Advertisement

ಧೋನಿ ಬ್ಯಾಟಿಂಗ್‌ ಫಾರ್ಮ್ ಪುಣೆ ಸೂಪರ್‌ಜೈಂಟ್‌ಗೆ ಚಿಂತೆ

10:46 AM Apr 22, 2017 | Karthik A |

ಪುಣೆ: ಗೆಲುವಿಗಾಗಿ ಒದ್ದಾಡುತ್ತಿರುವ ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ತಂಡವು ಐಪಿಎಲ್‌ 10ರ ಶನಿವಾರದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಎದುರಿಸಲಿದೆ. ಎಂಎಸ್‌ ಧೋನಿ ಅವರ ಫಾರ್ಮ್ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ. ಒಂದು ವೇಳೆ ಅವರು ಮಿಂಚು ಹರಿಸಿದರೆ ಪುಣೆ ಗೆಲುವಿನ ಟ್ರ್ಯಾಕ್‌ಗೆ ಮರಳುವ ಸಾಧ್ಯತೆಯಿದೆ.

Advertisement

ಐಪಿಎಲ್‌ನಲ್ಲಿ ಎರಡನೇ ಋತುವಿನಲ್ಲಿ ಆಡುತ್ತಿರುವ ಪುಣೆ ತಂಡವು ಸದ್ಯ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಸೋತಿರುವ ಪುಣೆ ಎರಡರಲ್ಲಿ ಜಯ ಸಾಧಿಸಿದೆ. ಸತತ ಮೂರು ಪಂದ್ಯಗಳಲ್ಲಿ ಸೋತಿರುವ ಸ್ಟೀವನ್‌ ಸ್ಮಿತ್‌ ನಾಯಕತ್ವದ ಪುಣೆ ತಂಡವು ರಾಯಲ್‌ ಚಾಲೆಂಜರ್ಸ್ ಬೆಂಗಳೂರ್‌ ತಂಡದೆದುರು ಗೆಲ್ಲುವ ಮೂಲಕ ಸೋಲಿನ ಸರಮಾಲೆಗೆ ಅಂತ್ಯ ಹಾಡಿತ್ತು. ಇದೀಗ ಶನಿವಾರದ ಪಂದ್ಯದಲ್ಲಿಯೂ ಪುಣೆ ಗೆಲುವು ಒಲಿಸಿಕೊಳ್ಳುವ ಉತ್ಸಾಹದಲ್ಲಿದೆ.

ಮಾಜಿ ನಾಯಕ ಧೋನಿ ಅವರ ಫಾರ್ಮ್ನಿಂದ ಪುಣೆ ತಂಡ ಕಳವಳಗೊಂಡಿದೆ. ಆಡಿದ ಐದು ಪಂದ್ಯಗಳಲ್ಲಿ ಅವರು 12*, 5, 11, 5 ಮತ್ತು 28 ರನ್‌ ಗಳಿಸಿದ್ದರು. ಹಿಂದಿನ ಅವರ ಸ್ಫೋಟಕ ಆಟ ಯಾವುದೇ ಪಂದ್ಯದಲ್ಲಿ ಕಂಡು ಬಂದಿಲ್ಲ. ಪಂದ್ಯ ಗೆಲ್ಲಿಸಿಕೊಡಬಲ್ಲ ಆಟಗಾರರಲ್ಲಿ ಒಬ್ಬರೆಂಬ ಖ್ಯಾತಿಯ ಧೋನಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕರಾಗಿದ್ದ ವೇಳೆ ಹಲವು ಪಂದ್ಯಗಳಲ್ಲಿ ತನ್ನ ಅಮೋಘ ಆಟದಿಂದಾಗಿ ಗೆಲುವು ದೊರಕಿಸಿಕೊಟ್ಟಿದ್ದರು. ಮುಂದಿನ ಪಂದ್ಯಗಳಲ್ಲಿಯಾದರೂ ಧೋನಿ ಮಿಂಚಿನಾಟ ಪ್ರದರ್ಶಿಸುವ ವಿಶ್ವಾಸ ವನ್ನು ಪುಣೆ ಇಟ್ಟುಕೊಂಡಿದೆ.

