertisement

ರಾಷ್ಟ್ರೀಯ ಸೇವಾ ಯೋಜನೆ, ಭಾರತೀಯ ರೆಡ್‌ಕ್ರಾಸ್‌, ಪರಿಸರ ನಿಸರ್ಗ ಸಂರಕ್ಷಣಾ ಸಂಸ್ಥೆ ವತಿಯಿಂದ ಮಂಗಳವಾರ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಪರಿಸರ ಮನನ ಹಾಗೂ ಯೂತ್‌ ರೆಡ್‌ಕ್ರಾಸ್‌ ಸಂಯೋಜಕರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರದ ಬಗ್ಗೆ ಎಚ್ಚರ ವಹಿಸದಿದ್ದರೆ ಇಡೀ ಮನುಕುಲವೇ ದೊಡ್ಡ ಗಂಡಾಂತರಕ್ಕೆ ಸಿಲುಕಲಿದೆ,’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

“ಎಲ್ಲೆಡೆ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಗ್ರಾಮ ಗ್ರಾಮಗಳ ನಡುವೆ, ತಾಲೂಕು ತಾಲೂಕುಗಳ ನಡುವೆ, ಜಿಲ್ಲೆ ಜಿಲ್ಲೆಗಳ ನಡುವೆ ಹಾಗೂ ರಾಜ್ಯ ರಾಜ್ಯಗಳ ನಡುವೆ ನೀರಿಗಾಗಿ ಯುದ್ಧ ನಡೆಯುವ ದಿನಗಳು ದೂರವಿಲ್ಲ. ಮುಂದಿನ ಹತ್ತಾರು ವರ್ಷದಲ್ಲಿ ನೀರಿಗಾಗಿಯೇ ಯುದ್ಧ ನಡೆಯುವ ಎಲ್ಲಾ ಮುನ್ಸೂಚನೆಗಳು ಇದೆ,’ ಎಂದು ಎಚ್ಚರಿಸಿದರು. 
ಭಾರತಕ್ಕೆ ಭೂತಾನ್‌ ಮಾದರಿಯಾಗಲಿ 

“ಟೈಮ್‌ಪಾಸ್‌ಗೆ ಪರಿಸರ ರಕ್ಷಣೆ, ಪ್ರಚಾರಕ್ಕಾಗಿ ವನಮಹೋತ್ಸವ ಮಾಡಿದರೆ ಭವಿಷ್ಯದ ಜನಾಂಗಕ್ಕೆ ಹಸಿರು ಪರಿಸರ ನೀಡಲು ಸಾಧ್ಯವಿಲ್ಲ. ನೀರಿಲ್ಲದೇ ಎಷ್ಟೇ ಆಸ್ತಿ ಮಾಡಿದರೂ ಏನೂ ಪ್ರಯೋಜವಾಗುವುದಿಲ್ಲ. ಭೂತಾನ್‌ ದೇಶವನ್ನು ಮಾದರಿಯಾಗಿ ತೆಗೆದುಕೊಂಡು ಕಾಡುಗಳನ್ನು ರಕ್ಷಣೆ ಮಾಡಬೇಕು.

ಭೂತಾನ್‌ನಲ್ಲಿ ನದಿಯ ಮೀನು ಹಿಡಿಯುವುದು, ಮರಳುಗಾರಿಕೆ ಹಾಗೂ ಮರ ಕಡಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರಿಂದಾಗಿಯೇ ಭೂತಾನ್‌ ಜಗತ್ತಿನ ಸಮೃದ್ಧ ರಾಷ್ಟ್ರ ವಾಗಿದೆ. ಭಾರತಕ್ಕೂ ಇದು ಪ್ರೇರಣೆಯಾಗಲಿ,’ ಎಂದರು.

Advertisement

ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಶೇ.33ರಷ್ಟು ಕಾಡು ಇತ್ತು. ಈಗ ಶೇ.7ಕ್ಕೆ ಇಳಿದಿದೆ. ಕರ್ನಾಟಕದಲ್ಲಿ ಶೇ.20ರಷ್ಟು ಕಾಡು ಉಳಿದಿದೆ. ನದಿ ಹಾಗೂ ಬೋರ್‌ವೆಲ್‌ ಬತ್ತುತ್ತಿದೆ. ರೈತರು ದುಸ್ತರ ಜೀವನ ನಡೆಸುತ್ತಿದ್ದಾರೆ. ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿ ಪರಿಸರ ರಕ್ಷಣೆ ಹೊಣೆ ಎಲ್ಲರೂ ಹೊರಬೇಕು ಎಂದು ಹೇಳಿದರು.

ಕರ್ನಾಟಕ ಚಿತ್ರಕಲಾ ಪರಿಷತ್ತು ಅಧ್ಯಕ್ಷ ಡಾ.ಬಿ.ಎಲ್‌.ಶಂಕರ್‌, ಬೆಂವಿವಿ ಕುಲಸಚಿವ ಡಾ.ಬಿ.ಕೆ.ರವಿ, ರಾಜ್ಯ ಎನ್‌ಎಸ್‌ಎಸ್‌ ಅಧಿಕಾರಿ ಗಣನಾಥ ಶೆಟ್ಟಿ ಎಕ್ಕಾರ, ಬೆಂವಿವಿ ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಡಾ.ಆರ್‌.ಶ್ರೀನಿವಾಸ್‌, ರೆಡ್‌ಕ್ರಾಸ್‌ ರಾಜ್ಯ ಘಟಕದ ಅಧ್ಯಕ್ಷ ಬಸೂರ್‌ ರಾಜೀವ್‌ ಶೆಟ್ಟಿ, ಪರಿಸರ ವಾದಿ ಈಶ್ವರ್‌ ಪ್ರಸಾದ್‌ ಮೊದಲಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next