ಹಾವೇರಿ: ನಗರದ ವಿವಿಧ ಬಡಾವಣೆ ಹಾಗೂ ವಿವಿಧ ಸ್ಥಳಗಳಲ್ಲಿ ಅಳವಡಿಸಿರುವ ವಿದ್ಯುತ್ ಸ್ವಿಚ್‌ಬೋರ್ಡ್‌ಗಳು ಜನ-ಜಾನುವಾರುಗಳ ಪ್ರಾಣಕ್ಕೆ ಸಂಚಕಾರ ಮೂಡಿವಂತಿದ್ದು, ಪಾದಾಚಾರಿಗಳಲ್ಲೂ ಆತಂಕ ಮೂಡಿಸಿದೆ.
ಸ್ಥಳೀಯ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಕಂಬಗಳಲ್ಲಿ ಬೀದಿದೀಪದ ನಿರ್ವಹಣೆಗೆ ಸ್ವಿಚ್ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ, ನಿರ್ವಹಣೆ ಕೊರತೆಯಿಂದ ಅನೇಕ ಸ್ವಿಚ್‌ಬೋರ್ಡ್‌ಗಳು ಹಾಳಾಗಿದ್ದು, ವೈಯರ್‌ಗಳು ಹೊರಬಂದಿವೆ. ಈ ವೈಯರ್‌ಗಳಲ್ಲಿ ವಿದ್ಯುತ್ ಪ್ರವಹಿಸುತ್ತಿವೆ. ಇಂಥ ಸ್ವಿಚ್ ಬೊರ್ಡ್‌ಗಳು ಮಕ್ಕಳು, ಸಾರ್ವಜನಿಕರ ಕೈಗೆಟುಕುವಂತಿರುವುದು ಅಪಾಯ ತಂದೊಡ್ಡುವ ಸಾಧ್ಯತೆ ಇದೆ.
ಸ್ಥಳೀಯ ವಿದ್ಯಾನಗರದ 3ನೇ ಕ್ರಾಸ್ ಫೆಡರಲ್ ಬ್ಯಾಂಕ್ ಪಕ್ಕದ ರಸ್ತೆ, ವಿದ್ಯಾನಗರದ 3ನೇ ಕ್ರಾಸ್ ಮೇನ್‌ರೋಡ್, ಪಿ.ಬಿ.ರಸ್ತೆ, ಶಿವಾಜಿನಗರ 4ನೇ ಕ್ರಾಸ್ ಹತ್ತಿರ, ಸಂಚಾರಿ ಪೊಲೀಸ್ ಠಾಣೆ ಎದುರು, ಬಸವೇಶ್ವರ ನಗರ, ಅಶ್ವಿನಿ ನಗರ, ನಾಗೇಂದ್ರನಮಟ್ಟಿ, ಶಿವಬಸವ ನಗರ, ಕಲ್ಲುಮಂಟಪ ರೋಡ್, ಎಂ.ಜಿ.ರಸ್ತೆ, ತರಕಾರಿ ಮಾರುಕಟ್ಟೆ, ಹೊಸನಗರ, ಮಂಜುನಾಥ ನಗರ ಸೇರಿದಂತೆ ನಗರ ಬಹುತೇಕ ಕಡೆಗಳಲ್ಲಿನ ಸ್ವಿಚ್‌ಬೋರ್ಡ್‌ಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಹಾಳಾದ ಸ್ವಿಚ್‌ಬೋರ್ಡ್: ನಗರದ ವಿವಿಧ ಬಡಾವಣೆಗಳಲ್ಲಿ ಅಳವಡಿಸಿರುವ ಸ್ವಿಚ್‌ಬೋರ್ಡ್‌ಗಳು ತುಕ್ಕು ಹಿಡಿದು ಹಾಳಾಗಿವೆ. ಅಲ್ಲದೇ ಬಹುತೇಕ ಸ್ವಿಚ್‌ಬೋರ್ಡ್ ಗಳಿಗೆ ಬಾಗಿಲು ಇಲ್ಲದೇ ತೆರೆದುಕೊಂಡಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿವೆ. ಇನ್ನು ಕೆಲವುಕಡೆಗಳಲ್ಲಿ ಸಿಬ್ಬಂದಿ ಬೋರ್ಡ್‌ನಲ್ಲಿ ಸ್ವಿಚ್‌ಆನ್ ಮಾಡಿ ಬಾಗಿಲು ಹಾಕದೇ ಹಾಗೆ ಹೊರಟು ಹೋಗುತ್ತಿದ್ದಾರೆ. ಕೆಲವು ಕಡೆಗಳಲ್ಲಿ ವೈಯರ್‌ಗಳು ಹೊರಗೆ ಬಿದ್ದಿದ್ದು ಅದನ್ನು ಸರಿಪಡಿಸುವ ಗೋಜಿಗೆ ಯಾರೂ ಹೋಗುತ್ತಿಲ್ಲ. ಇದರಿಂದಾಗಿ ನಗರದಲ್ಲಿ ವಿದ್ಯುತ್ ಸ್ವಿಚ್‌ಬೋರ್ಡ್‌ಗಳಿಂದ ಜಾನುವಾರು ಹಾಗೂ ಜನರ ಪ್ರಾಣಕ್ಕೆ ಕಂಟಕಪ್ರಾಯವಾಗುವ ಸಾಧ್ಯತೆ ಇದೆ.
ನಗರದಲ್ಲಿ ಸುಮಾರು 20ಸಾವಿರಕ್ಕೂ ಹೆಚ್ಚು ವಿದ್ಯುತ್ ಕಂಬಗಳಿವೆ. ಅವುಗಳಲ್ಲಿ ಕೆಲವೊಂದು ಪ್ರಮುಖ ಸ್ಥಳಗಳಲ್ಲಿ ಸ್ವಿಚ್ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಆದರೆ, ಇಲ್ಲಿ ಸಾರ್ವಜನಿಕರ ಗಮನಕ್ಕೆ ಬರುವಂತೆ ಎಚ್ಚರಿಕೆಯ ನಾಮಫಲಕಗಳನ್ನು ಅಳವಡಿಸಿಲ್ಲ. ಇನ್ನೂ ಕೆಲವಡೆ ನಗರದಲ್ಲಿ ವಿದ್ಯುತ್ ಪರಿವರ್ತಕಗಳ ಸುತ್ತ ಹಾಕಲಾಗಿರುವ ತಂತಿಬೇಲಿ ಸಹ ಹಾಳಾಗಿದ್ದು, ದನಕರುಗಳು ಒಳಗಡೆ ಪ್ರವೇಶ ಮಾಡುವಂತಾಗಿದೆ. ಅಪಾಯ ಆಹ್ವಾನಿಸುತ್ತಿರುವ ವಿದ್ಯುತ್ ಕಂಬಗಳ ಸ್ವಿಚ್ ಬೋರ್ಡ್‌ಗಳನ್ನು ದುರಸ್ತಿಗೊಳಿಸಿ ಅಪಾಯ ತಪ್ಪಿಸಬೇಕಾಗಿದೆ.