ನಾಯಕ ಸ್ಟೀವನ್‌ ಸ್ಮಿತ್‌ ಮತ್ತು ಅಜಿಂಕ್ಯ ರಹಾನೆ ಮಾತ್ರ ಪುಣೆ ತಂಡದ ಬ್ಯಾಟಿಂಗ್‌ ಶಕ್ತಿಯಾಗಿ ಗೋಚರಿಸಿದ್ದಾರೆ. ಕಳೆದ ಪಂದ್ಯದ ಬಳಿಕ ಸ್ಮಿತ್‌ ತನ್ನ ಪತ್ನಿ ಮತ್ತು ಮಗುವಿನೊಂದಿಗೆ ಆರು ದಿನ ದುಬೈ ಪ್ರವಾಸಗೈದಿದ್ದರು. ಇದೀಗ ಮತ್ತೆ ತಂಡವನ್ನು ಸೇರಿಕೊಂಡಿರುವ ಅವರು ಹೊಸ ಉತ್ಸಾಹದೊಂದಿಗೆ ಆಡುವ ನಿರೀಕ್ಷೆಯಿದೆ. ಈ ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಇಂದೋರ್‌ನಲ್ಲಿ ಪಂಜಾಬ್‌ ವಿರುದ್ಧ ನಡೆದ ಪಂದ್ಯದಲ್ಲಿ ಅರ್ಧಶತಕ ಹೊಡೆದಿದ್ದರು. ಬೌಲಿಂಗ್‌ನಲ್ಲಿ 8 ವಿಕೆಟ್‌ ಪಡೆದಿರುವ ಲೆಗ್‌ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ತಂಡದ ಯಶಸ್ವಿ ಬೌಲರ್‌ ಆಗಿದ್ದಾರೆ. ಶಾದೂìಲ್‌ ಠಾಕುರ್‌ ಮತ್ತು ಬೆನ್‌ ಸ್ಟೋಕ್ಸ್‌ ತಲಾ ನಾಲ್ಕು ವಿಕೆಟ್‌ ಕಿತ್ತಿ ದ್ದಾರೆ. 

ಹೈದರಾಬಾದ್‌ ಸ್ಥಿರ ನಿರ್ವಹಣೆ
ಸ್ಥಿರ ನಿರ್ವಹಣೆ ನೀಡುತ್ತಿರುವ ಹಾಲಿ ಚಾಂಪಿಯನ್‌ ಹೈದರಾಬಾದ್‌ ಆಡಿದ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಭರ್ಜರಿ ಆರಂಭಗೈದಿದ್ದ ಹೈದರಾಬಾದ್‌ ತಂಡವು ಸತತ ಎರಡು ಪಂದ್ಯಗಳಲ್ಲಿ ಮುಂಬೈ ಮತ್ತು ಕೆಕೆಆರ್‌ ತಂಡದೆದುರು ಸೋತು ಆಘಾತಕ್ಕೆ ಒಳಗಾಗಿತ್ತು. ಆದರೆ ಮತ್ತೆ ಪಂಜಾಬ್‌ ಮತ್ತು ಡೆಲ್ಲಿ ವಿರುದ್ಧ ಜಯಭೇರಿ ಬಾರಿಸಿ ಗೆಲುವಿನ ಟ್ರ್ಯಾಕ್‌ಗೆ ಮರಳಿತ್ತು. ಹೆಚ್ಚಿನ ಪಂದ್ಯಗಳಲ್ಲಿ ನಾಯಕ ಡೇವಿಡ್‌ ವಾರ್ನರ್‌ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡಿದ್ದರು. ಅವರಿಗೆ ಶಿಖರ್‌ ಧವನ್‌ ಉತ್ತಮ ಬೆಂಬಲ ನೀಡಿದ್ದರು. ಅವರಿಬ್ಬರು 200ಕ್ಕಿಂತ ಹೆಚ್ಚಿನ ರನ್‌ ಗಳಿಸಿದ್ದು ಮುಂದಿನ ಪಂದ್ಯಗಳಲ್ಲಿ ಇದೇ ಫಾರ್ಮ್ ಮುಂದುವರಿಸುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next