Advertisement

ರಾಸಾಯನಿಕ ಗೊಬ್ಬರದಿಂದ ಅಪಾಯ ನಿಶ್ಚಿತ

10:35 AM Mar 25, 2022 | Team Udayavani |

ಹುಬ್ಬಳ್ಳಿ: ಅತ್ಯಧಿಕ ರಾಸಾಯನಿಕ ಬಳಕೆಯಿಂದ ಕೃಷಿ ಭೂಮಿ ಹಾಳಾಗುತ್ತಿದ್ದು, ರೈತರು ಎಚ್ಚೆತ್ತುಕೊಳ್ಳುವುದು ಅವಶ್ಯ ಎಂದು ಹನುಮನಟ್ಟಿ ಕೃಷಿ ಮಹಾವಿದ್ಯಾಲಯದ ಡೀನ್‌ ಚಿದಾನಂದ ಮನಸೂರ ಹೇಳಿದರು.

Advertisement

ಇಲ್ಲಿನ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಭಾಂಗಣದಲ್ಲಿ ಗುರುವಾರ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಕೃಷಿ ಇಂದು ಕವಲು ದಾರಿಯಲ್ಲಿದೆ. ಮಣ್ಣಿನಲ್ಲಿ ತೇವಾಂಶ ಅತ್ಯವಶ್ಯಕ. ಅದನ್ನು ಹಿಡಿದಿಟ್ಟುಕೊಳ್ಳುವಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. ಕೃಷಿಗೆ ಹೊಸ ಯೋಜನೆಗಳನ್ನು ರೂಪಿಸಬೇಕು. ನೈಸರ್ಗಿಕ ಕೃಷಿಗೆ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಸಂಗ್ರಹವಾಗುವ ತಾಜ್ಯವನ್ನು ಮರುಬಳಕೆ ಮಾಡಿಕೊಳ್ಳಬೇಕು ಎಂದರು.

ಸಣ್ಣ ರೈತರು ಸಾವಯವ ಕೃಷಿ ಮಾಡುವ ಮೂಲಕ ರಾಸಾಯನಿಕ ಬಳಕೆ ಕಡಿಮೆ ಮಾಡಬೇಕು. ರಾಸಾಯನಿಕ ಬಳಕೆಯಲ್ಲಿ ಸಮತೋಲನ ಬಳಕೆ ಮಾಡುತ್ತಿಲ್ಲ. ಭಾರತದ ಮಣ್ಣಿನಲ್ಲಿ ನೈಟ್ರೋಜನ್‌, ರಂಜಕ, ಪೊಟ್ಯಾಸಿಯಂ ಹಾಗೂ ಮಧ್ಯಮ ಪೋಷಕಾಂಶಗಳ ಕೊರತೆಯಿದೆ. ಅದನ್ನು ಸರಿಪಡಿಸುವಲ್ಲಿ ರೈತರು ಮುಂದಾಗಬೇಕೆಂದರು. ರಾಸಾಯನಿಕದ ಜೊತೆಗೆ ಕೊಟ್ಟಿಗೆ ಗೊಬ್ಬರವನ್ನು ಸಮಪ್ರಮಾಣದ ಬಳಸಿದ್ದಲ್ಲಿ ಯಾವುದೇ ಹಾನಿಯಿಲ್ಲ. ಯಾವ ಮಣ್ಣಿನಲ್ಲಿ ಯಾವ ಬೆಳೆ, ಎಷ್ಟು ಬೆಳೆ ಎಂಬುದನ್ನು ತಿಳಿದುಕೊಳ್ಳಬೇಕೆಂದರು.

ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ಜಿ.ಬಿ. ಗೌಡಪ್ಪಗೋಳ ಮಾತನಾಡಿ, ಸ್ವಾತಂತ್ರ್ಯದ ನಂತರ ಆಹಾರದ ಕೊರತೆ ನೀಗಿಸಲು ರಚಿಸಿದ ಹೊಸ ಕೃಷಿ ನೀತಿ ದೊಡ್ಡ ಕ್ರಾಂತಿ ಮಾಡಿತು. ಹಳ್ಳಿಗಳಲ್ಲಿ ಈಗಲೂ ಶೇ.50ರಷ್ಟು ಹೆಚ್ಚು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಯಥೇತ್ಛವಾಗಿ ರಸಾಯನಿಕ ಬಳಕೆಯಿಂದ ಮಣ್ಣು ಮೂಲ ಗುಣವನ್ನು ಕಳೆದುಕೊಳ್ಳುತ್ತಿದೆ. ದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ನದಿ, ಜಲಾಶಯ, ಕೆರೆ ಅಪಾರ ಜಲ ಸಂಪತ್ತು ಹೊಂದಿದ್ದರೂ ಸದ್ಬಳಿಕೆಯಾಗುತ್ತಿಲ್ಲ. ಎಂ.ಎಸ್‌. ಸ್ವಾಮಿನಾಥನ ವರದಿ ಅನುಷ್ಠಾನಗೊಂಡು ರೈತರ ಬಲವರ್ಧನೆಗೆ ಮುಂದಾಗಬೇಕು ಎಂದರು.

Advertisement

ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ ಜವಳಿ, ಸಿ.ಎನ್‌. ಕರಿಕಟ್ಟಿ ಮಾತನಾಡಿದರು. ಹಾವೇರಿ ರೈತ ಉತ್ಪಾದನಾ ಸಂಘಟನೆ ಮುಖ್ಯಸ್ಥ ಚಂದ್ರಕಾಂತ ಸಂಗೂರ ಮಾತನಾಡಿದರು.

ಕೆ.ನಾಗರಾಜ, ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ ಸೇರಿದಂತೆ ಮೊದಲಾದವರು ಇದ್ದರು.

ಸರಕಾರ ಸಾಧನೆ ಮಾಡಿದವರಿಗೆ ಭಾರತ ರತ್ನ ನೀಡಿ ಗೌರವಿಸುತ್ತಿದೆ. ಅದೇ ರೀತಿ ಹಸಿರು ಕ್ರಾಂತಿ ಹರಿಕಾರ ಎಂದು ಗುರುತಿಸಿಕೊಂಡಿರುವ ಸ್ವಾಮಿನಾಥನ್‌ ಅವರಿಗೆ ಭಾರತ ರತ್ನ ನೀಡಬೇಕಾಗಿತ್ತು. ಆದರೆ, ಇದುವರೆಗೂ ಸರಕಾರದ ಕಣ್ಣಿಗೆ ಸ್ವಾಮಿನಾಥನ್‌ ಅವರ ಸಾಧನೆ ಬಿದ್ದಿಲ್ಲ ಅನ್ನಿಸುತ್ತಿದೆ. ಇಂಥವರಿಗೆ ಪ್ರಶಸ್ತಿ ಸಿಗಬೇಕೆಂದು ಹನುಮನಟ್ಟಿ ಕೃಷಿ ಮಹಾವಿದ್ಯಾಲಯದ ಡೀನ್‌ ಚಿದಾನಂದ ಮನಸೂರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next